ಗುರಿ ಮುಟ್ಟಲು ದೊಡ್ಡ ಕನಸು ಕಾಣಬೇಕು: ಜಿಪಂ ಸಿಇಒ

| Published : Sep 11 2025, 12:03 AM IST

ಗುರಿ ಮುಟ್ಟಲು ದೊಡ್ಡ ಕನಸು ಕಾಣಬೇಕು: ಜಿಪಂ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸುತ್ತೂರು ಮಠದ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಸಮಾಜದ ಸಮಸ್ಯೆಗಳ ಮೂಲ ಕಾರಣ ಅವಿದ್ಯೆ ಎಂದು ಅರಿತಿದ್ದರು. ಗ್ರಾಮೀಣ ಭಾಗದ ಜನರನ್ನು ಅಕ್ಷರ ಸಂಸ್ಕೃತಿ ಎಡೆಗೆ ಸೆಳೆದರು. ಜನ ಸಮುದಾಯದ ಭಾಗ್ಯಜ್ಯೋತಿಯಾದರು

ಕನ್ನಡಪ್ರಭ ವಾರ್ತೆ ಮಾಲೂರು

ದಿ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹೇಳಿದಂತೆ ‘ನಮ್ಮ ಜೀವನವೇ ಒಂದು ಕನಸು ಎಂದು ತಿಳಿದು ನಮ್ಮ ಗುರಿ ಮುಟ್ಟಲು ದೊಡ್ಡ ಕನಸು ಕಾಣಬೇಕು. ಆಗ ಮಾತ್ರ ಉನ್ನತ ಹುದ್ದೆಯನ್ನು ಪಡೆಯಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಡಾ.ಪ್ರವೀಣ್‌ ಪಿ.ಬಾಗೇವಾಡಿ ಹೇಳಿದರು.

ಇಲ್ಲಿನ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೦ ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸಾವಿರಾರು ಜನರಿಗೆ ಅನ್ನ, ಆಶ್ರಯ ಕೊಟ್ಟು ಕೆಲಸ ಮಾಡುತ್ತಿರುವ ಜೆಎಸ್‌ಎಸ್‌ ಸಂಸ್ಥೆ ಸೇವೆಯ ಬಗ್ಗೆ ಹೆಮ್ಮೆಯೆನಿಸುತ್ತಿದೆ ಎಂದರು.

ಮೊಬೈಲ್‌ ಬಿಟ್ಟು ಪುಸ್ತಕ ಓದಿ

ಇದು ಡಿಜಿಟಲ್ ಪ್ರಪಂಚ. ಬಹಳಷ್ಟು ಜನ ಮೊಬೈಲ್, ಕಂಪ್ಯೂಟರ್, ಯೂಟೂಬ್‌ಗಳ ಪ್ರಭಾವಕ್ಕೆ ಒಳಗಾಗಿದ್ದಾರೆ. ಇಂದು ಎಐ ಬಹಳಷ್ಟು ಪ್ರಭಾವ ಬೀರುತ್ತಿದೆ. ಇದರಿಂದ ಬಹಳಷ್ಟು ಕಲಿಯುತ್ತಿದ್ದೇವೆ. ಮಕ್ಕಳು ಮೊಬೈಲ್ ಬಳಕೆ ಅತಿಯಾಗಿ ಮಾಡುವುದನ್ನು ಬಿಟ್ಟು ಪಠ್ಯಪುಸ್ತಕಗಳನ್ನು ಓದಿ ತಮ್ಮ ಗುರಿ ಸಾಧಿಸಿಕೊಳ್ಳಬೇಕು ಎಂದರು.

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ತಮ್ಮ ಪಾತ್ರವನ್ನ್ರು ಸರಿಯಾಗಿ ನಿಭಾಯಿಸಬೇಕು, ಸೋಲೋಮನ್‌ರವರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರಿಗೆ, ಕೃಷ್ಣಕೇಶವ್‌ರವರು ಅಂಬೇಡ್ಕರ್‌ರವರಿಗೆ ಗುರುಗಳಾಗಿ ಅವರನ್ನು ಸಮಾಜದ ಮಹಾನ್ ವ್ಯಕ್ತಿಗಳನ್ನಾಗಿ ಮಾಡಿದರು. ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು. ಗ್ರಾಮೀಣ ಶಿಕ್ಷಣಕ್ಕೆ ಒತ್ತು

ಸಾಹಿತಿ ಶ್ರೀ ಎಸ್. ಚಂದ್ರಶೇಖರ್ ಉಷಾಲ ಮಾತನಾಡಿ, ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸುತ್ತೂರು ಮಠದ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಸಮಾಜದ ಸಮಸ್ಯೆಗಳ ಮೂಲ ಕಾರಣ ಅವಿದ್ಯೆ ಎಂದು ಅರಿತಿದ್ದರು. ಗ್ರಾಮೀಣ ಭಾಗದ ಜನರನ್ನು ಅಕ್ಷರ ಸಂಸ್ಕೃತಿ ಎಡೆಗೆ ಸೆಳೆದರು. ಜನ ಸಮುದಾಯದ ಭಾಗ್ಯಜ್ಯೋತಿಯಾದರು ಎಂದರು.

ಹನ್ನೆರಡನೆಯ ವಯಸ್ಸಿನಲ್ಲಿ ಶ್ರೀಮಠದ ಜವಾಬ್ದಾರಿ ಪಡೆದ ಪೂಜ್ಯಶ್ರೀಗಳವರು ಹಸಿದ ವಿದ್ಯಾರ್ಥಿಯೊಬ್ಬನ ಹಸಿವನ್ನು ನೋಡಲಾರದೆ ವಿದ್ಯಾರ್ಥಿನಿಲಯ ಪ್ರಾರಂಭಿಸುವ ಮೂಲಕ ಜೆಎಸ್‌ಎಸ್ ಸಂಸ್ಥೆಯನ್ನು ಕಟ್ಟಿ ಬೆಳಸಿದ್ದನ್ನು ವಿವರಿಸಿದರು. ಶ್ರೀಮಠದ ಆರ್ಥಿಕತೆ ನೆಲಕಚ್ಚಿದಾಗ ಗ್ರಾಮೀಣ ಭಾಗದಲ್ಲಿ ಶ್ರೀಗಳು ಭಿಕ್ಷೆ ಬೇಡಿ ನಿರಂತರವಾಗಿ ಜ್ಞಾನ, ಅನ್ನ ದಾಸೋಹ ನಡೆಸಿದರು ಎಂದು ವಿವರಿಸಿದರು. ಮಾಲೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿ ಎಸ್ ಹೆಚ್ ಮಹೇಶ್ವರಪ್ಪ, ಬೆಳ್ಳನ ಪುರಿ ಸಂಸ್ಥಾನ ಮಠದ ಮಹಂತ ಶಿವಾಚಾರ‍್ಯ ಸ್ವಾಮೀಜಿ, ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶ್‌ ಲಿಂಗ ಶಿವಾಚಾರ‍್ಯರು ಮಾತನಾಡಿದರು.