ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೀದರ್ ಜಿಲ್ಲಾಡಳಿತದಿಂದ ನಗರದಲ್ಲಿ ಆ.13ರಂದು ರಾಷ್ಟ್ರೀಯ ಏಕತಾ ನಡಿಗೆ (ವಾಕಥಾನ್) ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಾಕಥಾನ್ ಅಂಗವಾಗಿ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆ.13 ರಂದು ಬೆಳಗ್ಗೆ 7 ಗಂಟೆಗೆ ಬೀದರ ಕೋಟೆಯಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ರಾಷ್ಟ್ರೀಯ ಏಕತಾ ನಡಿಗೆ (ವಾಕಥಾನ್) ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಬೀದರ್ ನಗರದ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಯೊಂದಿಗೆ ಭಾಗವಹಿಸಬೇಕೆಂದರು.
ಸ್ವಾತಂತ್ರ್ಯತ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಜ್ಞಾನ ಸುಧಾ, ಗುರುನಾನಕ್ ಕಾಲೇಜು, ಶಾಹೀನ್ ಕಾಲೇಜು, ಬಿ.ವಿ.ಬಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.ಆ.13ರಂದು ಬೆಳಗ್ಗೆ 7 ಗಂಟೆಗೆ ವಾಕಥಾನ್ ಕಾರ್ಯಕ್ರಮ ಇರುವುದರಿಂದ ಮುಂಚಿತವಾಗಿ 6:30 ಗಂಟೆಗೆ ಮಕ್ಕಳನ್ನು ಬೀದರ ಕೋಟೆಗೆ ಕರೆ ತರಬೇಕು. ವಾಕಥಾನ್ ಬೀದರ್ ಕೋಟೆಯಿಂದ ಆರಂಭವಾಗಿ ಮಹ್ಮದ್ ಗವಾನ ಮದರಸಾ, ಡಾ.ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ ಹಾಗೂ ಹರಳಯ್ಯ ವೃತ್ತದ ಮಾರ್ಗವಾಗಿ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ನಡೆಯಲಿದೆ ಎಂದರು.
ಶಾಲಾ ವಾಹನಗಳಲ್ಲಿ ಸುರಕ್ಷಿತವಾಗಿ ಮಕ್ಕಳನ್ನು ಕರೆತಂದು ಮತ್ತೆ ತಮ್ಮ ಕಾಲೇಜುಗಳಿಗೆ ಅವರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಆಯಾ ಕಾಲೇಜಿನ ಶಿಕ್ಷಕರದ್ದಾಗಿದೆ ಎಂದು ಹೇಳಿದರು.ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾಂತ ಶಾಹಬಾದಕರ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕರಾದ ಸುರೇಖಾ, ನೌಕರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ್ ಗಂಧಗೆ, ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ಸುವರ್ಣ, ವಿರೂಪಾಕ್ಷ ಗಾದಗಿ, ಶಿವಶಂಕರ ಟೋಕರೆ ಸೇರಿದಂತೆ ಜಿಲ್ಲಾಮಟ್ಟದ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ 9ಬಿಡಿಆರ್58ಬೀದರ್ ಜಿಲ್ಲಾಡಳಿತದಿಂದ ನಗರದಲ್ಲಿ ಆ.13 ರಂದು ನಡೆಯಲಿರುವ ರಾಷ್ಟ್ರೀಯ ಏಕತಾ ನಡಿಗೆ (ವಾಕಥಾನ್) ಕಾರ್ಯಕ್ರಮದ ಕುರಿತು ಅಪರ ಜಿಲ್ಲಾಧಿಕಾರಿ ಸಭೆ ನಡೆಸಿದರು.