ಸಾರಾಂಶ
ಬಡದಾಳ ಗ್ರಾಮದ ಸಂಪರ್ಕ ರಸ್ತೆಗಳ ದುರಸ್ತಿಗಾಗಿ ಬಡದಾಳ ನಾಗರಿಕ ಹೋರಾಟ ಸಮಿತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು 8ನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು ದಿನಕ್ಕೊಂದು ಅಪಘಾತಗಳು ಸಂಭವಿಸುತ್ತಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.ಬಡದಾಳ ಗ್ರಾಮದ ಯುವಕ ರಾಹುಲ್ ಮುರಗಾನೂರ ಬಳೂರ್ಗಿಯಿಂದ ಬಡದಾಳ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಬರುವಾಗ ಹದಗೆಟ್ಟ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲಾಗದೆ ಮುಗುಚಿ ಬಿದ್ದು ಮುಂಗೈ, ಕೈ ಬೆರಳುಗಳಿಗೆ ಗಂಭೀರ ರಕ್ತಗಾಯಗಳನ್ನು ಮಾಡಿಕೊಂಡಿದ್ದಾನೆ. ಅಲ್ಲದೆ ಎದೆ ಭಾಗಕ್ಕೆ ಬಲವಾದ ಒಳಪೆಟ್ಟು ಬಿದ್ದಿದ್ದು ಅಸ್ವಸ್ಥಗೊಂಡಿದ್ದಾನೆ. ಬಡದಾಳ ಗ್ರಾಮದ ಸಂಪರ್ಕ ರಸ್ತೆಗಳ ದುರಸ್ತಿಗಾಗಿ ಬಡದಾಳ ನಾಗರಿಕ ಹೋರಾಟ ಸಮಿತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು 8ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟೇಲ್ಲಾ ಒಂದು ಗ್ರಾಮದ ಸಂಪರ್ಕ ರಸ್ತೆಗಾಗಿ ನಡೆಯುತ್ತಿದ್ದರೂ ಕೂಡ ಯಾರೊಬ್ಬರೂ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಜನ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಧರಣಿ ಸ್ಥಳಕ್ಕೆ 2ನೇ ದಿನ ಅಧಿಕಾರಿಗಳು ಬಂದು ಸೋಮವಾರ ಬಳೂರ್ಗಿ ರಸ್ತೆಯ ಟೆಂಡರ್ ಆಗಿದೆ, ಸೋಮವಾರ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿ ಹೋಗಿದ್ದರು. ಆದರೆ ಇನ್ನೂ ಕಾಮಗಾರಿ ಆರಂಭಿಸುವ ಕುರಿತು ಯಾರೊಬ್ಬರೂ ತಲೆ ಕೆಡಸಿಕೊಳ್ಳುತ್ತಿಲ್ಲ. ಇದರಿಂದ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದು ಹೋಗುತ್ತಿದೆ. ಜನಪ್ರತಿನಿಧಿಗಳು ಸ್ಪಂದಿಸದೇ ಹೋದಲ್ಲಿ ಮುಂದಿನ ಹೋರಾಟ ಉಗ್ರ ಸ್ವರೂಪ ತಾಳಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.