ಓನಕೆ ಓಬವ್ವ ಎಂದರೆ ಸ್ತ್ರೀ ಸಬಲೀಕರಣದ ಶಕ್ತಿ: ಡೀಸಿ ಲತಾ ಕುಮಾರಿOnake Obavva means the power of women empowerment: DC Latha Kumari

| Published : Nov 12 2025, 01:45 AM IST

ಓನಕೆ ಓಬವ್ವ ಎಂದರೆ ಸ್ತ್ರೀ ಸಬಲೀಕರಣದ ಶಕ್ತಿ: ಡೀಸಿ ಲತಾ ಕುಮಾರಿOnake Obavva means the power of women empowerment: DC Latha Kumari
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮಕ್ಕೆ ಮೊದಲು ಓನಕೆ ಓಬವವ್ವರ ಭಾವಚಿತ್ರದೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ಕೊಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ನಂತರ ಅಂಬೇಡ್ಕರ್ ಭವನದ ಆವರಣದಲ್ಲಿ ಕೊನೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಓನಕೆ ಓಬವ್ವ ಅವರ ಸಾಹಸ ಕಥೆ ಕೇಳಿದರೆ ರೋಮಾಂಚನವಾಗುತ್ತದೆ. ಧೈರ್ಯ, ಶಕ್ತಿ, ದೇಶಭಕ್ತಿ, ಸಮಯಪ್ರಜ್ಞೆ ಮತ್ತು ಅಪ್ರತಿಮ ಸಾಹಸಗಳಿಂದ ಅವರು ಮಹಿಳಾ ಸಬಲೀಕರಣದ ಜೀವಂತ ಪ್ರತೀಕವಾಗಿ ಉಳಿದಿದ್ದಾರೆ. ಓನಕೆ ಓಬವ್ವ ಎಂದರೆ ಸಾಹಸದ ಸಂಕೇತ. ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಣೆಯ ದೀಪ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಬಣ್ಣಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವೀರವನಿತೆ ಓನಕೆ ಓಬವ್ವ ಜಯಂತಿಯನ್ನು ದೀಪ ಬೆಳಗಿ ಉದ್ಘಾಟಿಸಿ ನಂತರ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಚಿತ್ತದ ನಿಗ್ರಹ, ಬುದ್ಧಿವಂತಿಕೆ ಹಾಗೂ ಅಚಲ ಮನೋಬಲದಿಂದ ಓಬವ್ವ ಒಬ್ಬರೇ ಶತ್ರುಸೇನೆಯ ವಿರುದ್ಧ ನಿಂತು ಹೋರಾಡಿದ ಸಾಹಸ ಇಂದಿಗೂ ಜನರ ಹೃದಯದಲ್ಲಿ ಕೆತ್ತನೆಯಾಗಿದೆ. ಕಲ್ಲಿನಲ್ಲೇ ಕೆತ್ತಿದ ಶಿಲ್ಪಗಳಿಗಿಂತ ಜನಮನದಲ್ಲಿ ಉಳಿದ ಓಬವ್ವನ ಕಥೆ ಹೆಚ್ಚು ಅಮರವಾಗಿದೆ. ಇಂದು ನೂರಾರು ವರ್ಷಗಳಾದರೂ, ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲೂ ಓಬವ್ವನ ಆತ್ಮಸ್ಫೂರ್ತಿ ಜೀವಂತವಾಗಿದೆ. ಈಗ ಕಾಲ ಬದಲಾಗಿದ್ದು, ಇಂದಿನ ಹೆಣ್ಣುಮಕ್ಕಳಿಗೆ ಓನಕೆ ಬದಲು ಪೆನ್ನನ್ನು ಹಿಡಿಯುವ ಸಮಯ ಬಂದಿದೆ. ಶಿಕ್ಷಣವೇ ಅವರ ಶಕ್ತಿ, ಜ್ಞಾನವೇ ಅವರ ಆಯುಧ. ನಿಜವಾದ ಶಕ್ತಿ ಎಂದರೆ ಕೇವಲ ಶತ್ರುವನ್ನು ಹತಮಾಡುವುದು ಅಲ್ಲ, ಅದು ಅಜ್ಞಾನ, ಭಯ, ಅವಲಂಬನೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯ ಎಂದು ಕಿವಿಮಾತು ಹೇಳಿದರು. ಹತ್ತು ಜನ ಹಿಂದಿದ್ದರೆ ನಾಯಕತ್ವವಲ್ಲ, ಒಬ್ಬಳೇ ನಿಂತು ಸತ್ಯದ ಪರ ಹೋರಾಡುವುದೇ ನಾಯಕತ್ವ ಎಂಬ ಸಂದೇಶ ಓಬವ್ವನ ಕಥೆ ಸಾರುತ್ತದೆ. ಹೆಣ್ಣುಮಕ್ಕಳು ಹೆದರದೆ ಮುಂದೆ ಬರಬೇಕು, ದುರ್ಬಲತೆ ಎಂಬ ಭಾವನೆ ನಿಲ್ಲಿಸಬೇಕು. ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಶಿಕ್ಷಣವೇ ನಿಜವಾದ ಸಬಲೀಕರಣದ ದಾರಿ ಎಂದು ಸಲಹೆ ನೀಡಿದರು.

