ಸಾರಾಂಶ
ಪುತ್ತೂರಿನ ಕಲ್ಲೇಗ ಭಾರತ ಮಾತಾ ಸಮುದಾಯ ಭವನದಲ್ಲಿ ಧರ್ಮಸ್ಥಳವತಿಯಿಂದ ಮದ್ಯವರ್ಜನ ಶಿಬಿರ ನಡೆಯಿತು. ಶಿಬಿರದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಮದ್ಯಪಾನಕ್ಕೆ ಪಂಚೇದ್ರಿಯಗಳು ಆಕರ್ಷಣೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಕುಡಿತ ನಿಲ್ಲಿಸುವ ವಿಚಾರದಲ್ಲಿ ಗಟ್ಟಿ ಮತ್ತು ದೃಢವಾದ ಮನಸ್ಸು, ಚಂಚಲತೆ ಇಲ್ಲದ ಹತೋಟಿ ಬೇಕಾಗಿದೆ. ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಎಲ್ಲರೂ ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಪುತ್ತೂರಿನ ಕಲ್ಲೇಗ ಭಾರತ ಮಾತಾ ಸಮುದಾಯ ಭವನದಲ್ಲಿ ಡಿ.೨೧ರಿಂದ ಡಿ.೨೮ರ ತನಕ ನಡೆಯುತ್ತಿರುವ ೧೭೭೭ನೇ ಮದ್ಯವರ್ಜನ ಶಿಬಿರದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.ಮದ್ಯರ್ಜನ ಶಿಬಿರವು ಸಪರಿಣಾಮಕಾರಿಯಾದ ಕಾರ್ಯಕ್ರಮವಾಗಿದೆ. ಬಹಳಷ್ಟು ಮಂದಿಯ ಹಣವು ಕುಡಿತದಿಂದಾಗಿ ಪೋಲಾಗುತ್ತಿದ್ದು, ಕುಡಿತಕ್ಕಾಗಿ ವ್ಯಯಿಸುವ ಹಣದಿಂದ ಕುಟುಂಬ ಬದುಕು ಹಾಳಾಗುತ್ತಿದೆ. ಕುಡಿದವರು ಕೆಟ್ಟವರಲ್ಲ ಆದರೆ ಕುಡಿತದಿಂದಾಗಿ ಮತಿ ಭ್ರಮಣೆಯಾಗಿ ಕೆಟ್ಟತನ ಮಾಡುತ್ತಾರೆ. ವ್ಯಕ್ತಿತ್ವವನ್ನು ನಾಶಮಾಡುವ ಮದ್ಯಪಾನವನ್ನು ದೃಡ ಮನಸ್ಸಿನಿಂದ ಬಿಡಬೇಕು. ಇದರಿಂದ ಕುಟುಂಬ ಬುದುಕು ಉತ್ತಮವಾಗುತ್ತದೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಮದ್ಯದ ಚಟದಿಂದಾಗಿ ಆರ್ಥಿಕ, ಮಾನಸಿಕ ಮತ್ತು ಆರೋಗ್ಯವನ್ನು ನಾಶಪಡಿಸಿ ಇಡೀ ಕುಟುಂಬವನ್ನು ಸರ್ವನಾಶ ಮಾಡುತ್ತದೆ. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಮುಂದೆ ಸಂಪೂರ್ಣವಾಗಿ ಮದ್ಯಪಾನದಿಂದ ದೂರವಾಗಬೇಕು ಎಂದರು.ಮದ್ಯವರ್ಜನ ಶಿಬಿರದ ಶಿಬಿರಾರ್ಥಿ ಪ್ರವೀಣ್ ಮತ್ತು ಕಳೆದ ೧೮ ವರ್ಷಗಳ ಹಿಂದೆ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮದ್ಯಮುಕ್ತರಾದ ಕಬಕ ನಿವಾಸಿ ಅಣ್ಣು ಎಂಬವರ ಪತ್ನಿ ಗುಲಾಬಿ ಅನಿಸಿಕೆ ವ್ಯಕ್ತ ಪಡಿಸಿದರು. ೮೭ ಮಂದಿ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಭಟ್, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ, ಕಡಬ ತಾಲೂಕು ಅಧ್ಯಕ್ಷ ವಕೀಲ ಮಹೇಶ್ ಸವಣೂರು, ವೈದ್ಯ ಡಾ. ಸುರೇಶ್ ಪುತ್ತೂರಾಯ, ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು, ಮಾಜಿ ಅಧ್ಯಕ್ಷರಾದ ಮಹಾಬಲ ರೈ ಒಳತ್ತಡ್ಕ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶಶಿಕುಮಾರ್ ರೈ ಬಾಲ್ಯೊಟ್ಟು, ಸಾಜ ರಾಧಾಕೃಷ್ಣ ಆಳ್ವ, ಜನಜಾಗೃತಿ ವೇದಿಕೆ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ದುಗ್ಗೇಗೌಡ, ಪ್ರವೀಣ್ ಕುಮಾರ್, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ಯೋಜನೆಯ ಗಣೇಶ್ ಆಚಾರ್ಯ ನಿರೂಪಿಸಿದರು.