ನಯ, ವಿನಯದಿಂದ ವರ್ತಿಸಬೇಕು: ಶಶಿಧರ ಶಾಸ್ತ್ರೀಗಳು

| Published : Apr 10 2025, 01:15 AM IST

ಸಾರಾಂಶ

ನರಗುಂದ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಹಾಗೂ ಗೋಪುರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ 7ನೇ ದಿನದ ಬಸವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶರಣ ಶ್ರೀ ಶಶಿಧರ ಶಾಸ್ತ್ರೀಗಳು ಹಿರೇಮಠ ಪ್ರವಚನ ನೀಡಿದರು.

ನರಗುಂದ: ಸಮಾಜದಲ್ಲಿ ಮನುಷ್ಯನಲ್ಲಿ ನಯ, ವಿನಯ ಇದ್ದರೆ ಮಾತ್ರ ಅದು ದಯವೇ ಧರ್ಮದ ಮೂಲವಾಗುತ್ತದೆ. ಆದ್ದರಿಂದ ಮನುಷ್ಯ ಜೀವಿ ನಯ ವಿನಯದಿಂದ ವರ್ತಿಸಬೇಕು ಎಂದು ಪದ್ಮಭೂಷಣ ಡಾ. ಪುಟ್ಟರಾಜ ಕವಿ ಕವಾಯಿಗಳವರ ಶಿಷ್ಯರಾದ ಶರಣ ಶ್ರೀ ಶಶಿಧರ ಶಾಸ್ತ್ರೀಗಳು ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಹಾಗೂ ಗೋಪುರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ 7ನೇ ದಿನದ ಬಸವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನ ಪ್ರವರ್ಧಮಾನ ತಲುಪಿದ ವೇಳೆಗಾಗಲೆ ಬ್ರಾಹ್ಮಣ್ಯ ಸಂಪ್ರದಾಯದಂತೆ ಉಪನಯನ ಕಾರ್ಯದ ಬಗ್ಗೆ ಮನೆಯಲ್ಲಿ ಚರ್ಚೆ ಆರಂಭವಾಯಿತು. ಆ ಸಮಯದಲ್ಲಿ ಬಾಲ ಬಸವಣ್ಣ ತನ್ನ ಮನದಾಳದ ದುಗುಡವನ್ನು ತಂದೆಯ ಬಳಿ ಹೇಳಿಕೊಂಡ. ಪ್ರಾಣಿ ಬಲಿ ಅಮಾನವೀಯ ಕೃತ್ಯವನ್ನು ಬಹಿಷ್ಕರಿಸುವಂತೆ ವಿನಂತಿಸಿದ. ಪ್ರಾಣಿಬಲಿ ಹಿಂದಿನಿಂದ ಬಂದ ಸಂಪ್ರದಾಯ, ಅದನ್ನು ನಡಸಲೇಬೇಕು ಎಂದಾಗ, ಪ್ರತಿ ಜೀವಿಗಳಿಗೂ ಜೀವಿತ ಹಕ್ಕು ಇದೆ, ಅದನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ದಯವೇ ಧರ್ಮದ ಮೂಲವಯ್ಯ, ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಉದ್ಗರಿಸುತ್ತ, ಉಪನಯನವನ್ನೆ ಧಿಕ್ಕರಿಸಿದ ದಯಾಪರ ಪುರುಷ ಬಸವಣ್ಣ ಎಂದರು.

ಮೇಲಾಗಿ ನಿಮ್ಮ ಗೊಡ್ಡು ಸಂಪ್ರದಾಯಗಳು ನನಗಷ್ಟೆ ಏಕೆ ಸೀಮಿತಿಗೊಳಿಸಿದ್ದೀರಿ? ಅಕ್ಕ ನಾಗಲಾಂಬಿಕೆಗೆ ಏಕೆ ಉಪನಯನ ಮಾಡುತ್ತಿಲ್ಲ ಎಂದಾಗ, ಉಪನಯನವಾದ ನಂತರ ಮುಟ್ಟು ಚಟ್ಟುಗಳನ್ನು ಖಡ್ಡಾಯವಾಗಿ ಪಾಲಿಸಬೇಕು, ಹೆಣ್ಣು ಮಕ್ಕಳು ಋತುಸ್ರಾವ ಕ್ರಿಯಗೆ ಒಳಗಾಗುವುದರಿಂದ ಮುಟ್ಟಿನಿಂದ ಪಾವಿತ್ರ್ಯತೆ ಹಾಳಾಗುವುದರಿಂದ ಗಂಡು ಮಕ್ಕಳಿಗೆ ಮಾತ್ರ ಉಪನಯನ ಕಾರ್ಯ ಮಾಡಲಾಗುವುದು ಎಂದು ತಿಳಿದ ತಕ್ಷಣ, ಲಿಂಗಾಸಮಾನತೆ ಇಲ್ಲದ ಈ ಸಮಾಜದಲ್ಲಿ ಹೆಣ್ಣು ಕೀಳು - ಗಂಡು ಮೇಲು ಎಂದಾದರೆ ಧಿಕ್ಕಾರವಿರಲಿ ನಿಮ್ಮ ಸಂಪ್ರದಾಯಕ್ಕೆ ಎಂದು, ಮನೆ ತ್ಯಜಿಸಿ ಹೊರಟ ಬಸವಣ್ಣವರು ಮುಂದೆ ಲಿಂಗಸಮಾನತೆ ದಯಾಪರನಾಗಿ ಬೆಳೆದು ನಿಂತರು. ಸಮಾಜದಲ್ಲಿ ಸಮಾನತೆಗಾಗಿ ಜೀವನ ಪೂರ್ತಿ ಬಸವಣ್ಣವರು ಹೋರಾಟ ನಡೆಸಿದರು ಎಂದರು.

ಶಾಂತಲಿಂಗ ಶ್ರೀಗಳು, ಕಾರ್ಯಕ್ರಮದ ಉಪಾಧ್ಯಕ್ಷ ಪ್ರಕಾಶಗೌಡ ನಾಗನಗೌಡ, ವೀರಯ್ಯ ದೊಡ್ಡಮನಿ, ಗುರುಬಸಯ್ಯ ಶೆಲ್ಲಿಕೇರಿ, ದ್ಯಾಮಣ್ಣ ಕಾಡಪ್ಪನವರ, ಆರ್.ಐ. ನದಾಫ್‌, ಲಾಲಸಾಬ ಅರಗಂಜಿ, ನಾಗನಗೌಡ ತಿಮ್ಮನಗೌಡ್ರ, ಹನುಮಂತ ಕಾಡಪ್ಪನವರ, ಪ್ರಾಚಾರ್ಯರಾದ ಬಿ.ಆರ್. ಸಾಲಿಮಠ ಇದ್ದರು.