ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಶಿರಸಿ ವತಿಯಿಂದ ಶಿರಸಿ ಮಾರಿಕಾಂಬಾ ಸಭಾಭವನದಲ್ಲಿ ಬುಧವಾರ ಕೀಲು, ಮೂಳೆ, ವ್ಯಾಧಿಗಳು ಮತ್ತು ವಯೋಮಿತ್ರ ಆಯುಷ್ ಆರೋಗ್ಯ ಶಿಬಿರ ನಡೆಯಿತು.
ಶಿರಸಿ: ಚಿಕ್ಕ ವಯಸ್ಸಿನಲ್ಲಿಯೇ ಶಿಸ್ತು ಬದ್ಧ ಆಹಾರ ಕ್ರಮ, ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಅಳವಡಿಸಿಕೊಂಡರೆ ವಯಸ್ಕರಾದ ಬಳಿಕ ಬರುವ ರೋಗಗಳನ್ನು ನಿಯಂತ್ರಿಸಬಹುದು. ಸಾಂಕ್ರಾಮಿಕವಲ್ಲದ ರೋಗಗಳು ದೀರ್ಘಕಾಲೀನ ರೋಗಗಳಾಗಿ ಪರಿಣಾಮ ಬೀರುವುದರಿಂದ ಉದ್ಯೋಗ ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಉತ್ತರ ಕನ್ನಡ ಪ್ರಭಾರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ ಯಾಜಿ ವಿ. ಹೇಳಿದರು.
ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಶಿರಸಿ ವತಿಯಿಂದ ಇಲ್ಲಿಯ ಮಾರಿಕಾಂಬಾ ಸಭಾಭವನದಲ್ಲಿ ಬುಧವಾರ ನಡೆದ ಕೀಲು, ಮೂಳೆ, ವ್ಯಾಧಿಗಳು ಮತ್ತು ವಯೋಮಿತ್ರ ಆಯುಷ್ ಆರೋಗ್ಯ ಶಿಬಿರವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆ ಸರ್ವೇ ಪ್ರಕಾರ ಶೇ.33 ಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ರೋಗ, ಬೊಜ್ಜುತನ, ಸೋಂಕು, ಕುತ್ತಿಗೆ, ಮೊಣಕಾಲು, ಹಿಮ್ಮಡಿ, ಸಂಧಿಗಳ ನೋವು ಹೆಚ್ಚುತ್ತಿದೆ. ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಸ್ಯೆ, ಧೈರಾಯ್ಡ್, ಬೊಜ್ಜು ಮತ್ತು ಸಂಧಿ ರೋಗಗಳು ಮೂಳೆ ಸವಕಳಿ ಹೆಚ್ಚಲು ಕಾರಣವಾಗಿವೆ. ಸಾಂಕ್ರಾಮಿಕವಲ್ಲದ ರೋಗಗಳು ದೀರ್ಘಕಾಲೀನ ರೋಗಗಳಾಗಿ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಹದಿ ಹರೆಯದಲ್ಲಿಯೇ ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡುವಂತೆ ಸಲಹೆ ನೀಡಿದರಲ್ಲದೇ, ಭುಜ, ಮಂಡಿ, ಹಿಮ್ಮಡಿ ಇತ್ಯಾದಿ ಕೀಲುಗಳಿಗೆ ಒಳ್ಳಣ್ಣೆ, ತೆಂಗಿನೆಣ್ಣೆ ಅಭ್ಯಂಗ ಮಾಡಿ ಸೂರ್ಯನ ಎಳೆಬಿಸಿಲಿನಲ್ಲಿ ನಡಿಗೆ, ಸೂರ್ಯ ನಮಸ್ಕಾರ ಮಾಡುವುದರ ಮೂಲಕ ಕೀಲು ಮೂಳೆ ಆರೋಗ್ಯ ಕಾಪಾಡಿಕೊಳ್ಳಬಹುದೆಂದರು.
