ಧಾರವಾಡ: ಸಾರ್ವಜನಿಕ ಜೀವನದಲ್ಲಿ ಇರುವವರು ಪ್ರಶ್ನಾತೀತವಾಗಿರಬೇಕು. ನೈತಿಕವಾಗಿ ಉತ್ತಮವಾಗಿರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಮೇಲೆ ಲೋಕಾ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಹಟ್ಟಿ ಶಾಸಕರ ಮೇಲೆ ಆದ ದಾಳಿ ಷಡ್ಯಂತ್ರ ಎಂದು ಕೇಳಿ ಬಂದಿದೆ. ಲೋಕಾಯುಕ್ತ ಸಂಸ್ಥೆಯ ಯಾವುದೇ ಒತ್ತಡ ಇಲ್ಲದೇ ತನಿಖೆ ಮಾಡಲಿ. ತಪ್ಪು ಇದ್ದರೆ ಶಿಕ್ಷೆ ಆಗಲಿ, ತಪ್ಪು ಇರದಿದ್ದರೆ ಅವರು ದೋಷಮುಕ್ತರಾಗಿ ಹೊರ ಬರಲಿ. ಯಾರನ್ನಾದರೂ ಗುರಿಯಾಗಿಸಿ ದಾಳಿ ಮಾಡಿಸುವುದು ಸರಿಯಲ್ಲ ಎಂದರು.ಎಲ್ಲಿಯವರೆಗೂ ಮುಖ್ಚಮಂತ್ರಿಗಳ ಖುರ್ಚಿ ಜಗಳ ಮುಗಿಯುವುದಿಲ್ಲವೋ ಅಲ್ಲಿಯವರೆಗೂ ರಾಜ್ಯ ಬಡವಾಗಿಯೇ ಇರುತ್ತದೆ ಎಂದು ಬೆಲ್ಲದ ಹೇಳಿದರು.
ಲಂಚ ಪ್ರಕರಣದಲ್ಲಿ ದಲಿತ ಶಾಸಕರ ಟಾರ್ಗೆಟ್
ಹುಬ್ಬಳ್ಳಿ: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪ್ರಕರಣ ಕುರಿತು ಸ್ವಾಮೀಜಿಯೊಬ್ಬರ ಆಡಿಯೋ ಬಹಿರಂಗವಾಗಿದೆ. ಇದನ್ನು ನೋಡಿದರೆ ಈ ಪ್ರಕರಣದಲ್ಲಿ ಓರ್ವ ದಲಿತ ಶಾಸಕರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಯತ್ನ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಶಂಕೆ ವ್ಯಕ್ತಪಡಿಸಿದ್ದಾರೆ..ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ ಜಿಲ್ಲೆ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣದ ಪೂರ್ವದಲ್ಲಿ ಮೊಬೈಲ್ ಆಡಿಯೋದಲ್ಲಿ ಯಾರೋ ಒಬ್ಬ ಸ್ವಾಮೀಜಿ ಮಾತನಾಡಿದ್ದಾರೆ. ಈ ಕೃತ್ಯ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎನ್ನುವಂತಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ನೈತಿಕತೆ ಹೆಚ್ಚಿರಬೇಕು. ಈ ವಿಷಯದಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕು ಎಂದರು.ಬಾಗಲಕೋಟೆ, ಕಲಬುರಗಿಯಲ್ಲಿ ಕಲ್ಲು ತೂರಾಟ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಮಾಜ, ದೇಶ ವಿರೋಧಿ ಶಕ್ತಿಗಳಿಗೆ ನಾವು ಏನು ಮಾಡಿದರೂ ದಕ್ಕಿಸಿಕೊಳ್ಳುತ್ತೇವೆ ಎಂಬ ಮನಸ್ಥಿತಿಯಿದೆ. ಹಾಗಾಗಿ, ಈ ರೀತಿಯ ಕೃತ್ಯ ಮಾಡುತ್ತಿದ್ದಾರೆ. ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದರು.ಜನಪ್ರತಿನಿಧಿಗಳು ಶುದ್ಧ ಹಸ್ತರಾಗಿರಬೇಕು: ಕೇಂದ್ರ ಸಚಿವ ಜೋಶಿ
