ಪಂಚಾಂಗ ವಿಚಾರಗಳನ್ನು ಅರಿತು ಬಾಳಬೇಕು: ಕೇದಾರಲಿಂಗ ಶ್ರೀ

| Published : Apr 02 2025, 01:06 AM IST

ಸಾರಾಂಶ

ಪಟ್ಟಣದ ಕಲ್ಲುಸಾಗರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಹಿಂಭಾಗದಲ್ಲಿರುವ ಹಿರೇಮಠದ ಆವರಣದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಿತು.

- ಚನ್ನಗಿರಿ ಹಿರೇಮಠದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ಸಂಪನ್ನ । ರಾಶಿಫಲಗಳ ಕುರಿತು ಮಾಹಿತಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಕಲ್ಲುಸಾಗರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಹಿಂಭಾಗದಲ್ಲಿರುವ ಹಿರೇಮಠದ ಆವರಣದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಿತು.

ಹೊದಿಗೆರೆಯ ದೈವ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ವಿದ್ವಾನ್ ಶ್ರೀ ಬೂದಿಸ್ವಾಮಿ ಅವರು, ಸೋಮವಾರ ಸಂಜೆ ಯುಗಾದಿ ಚಂದ್ರ ದರ್ಶನದ ನಂತರ ಏರ್ಪಡಿಸಿದ್ದ ನೂತನ ವರ್ಷದ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ನೂತನ ವರ್ಷದ ವಿಶ್ವಾವಸು ಪಂಚಾಂಗದಲ್ಲಿ ಅಡಕವಾಗಿರುವ ಮಳೆ, ಬೆಳೆಯ ಸಮೃದ್ಧಿ ದೇಶದ ರಾಜಕಾರಣದ ಏರು-ಪೇರುಗಳು, ಜನತೆಗೆ ಆರೋಗ್ಯ ಸಮೃದ್ದಿ ಸೇರಿದಂತೆ 12 ರಾಶಿಗಳ ಗೋಚರ ಫಲಗಳ ಕುರಿತು ಭಕ್ತರಿಗೆ ತಿಳಿಸಿದರು.

ಶ್ರೀ ಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಪಂಚಾಂಗ ಶ್ರವಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪಂಚಾಂಗದಲ್ಲಿ ಘಟಿಸಬಹುದಾದ ವಿಚಾರಗಳು ಬಹುತೇಕವಾಗಿ ನಡೆಯಲಿವೆ. ಅದಕ್ಕಾಗಿ ಪ್ರತಿಯೊಬ್ಬ ನಾಗರೀಕರೂ ಪಂಚಾಂಗದ ವಿಚಾರಗಳನ್ನು ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರದಿಂದ ಜನಸಾಮಾನ್ಯರು ಜೀವನ ನಡೆಸಲು ತುಂಬಾ ಕಷ್ಟವಾದ ವಾತಾವರಣವಿದೆ. ದಿನನಿತ್ಯದ ವಸ್ತುಗಳ ಬೆಲೆಗಳ ಏರಿಕೆಯಿಂದ ಮನುಷ್ಯ ತತ್ತರಿಸಿ ಹೋಗುತ್ತಿದ್ದಾನೆ. ಹಣ, ಅಧಿಕಾರದ ಆಸೆಗಾಗಿ ಗ್ಯಾರಂಟಿಗಳೆಂಬ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯೇ ಕುಂಠಿತವಾಗಿದೆ ಎಂದರು.

ಸಾಮಾನ್ಯವಾಗಿ ಸರ್ಕಾರದ ಕೆಲಸ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು ಕನಿಷ್ಠ ಗೌರವಧನದಲ್ಲಿ ಸರ್ಕಾರದ ಹೇಳುವ ಪ್ರತಿಯೊಂದು ಕೆಲಸಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ಮಾಡುತ್ತಾರೆ. ಅವರಿಗೆ ಅವರ ಕೆಲಸಕ್ಕೆ ತಕ್ಕನಾದ ವೇತನವನ್ನು ನೀಡಲು ಮೀನ ಮೇಷ ಏಣಿಸುತ್ತಿವೆ. ಈ ಸರ್ಕಾರಗಳು ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ಯಾರಿಗೂ ತಿಳಿಸದೇ ಅವರಿಗೆ ಮನಬಂದಂತೆ ಹೆಚ್ಚಳ ಮಾಡಿಕೊಳ್ಳುತ್ತಾರೆ. ಇದು ಸ್ವಾರ್ಥಪರ ರಾಜಕಾರಣವಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಜನಸಾಮಾನ್ಯರಿಗೆ ₹10 ಕೊಟ್ಟಂತೆ ಮಾಡಿ ಅವರಿಂದ ತೆರಿಗೆ ರೂಪದಲ್ಲಿ ₹100 ವಸೂಲಿ ಮಾಡುತ್ತಿರುವ ಕ್ರಮ ಸರಿಯಲ್ಲ. ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಯಾವುದೇ ಸರ್ಕಾರಗಳು ಆಡಳಿತ ನಡೆಸಲಿ, ಸರ್ಕಾರದವರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆಗಳನ್ನು ನೀಡಿ ಬಲಿಷ್ಠ ಭಾರತ ನಿರ್ಮಾಣ ಮಾಡಲಿ ಎಂದರು.

ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಸಾಗರದ ಶಿವಲಿಂಗಪ್ಪ, ಸಮಾಜದ ಪ್ರಮುಖರಾದ ನಾಗೇಂದ್ರಯ್ಯ, ಸಂಗಯ್ಯ, ಎಲ್.ಎಂ. ರೇಣುಕಾ, ಕರಿಸಿದ್ದಪ್ಪ ಮಾಸ್ತರ್, ಜವಳಿ ಮಹೇಶ್ ಸೇರಿದಂತೆ ಭಕ್ತಸಮೂಹ ಹಾಜರಿದ್ದರು.

- - - -1ಕೆಸಿಎನ್‌ಜಿ2.ಜೆಪಿಜಿ:

ಚನ್ನಗಿರಿ ಪಟ್ಟಣದ ಹಿರೇಮಠದ ಆವರಣದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಆಶೀವಚನ ನೀಡಿದರು.

-1ಕೆಸಿಎನ್‌ಜಿ3.ಜೆಪಿಜಿ: ಹೊದಿಗೆರೆಯ ಶ್ರೀ ಬೂದಿಸ್ವಾಮಿ ಅವರು ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಿಕೊಟ್ಟರು.