ರಾಮನಗರದಲ್ಲಿ 108 ಹಳ್ಳಿಗಳಲ್ಲಿ ಕುಡಿವ ನೀರು ಅಭಾವದ ಆತಂಕ

| Published : Feb 28 2024, 02:33 AM IST

ರಾಮನಗರದಲ್ಲಿ 108 ಹಳ್ಳಿಗಳಲ್ಲಿ ಕುಡಿವ ನೀರು ಅಭಾವದ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ರಾಮನಗರ ಜಿಲ್ಲೆಯಲ್ಲಿ ಬೆಳೆ ಹಾನಿ ಜೊತೆಗೆ ಕೆರೆಕಟ್ಟೆಗಳು ಬರಿದಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ 108 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಮೇವಿನ ಸಮಸ್ಯೆ ಕಂಡು ಬರುತ್ತಿಲ್ಲ.

ರಾಮನಗರ ಟೌನ್‌, 1 ಹಳ್ಳಿಗೆ ಟ್ಯಾಂಕರ್, 6 ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ನೀರು । 3,30,612 ಟನ್ ಮೇವು ಲಭ್ಯ

ಕನ್ನಡಪ್ರಭ ವಾರ್ತೆ ರಾಮನಗರ

ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿ ಜೊತೆಗೆ ಕೆರೆಕಟ್ಟೆಗಳು ಬರಿದಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ 108 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಮೇವಿನ ಸಮಸ್ಯೆ ಕಂಡು ಬರುತ್ತಿಲ್ಲ.

ಜಿಲ್ಲೆಯ ರಾಮನಗರ ಟೌನ್‌ ನ ಕೆಲ ವಾರ್ಡುಗಳು ಹಾಗೂ ಮಾಗಡಿ ತಾಲೂಕು ನೇತನಹಳ್ಳಿಯ ಉಡುವೆಗೆರೆ ಗ್ರಾಮ, ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಗ್ರಾಪಂನ ದೊಡ್ಡನಹಳ್ಳಿ, ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಪಂನ ಗೊಲ್ಲಹಳ್ಳಿ, ಕನಕಪುರ ತಾಲೂಕಿನ ಅಳ್ಳಿ ಮಾರನಹಳ್ಳಿ ಗ್ರಾಪಂನ ಬೇವುದೊಡ್ಡಿ, ಕೋಡಿಹಳ್ಳಿ ಗ್ರಾಪಂನ ಕೋಡಿಪುರ, ಹೊಸದೊಡ್ಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

ಈ ಗ್ರಾಮಗಳ ಪೈಕಿ 1 ಹಳ್ಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೆ, ಉಳಿದ ಹಳ್ಳಿಗಳಿಗೆ ಖಾಸಗಿ ಬೋರ್ ವೆಲ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 108 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ.

ರಾಮನಗರ ನಗರಸಭೆ ವ್ಯಾಪ್ತಿಯ 9 ವಾರ್ಡುಗಳಿಗೆ ನಗರಸಭೆ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಇದು ಸಾಕಾಗುತ್ತಿಲ್ಲ. ಹೀಗಾಗಿ 22 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲು ಸಿದ್ಧತೆಗಳು ನಡೆದಿವೆ.

ಇನ್ನು ಕನಕಪುರ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೇವುದೊಡ್ಡಿ ಗ್ರಾಮಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಿದ್ದು, ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಸಿದ್ಧತೆ ಮಾಡಿಕೊಂಡಿದೆ.

ರಾಮನಗರ ಜಿಲ್ಲೆ ಬಯಲುಸೀಮೆಯ ಪ್ರದೇಶವಾಗಿದ್ದು, ಯಾವುದೇ ನದಿ ಮೂಲವನ್ನು ಹೊಂದಿಲ್ಲ. ಹೀಗಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಸದ್ಯಕ್ಕೆ ಜಲಮೂಲವಾಗಿರುವ ಸಣ್ಣ ಜಲಾಶಯಗಳು ಮತ್ತು ಕೆರೆಕಟ್ಟೆಗಳು ಬರಿದಾಗುತ್ತಿವೆ. ಇದರಿಂದಾಗಿ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿನ ಕೆರೆಕಟ್ಟೆಗಳಲ್ಲಿ ನೀರು ಸಂಪೂರ್ಣ ಸಂಗ್ರಹವಾಗದೆ ಕಾಡುಪ್ರಾಣಿ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿವೆ. ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತ ಸಂಪೂರ್ಣ ಕುಸಿತ ಕಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಬಹುದಾದ ಚನ್ನಪಟ್ಟಣ ನಗರಸಭೆಯಲ್ಲಿ 10 ವಾರ್ಡು, ಕನಕಪುರ ನಗರಸಭೆಯಲ್ಲಿ 02 ವಾರ್ಡು , ರಾಮನಗರ ನಗರಸಭೆಯಲ್ಲಿ 19 ವಾರ್ಡು ಹಾಗೂ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ 03 ವಾರ್ಡುಗಳನ್ನು ಗುರುತಿಸಲಾಗಿದೆ.