ಧಾರವಾಡ: ಜನಪ್ರತಿನಿಧಿಗಳಾದವರು ಶುದ್ಧಹಸ್ತರಾಗಿರಬೇಕು. ಅವರು ಜನರ ಕೆಲಸ ಮಾಡಲು ಬಂದವರು. ಸಾರ್ವಜನಿಕ ಬದುಕಿನಲ್ಲಿ ಆದರ್ಶವಾಗಿರಬೇಕು ಎಂದು ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು ಲಮಾಣಿ ತಪ್ಪು ಮಾಡಿದ್ದಾರೆಯೋ ಅಥವಾ ಮಾಡಿಲ್ಲವೋ ಎಂಬುದನ್ನು ಹೇಳಲು ಆಗುವುದಿಲ್ಲ. ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಅದು ಮಾಧ್ಯಮದಲ್ಲಿ ಬರುತ್ತಿದೆ. ಇದರ ಕುರಿತು ಸತ್ಯಾಸತ್ಯತೆ ತಿಳಿದು ಮಾತನಾಡುತ್ತೇನೆ. ಒಂದು ಕಡೆ ಹನ್ನೊಂದು ಲಕ್ಷ, ಮತ್ತೊಂದು ಕಡೆ ಹದಿನೈದು ಲಕ್ಷ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಸಂಪೂರ್ಣ ಮಾಹಿತಿ ನೀಡಲು ಅಲ್ಲಿನ ಜಿಲ್ಲಾ ಅಧ್ಯಕ್ಷರಿಗೆ ಹಾಗೂ ಸಿ.ಸಿ. ಪಾಟೀಲ ಅವರಿಗೆ ಹೇಳಿದ್ದೇನೆ. ಎಲ್ಲವನ್ನೂ ತಿಳಿದು ಮಾತನಾಡುತ್ತನೆ ಎಂದರು.ಭ್ರಷ್ಟಾಚಾರದ ಆರೋಪ ಬಿಜೆಪಿ ಮೇಲೆ ಹಾಕುವ ತಂತ್ರ: ನಿರಾಣಿ
ಧಾರವಾಡ: ಕಾಂಗ್ರೆಸ್ ಭ್ರಷ್ಟಾಚಾರದ ಆರೋಪವನ್ನು ಬಿಜೆಪಿ ಮೇಲೆ ಹಾಕುವ ತಂತ್ರವಾಗಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಹೇಳಿದ್ದಾರೆ. ಭಾನುವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ನಲ್ಲಿ ಎರಡ್ಮೂರು ಗುಂಪುಗಳಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಇದರ ವಿಷಯಾಂತರ ಮಾಡಲು ಲೋಕಾದಾಳಿಯಂತಹ ಷಡ್ಯಂತ್ರ ಮಾಡಲಾಗಿದೆ. ಈ ಬಗ್ಗೆ ಕೆಲವು ಆಡಿಯೋ ರೆಕಾರ್ಡ್ ಹೊರಗೆ ಬಂದಿವೆ. ದುಡ್ಡನ್ನು ಯಾರ ಕೈಯಲ್ಲಿ ಕೊಟ್ಟಿದ್ದಾರೆ ಎನ್ನುವುದಕ್ಕೆ ಆಧಾರವಿಲ್ಲ. ಈ ವಿಷಯದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕೈವಾಡವಿದೆ ಎಂದರು.ಮುಖ್ಯಮಂತ್ರಿಗಳ ಸರಣಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿರಾಣಿ, ಮೊದಲನೇ ಅವಧಿಯಲ್ಲಿ ಯಾವ ರೀತಿ ಮುಖ್ಯಮಂತ್ರಿ ಆಡಳಿತ ಕೊಟ್ಟಿದ್ದಾರೆಯೋ ಎರಡನೇ ಅವಧಿಯಲ್ಲಿ ವಿಫಲರಾಗಿದ್ದಾರೆ. ವಿಫಲರಾಗಿ ಹತಾಶರಾಗಿದ್ದಾರೆ. ಅವರನ್ನು ಬಿಜೆಪಿ, ಜೆಡಿಎಸ್‌ಗಿಂತ ಅವರ ಪಕ್ಷದವರೇ ತುಳಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಸಮಸ್ಯೆಗಳನ್ನು ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಸಿಕೊಳ್ಳಬೇಕು. ಆ ಮೂಲಕ ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂದು ನಿರಾಣಿ ಹೇಳಿದರು.