ಮುಖ್ಯ ಅತಿಥಿಗಳಾಗಿದ್ದ ಶಿರಸಿಯ ಪ್ರಸಿದ್ದ ಆಯುರ್ವೇದ ಪರಂಪರೆ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ರವಿಕಿರಣ ಪಟವರ್ಧನ ಮಾತನಾಡಿ, ಮುಪ್ಪಿನ ಸಮಯದಲ್ಲಿ ರೋಗಿಗಳ ಕುರಿತು ವೇದನೆ ಪಡುವ ಬದಲು ಹದಿಹರೆಯದಿಂದಲೇ ಕ್ರಮಬದ್ಧ ಜೀವನ ಶೈಲಿ ಅನುಸರಿಸಿದರೆ ಆರೋಗ್ಯಪೂರ್ಣ ಜೀವನ, ದೀರ್ಘಾಯುಷಿಗಳಾಗಲು ಸಾಧ್ಯ ಎಂದರು.ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷರಾದ ರವಿ ಬೆಳ್ಳಿಮನೆ ಅವರು ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಮಾರಿಕಾಂಬಾ ದೇವಾಲಯದ ಸಿಬ್ಬಂದಿ ಮತ್ತು ಸಾರ್ವಜನಿಕರು ಈ ಶಿಬಿರದ ಲಾಭ ಪಡೆಯಬೇಕೆಂದು ಹೇಳಿದರುವಯೋಮಿತ್ರ ಆಯುಷ್ ಆರೋಗ್ಯ ಶಿಬಿರದ ಕಾರ್ಯಕ್ರಮದ ಅನುಷ್ಟಾನದ ಕುರಿತು ಮಾಹಿತಿ ನೀಡಿದ ಡಾ. ಜಗದೀಶ ಯಾಜಿ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಶಿರಸಿ, ಮುಂಡಗೋಡ ಮತ್ತು ದಾಂಡೇಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿಗೆ ಹಂಚಿಕೆಯಾದ 12 ಕೀಲು ಮೂಳೆ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ದೇವಾಲಯದ ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಅಶೋಕಸಿಂಗ್ ಪವಾರ್, ವಿನಾಯಕ ಶೇಟ್, ಕೇಶವ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಾರಿಕಾಂಬಾ ದೇವಾಲಯದ ಆಡಳಿತ ನಿರ್ವಾಹಕರಾದ ಚಂದ್ರಕಾಂತ ಜಿ. ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಯೋಗ ತರಬೇತುದಾರರಾದ ವಾಣಿ ಭಟ್ಟ ಅವರು ಯೋಗ, ಪ್ರಾಣಾಯಾಮ ಪ್ರಾತ್ಯಕ್ಷಿಕೆ ಮಾಡಿದರು. ನಿವೃತ್ತ ಸೈನಿಕರಿಗೆ ಡಾ. ರವಿಕಿರಣ ಪಟವರ್ಧನ ನೀಡುತ್ತಿರುವ ಉಚಿತ ಚಿಕಿತ್ಸೆ ಶ್ಲಾಘಿಸಿದರು.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಜಗದೀಶ ಯಾಜಿ ವಿ., ತಜ್ಞ ವೈದ್ಯರಾದ ಡಾ. ಭಾಗ್ಯಲಕ್ಷ್ಮೀ ಕೆ., ಡಾ. ಭಾಗ್ಯಶ್ರೀ ಹೆಗಡೆ ಅವರಿಂದ ಆರೋಗ್ಯ ತಪಾಸಣೆ ನಡೆಯಿತು. ಔಷಧ ಅಧಿಕಾರಿಗಳಾದ ಜಿ.ಬಿ. ಕೃಷ್ಣಮೂರ್ತಿ, ಪ್ರತಿಮಾ ಕೋಟಿ ಔಷಧ ವಿತರಿಸಿದರು. ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕರಾದ ಆಕಾಶ ಗು ಬೀಡಿಕರ, ರೇಣುಕಾ ವಿ ನಾಯ್ಕ್, ವಿಜಯಲಕ್ಷ್ಮೀ ಮಡಿವಾಳ, ಸಚಿನ್ ಯ. ನಾಯ್ಕ, ಆಶಾ ಕಾರ್ಯಕರ್ತೆಯರಾದ ಸುಮಿತ್ರಾ ಜೋಗಳೆಕರ ಸಹಕರಿಸಿದರು. ಶಿಬಿರದಲ್ಲಿ 104 ರೋಗಿಗಳ ತಪಾಸಣೆ ನಡೆಸಿ ಉಚಿತ ಔಷಧ ವಿತರಿಸಲಾಯಿತು.