ಓಬವ್ವ ಕೇವಲ ಇತಿಹಾಸದ ಪಾತ್ರವಲ್ಲ, ಅವಳು ಬದುಕಿನ ಪಾಠ. ಇಂದಿನ ಯುವತಿಯರು ಓನಕೆ ಬದಲಿಗೆ ಪೆನ್ನು ಹಿಡಿದು ಜ್ಞಾನೋದಯದ ಹಾದಿಯಲ್ಲಿ ನಡೆಯಬೇಕಾಗಿದೆ. ಅದೇ ಅವರ ನಿಜವಾದ ಶಕ್ತಿ, ಅದೇ ಓಬವ್ವನ ಜಯಂತಿಗೆ ತಕ್ಕ ಗೌರವ ಎಂದು ತಿಳಿಸಿದರು.

ಹೈದರ್ ಆಲಿಯ ಗುಪ್ತಚಾರಿಗಳು ಚಿತ್ರದುರ್ಗದ ಕೋಟೆಗೆ ಪ್ರವೇಶಿಸಲು, ಚಿತ್ರದುರ್ಗದ ಕೋಟೆಯಲ್ಲಿ ಒಂದು ಸಣ್ಣ ರಂಧ್ರ ವನ್ನು ರಹಸ್ಯ ದಾರಿಯಾಗಿ ಕಂಡುಹಿಡಿದರು. ಇದನ್ನು ತಿಳಿದ ಹೈದರ್ ಆಲಿ ತನ್ನ ಸೈನ್ಯವನ್ನು ಈ ರಹಸ್ಯ ದಾರಿಯಿಂದ ಕೋಟೆಯೊಳಗೆ ಕಳುಹಿಸಲು ಆದೇಶಿಸಿದನು. ಅಲ್ಲಿನ ಪ್ರಾಂತದ ವ್ಯಕ್ತಿಯಾಗಿದ್ದ ಕಹಳೆ ಮುದ್ದ ಹನುಮ, ಓಬವ್ವನ ಪತಿ, ಭದ್ರತೆಯ ದೃಷ್ಟಿಯಿಂದ ಆತ ನಿಯೋಜಿತನಾಗಿದ್ದ. ಒಂದು ದಿನ, ಮುದ್ದ ಹನುಮ ಊಟಕ್ಕಾಗಿ ಮನೆಗೆ ಹೋದಾಗ, ಓಬವ್ವ ನೀರಿನ ಅಗತ್ಯಕ್ಕಾಗಿ ಹತ್ತಿರದ ಕೆರೆಗೆ ಹೋದಳು. ಅವಳು ನೀರು ತರಲು ಹೋದಾಗ ಸುತ್ತಲೂ ಕೆಲವು ಗೊಣಗಾಟದ ಶಬ್ದಗಳನ್ನು ಕೇಳಿತು. ಮೊದಲು ಭಯಗೊಂಡಿದ್ದರೂ, ತಕ್ಷಣ ಧೈರ್ಯವನ್ನೂ ಇಟ್ಟುಕೊಂಡು, ಆ ಸೈನಿಕರನ್ನು ತಡೆಯಲು ಏನಾದರೂ ಮಾಡಲು ನಿಶ್ಚಯಿಸಿಕೊಂಡಳು. ಹತ್ತಿರದಲ್ಲಿದ್ದ ಓನಕೆಯನ್ನು ಹಿಡಿದುಕೊಂಡು, ಬಂಡೆಯ ಹತ್ತಿರ ರಹಸ್ಯ ರಂಧ್ರದ ಬಳಿ ಶತ್ರುಗಳಿಗಾಗಿ ಕಾದು ಕುಳಿತಳು. ಮೊದಲ ಸೈನಿಕನು ರಂಧ್ರದ ಮೂಲಕ ತೊಳಗಾಗುತ್ತಿದ್ದಂತೆ, ಓಬವ್ವ ಆ ಓನಕೆಯಿಂದ ಅವನ ತಲೆಗೆ ಹೊಡೆದು, ಶಬ್ದ ಮಾಡದೆ ಅವನ ದೇಹವನ್ನು ಬಂಡೆಯ ಹಿಂದೆ ಎಳೆದುಹಾಕಿದಳು. ಆಕೆಯು ಈ ರೀತಿಯಲೇ ಪ್ರತಿಯೊಬ್ಬ ಸೈನಿಕನನ್ನೂ ಸತತವಾಗಿ ಹೊಡೆದು ಕೊಂದಳು, ಹೀಗಾಗಿ ಅಲ್ಲಿ ಸೈನಿಕರ ಶವಗಳ ಗುಡ್ಡವೇ ನಿರ್ಮಿತವಾಯಿತು.ಒಳಗಡೆ ಇದ್ದ ಮೇಲೂ ಕಾವಲುಗಾರ ಮುದ್ದ ಹನುಮ ತನ್ನ ಪತ್ನಿ ಕಾಣದೆ ಇರುವುದನ್ನು ಗಮನಿಸಿ, ಹೊರಗೆ ಬಂದು ನೋಡಿದಾಗ ಓಬವ್ವ ತನ್ನ ಶೌರ್ಯದಿಂದ ಅನೇಕ ಸೈನಿಕರನ್ನು ಹೋರಾಡಿ ಕೊಂದಿರುವುದನ್ನು ಕಂಡನು. ಆತ ಶೀಘ್ರವೇ ಬೆಟ್ಟದ ಮೇಲೆ ಹೋಗಿ ರಾಜನಿಗೆ ತಕ್ಷಣವೇ ಆಕ್ರಮಣದ ಎಚ್ಚರಿಕೆಯನ್ನು ನೀಡಲು ಕಹಳೆ ಊದಿದನು ಎಂದು ಹಿಂದಿನ ಇತಿಹಾಸದ ಕಥೆಯನ್ನು ಇದೆ ವೇಳೆ ಸ್ಮರಿಸಿದರು.

ಕಾರ್ಯಕ್ರಮಕ್ಕೆ ಮೊದಲು ಓನಕೆ ಓಬವವ್ವರ ಭಾವಚಿತ್ರದೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ಕೊಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ನಂತರ ಅಂಬೇಡ್ಕರ್ ಭವನದ ಆವರಣದಲ್ಲಿ ಕೊನೆಗೊಳಿಸಿದರು.

ಅಪರ ಜಿಲ್ಲಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಗೀತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಕಲ್ಬುರ್ಗಿಯ ವಿಠಲ್ ವರ್ಗನ್, ಆರ್.ಪಿ.ಐ. ಸತೀಶ್, ಶಿವಮ್ಮ ಇತರರು ಉಪಸ್ಥಿತರಿದ್ದರು.