ಕಾಗೇರಿ ಸಮ್ಮುಖದಲ್ಲಿ ಒಂದಾದ ಸುನೀಲ ಹೆಗಡೆ, ಘೋಟ್ನೇಕರ್

| Published : Apr 04 2024, 01:03 AM IST

ಕಾಗೇರಿ ಸಮ್ಮುಖದಲ್ಲಿ ಒಂದಾದ ಸುನೀಲ ಹೆಗಡೆ, ಘೋಟ್ನೇಕರ್
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಹಳಿಯಾಳ ಪಟ್ಟಣದಲ್ಲಿ ಆಯೋಜಿಸಿದ ಬಿಜೆಪಿ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶವು ಈ ಅಪರೂಪದ ಘಟನೆಗೆ ಸಾಕ್ಷಿಯಾಯಿತು.

ಹಳಿಯಾಳ: ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲುವ ದಿಸೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಂಘಟಾನಾತ್ಮಕವಾಗಿ ಒಂದಾಗಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಹೈಕಮಾಂಡ್ ನೀಡಿದ ಕರೆಯನ್ನು ಮನ್ನಿಸಿ ಹಳಿಯಾಳದಲ್ಲೂ ರಾಜಕೀಯದ ಪರಮ ಶತ್ರುಗಳಾಗಿರುವ ಮಾಜಿ ಶಾಸಕ ಸುನೀಲ ಹೆಗಡೆ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಪರಸ್ಪರ ವೈಮನಸ್ಸು ಮರೆತು ಒಂದಾಗಿ ಕೈಜೋಡಿಸಿದ್ದಾರೆ.

ಅಷ್ಟೇ ಅಲ್ಲ, ಜೋಡೆತ್ತುಗಳಂತೆ ದುಡಿದು ಕಾಗೇರಿಯವರನ್ನು ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ತರುವ ವಾಗ್ದಾನವನ್ನೂ ಮಾಡಿದರು.

ಬುಧವಾರ ಹಳಿಯಾಳ ಪಟ್ಟಣದಲ್ಲಿ ಆಯೋಜಿಸಿದ ಬಿಜೆಪಿ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶವು ಈ ಅಪರೂಪದ ಘಟನೆಗೆ ಸಾಕ್ಷಿಯಾಯಿತು.

ಸಮಾವೇಶಕ್ಕೆ ಘೋಟ್ನೇಕರ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಶಿಳ್ಳೆ ಚಪ್ಪಾಳೆಯೊಂದಿಗೆ ಭರ್ಜರಿ ಸ್ವಾಗತ ನೀಡಿದರು. ವೇದಿಕೆ ಏರಿದ ಘೋಟ್ನೇಕರ ಕಾಗೇರಿಯವರಿಗೆ ಶಾಲು ಹಾಕಿ ಸನ್ಮಾನಿಸಿದರು, ತದನಂತರ ಮಾಜಿ ಶಾಸಕ ಸುನೀಲ ಹೆಗಡಯವರಿಗೆ ಹೂಗುಚ್ಛ ನೀಡಿ ಕೈಕುಲುಕಿದರು.

ಹೊಸ ಮುಖ ಬರಲಿ: ಬಳಿಕ ಘೋಟ್ನೇಕರ ಮಾತನಾಡಿ ನಾನು ಮತ್ತು ಸುನೀಲ ಒಂದಾದರೆ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿತ್ತು ಎಂದು ಘೋಟ್ನೇಕರ ಹೇಳುತ್ತಿದ್ದಂತೆ ಸಭೆಯಲ್ಲಿ ಘೋಷಣೆಗಳು ಮೊಳಗಿದವು.

ಸಾವರಿಸಿಕೊಂಡು ಮಾತು ಮುಂದುವರಿಸಿದ ಘೋಟ್ನೇಕರ, ನನ್ನ ಬೆಂಬಲಿಗರ ಒತ್ತಡಕ್ಕೆ ಮಣಿದು ನಾನು ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದೆ. ನಮ್ಮಿಬ್ಬರ ಸ್ಪರ್ಧೆಯಿಂದ ದೇಶಪಾಂಡೆ ಅವರಿಗೆ ಅನಾಯಾಸ ಗೆಲುವು ಲಿಕ್ಕಿತು ಎಂದರು. ಈಗ ಕಾಗೇರಿಯವರು ಹಳಿಯಾಳ ಕ್ಷೇತ್ರದ ಚಿಂತೆ ಬಿಡಬೇಕು. ನಾವು ಜೋಡೆತ್ತುಗಳಂತೆ ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೆವೆ ಎಂದರು.

ನಮ್ಮ ತಂದೆ ವಿ.ಡಿ. ಹೆಗಡೆಯವರ ಸಮಕಾಲೀನವರಾದ ತಾವು(ಘೋಟ್ನೇಕರ) ನಮಗೆ ಮಾರ್ಗದರ್ಶಕರಾಗಬೇಕೇ ಹೊರತು ಜೋಡೆತ್ತಿನ ಪ್ರಶ್ನೆ ಬರಲ್ಲ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಪ್ರತಿಕ್ರಿಯಿಸಿದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸುನೀಲ ಮತ್ತು ಘೋಟ್ನೇಕರ ಕೈಜೋಡಿಸಿದ್ದಾರೆ ಅಂದರೆ ನಮಗೆ ದುಪ್ಪಟ್ಟು ಶಕ್ತಿ ಬಂದಂತಾಗಿದೆ ಎಂದರು.