ಅಲ್ಲದೆ, ಕನಕಪುರ ತಾಲೂಕಿನಲ್ಲಿ 18, ಚನ್ನಪಟ್ಟಣ ತಾಲೂಕಿನಲ್ಲಿ 10, ರಾಮನಗರ ತಾಲೂಕಿನಲ್ಲಿ 32 ಹಾಗೂ ಮಾಗಡಿ ತಾಲೂಕಿನಲ್ಲಿ 44 ಹಳ್ಳಿಗಳು ಹಾಗೂ ಹಾರೋಹಳ್ಳಿ ತಾಲೂಕಿನಲ್ಲಿ 04 ಸೇರಿದಂತೆ ಒಟ್ಟು 108 ಗ್ರಾಮಗಳನ್ನು ಗುರುತಿಸಿದ್ದು, ಅಲ್ಲಿ ಬೋರ್‌ ವೆಲ್‌ ಗಳನ್ನು ಕೊರೆಸಿ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

24 ವಾರಗಳಿಗೆ ಬೇಕಾದಷ್ಟು ಮೇವು ಲಭ್ಯ:

20ನೇ ಗಣತಿ ಪ್ರಕಾರ ಜಿಲ್ಲೆಯಲ್ಲಿ 2,07,146 ದನ ಮತ್ತು ಎಮ್ಮೆಗಳು ಹಾಗೂ 2,78,118 ಕುರಿ ಮತ್ತು ಮೇಕೆಗಳು ಇವೆ. ಇದರಲ್ಲಿ ದನ - ಎಮ್ಮೆಗೆ ದಿನಕ್ಕೆ 6 ಕೆಜಿ, ಕುರಿ - ಮೇಕೆಗೆ 0.5 ಕೆಜಿ ಮೇವಿನಂತೆ ವಾರಕ್ಕೆ 13,873 ಟನ್ ಮೇವು ಬೇಕಾಗುತ್ತದೆ. ಈಗ 3,44,164 ಟನ್ ಮೇವು ಲಭ್ಯವಿದ್ದು, ವಾರಕ್ಕೆ 18,346 ಟನ್ ಮೇವು ವಾರದಲ್ಲಿ 4,794 ಟನ್ ಮೇವು ಉತ್ಪಾದನೆ ಆಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳವರೆಗೆ 24 ವಾರಗಳಿಗೆ ಸಾಕಾಗುವಷ್ಟು ಅಂದರೆ 3,30,612 ಟನ್ ಮೇವು ಲಭ್ಯವಿದೆ.

ಕಳೆದ ಜನವರಿಯಿಂದಲೇ ಜಿಲ್ಲೆಯಲ್ಲಿ ಉಷ್ಣಾಂಶದ ಪ್ರಮಾಣ ಏರುಗತಿಯಲ್ಲಿತ್ತು. ಹೆಚ್ಚುತ್ತಿರುವ ಬಿಸಿಲಿನಿಂದ ಜಲಮೂಲಗಳಾದ ಕೆರೆಕಟ್ಟೆಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟವೂ ಗಂಭೀರ ಸ್ಥಿತಿಗೆ ತಲುಪುವಂತಾಗಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಮೇವಿನ ಕೊರತೆ ನೀಗಿಸಲು ಟೆಂಡರ್‌ ಪ್ರಕ್ರಿಯೆಯೂ ನಡೆಯುತ್ತಿದೆ.

ರಾಮನಗರ ಜಿಲ್ಲೆಯಲ್ಲಿ ಜಾನುವಾರು ಸಂಖ್ಯೆ ಮತ್ತು ಮೇವಿನ ಲಭ್ಯತೆಯ ವಿವರತಾಲೂಕುದನ-ಎಮ್ಮೆಕುರಿ-ಮೇಕೆ ಮೇವಿನ ಲಭ್ಯತೆ (ಟನ್)

ರಾಮನಗರ 57,427, 57,452, 61,081

ಚನ್ನಪಟ್ಟಣ61,111, 60,687, 73,667

ಮಾಗಡಿ 75,149, 43,094, 76,479

ಕನಕಪುರ 70,764, 90,328, 78,403

ಹಾರೋಹಳ್ಳಿ 42,695,26,557, 40,982 ಒಟ್ಟು 3,07,1462, 7,81,183, 30,612