ಒಂದು ದೇಶ ಒಂದು ಚುನಾವಣೆಯಿಂದ ತೆರಿಗೆ ಹಣ ಪೋಲು ತಪ್ಪಿಸಬಹುದು: ಕೆ.ಎಸ್. ನವೀನ್

| Published : Nov 25 2025, 02:30 AM IST

ಒಂದು ದೇಶ ಒಂದು ಚುನಾವಣೆಯಿಂದ ತೆರಿಗೆ ಹಣ ಪೋಲು ತಪ್ಪಿಸಬಹುದು: ಕೆ.ಎಸ್. ನವೀನ್
Share this Article
  • FB
  • TW
  • Linkdin
  • Email

ಸಾರಾಂಶ

ಜನರ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಲು ಒಂದು ದೇಶ ಒಂದು ಚುನಾವಣೆ ಅವಶ್ಯವಾಗಿದೆ ಎಂದು ಒಂದು ದೇಶ ಒಂದು ಚುನಾವಣೆ ರಾಜ್ಯ ಸಂಚಾಲಕ, ವಿಪ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ಗದಗ: ದೇಶದಲ್ಲಿ ಪ್ರತಿವರ್ಷ ಸುಮಾರು ಮೂರು ರಾಜ್ಯಗಳ ವಿಧಾನಸಭೆ ಚುಣಾವಣೆಗಳು ನಡೆಯುತ್ತವೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಜನರ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಲು ಒಂದು ದೇಶ ಒಂದು ಚುನಾವಣೆ ಅವಶ್ಯವಾಗಿದೆ ಎಂದು ಒಂದು ದೇಶ ಒಂದು ಚುನಾವಣೆ ರಾಜ್ಯ ಸಂಚಾಲಕ, ವಿಪ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ನಗರದಲ್ಲಿ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ಪತ್ರಿಕೋದ್ಯಮ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಒಂದು ದೇಶ ಒಂದು ಚುನಾವಣೆ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ದೇಶ ಒಂದು ಚುನಾವಣೆ ಪದವಿ ವಿದ್ಯಾರ್ಥಿಗಳ ಮಧ್ಯೆ ಚರ್ಚೆಯಾಗುತ್ತಿರುವುದು ಸೂಕ್ತದಾಯಕವಾಗಿದೆ. ಏಕೆಂದರೆ, ಭವಿಷ್ಯದಲ್ಲಿ ದೇಶವನ್ನು ಕಟ್ಟುವ ತರುಣರು ಒಂದು ದೇಶ ಒಂದು ಚುನಾವಣೆ ಬಗ್ಗೆ ತಿಳಿದುಕೊಳ್ಳಲೇಬೇಕು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮತದಾನದ ಮೂಲಕವೇ ಬದಲಾವಣೆ ತರಲಾಗುತ್ತಿದೆ. ಹೀಗಾಗಿ, ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆದರೆ, ಏಕಕಾಲಕ್ಕೆ ಬದಲಾವಣೆ ತರಬಹುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾ. ಪ್ರೊ. ಪಿ.ಜಿ. ಪಾಟೀಲ ಮಾತನಾಡಿ, ದೇಶದ ಪ್ರತಿ ಪ್ರಜೆ ಮತ ರಾಷ್ಟ್ರಪತಿಯ ಮತಕ್ಕೆ ಸಮವಾಗಿದೆ. ಪ್ರತಿಯೊಬ್ಬರು ಮತದಾನ ಮಾಡಿ ಉತ್ತಮ ನಾಯಕರನ್ನು ಆಯ್ಕೆಮಾಡಿ. ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನಗಳನ್ನು ನೀಡಲಾಗುತ್ತದೆ ಎಂದರು.

ಕಿರಣಕುಮಾರ ವಿವೇಕವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ಪ್ರಾರ್ಥಿಸಿದರು. ಪ್ರೊ. ಕಲ್ಯಾಣಿ ಹುನಕುಂದ ಸ್ವಾಗತಿಸಿದರು. ಸಂಗೀತಾ ವಣಗೇರಿ, ರಾಜೇಶ್ವರಿ ಪಾಟೀಲ ನಿರೂಪಿಸಿದರು. ಪ್ರೊ. ವಿವೇಕ ಬಿರಾದರ ವಂದಿಸಿದರು.