ಒಂದೇ ಜಾಗ, ಇಬ್ಬರಿಗೆ ಖಾತೆ! ನಗರಸಭೆ ವಿವಾದ

| Published : Feb 11 2025, 12:49 AM IST

ಸಾರಾಂಶ

ನಗರಸಭಾಧಿಕಾರಿಗಳು ವೆಂಕಟೇಶ್ವರ ಮಹಲ್ ರಸ್ತೆಯಲ್ಲಿರುವ ಒಂದೇ ಜಾಗವನ್ನು ಇಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟು, (ಖಾತೆ ಸಂಖ್ಯೆ ಹಾಗೂ ಜಾಗದ ವಿಸ್ತೀರ್ಣವುಳ್ಳ ಅಳತೆ) ಬದಲಿಸಿ ಸಿಕ್ಕಿಬಿದ್ದು ವಿವಾದಕ್ಕೀಡಾಗಿರುವ ಘಟನೆ ಬೆಳಕಿಗೆ ಬಂದಿದೆ.

ಎನ್ .ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಗರಸಭಾಧಿಕಾರಿಗಳು ವೆಂಕಟೇಶ್ವರ ಮಹಲ್ ರಸ್ತೆಯಲ್ಲಿರುವ ಒಂದೇ ಜಾಗವನ್ನು ಇಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟು, (ಖಾತೆ ಸಂಖ್ಯೆ ಹಾಗೂ ಜಾಗದ ವಿಸ್ತೀರ್ಣವುಳ್ಳ ಅಳತೆ) ಬದಲಿಸಿ ಸಿಕ್ಕಿಬಿದ್ದು ವಿವಾದಕ್ಕೀಡಾಗಿರುವ ಘಟನೆ ಬೆಳಕಿಗೆ ಬಂದಿದೆ.

ರಾಮಕೃಷ್ಣ ಪರಮಹಂಸ ರಸ್ತೆಯ ಖಾಲಿ ನಿವೇಶನವೊಂದನ್ನು (ಹಾಲಿ ವೆಂಕಟೇಶ್ವರ ಮಹಲ್ ಸಮೀಪದಲ್ಲಿರುವ ಜಾಗ) ಪ್ರಭಾವತಿ ರಮೇಶ್ ಎಂಬವರ ಹೆಸರಿಗೆ ಮತ್ತು ಚಾಮರಾಜು, ಎಂ.ಶೇಖರ್ ಅಲಿಯಾಸ್ ಶೇಖರ್ ಬುದ್ದ ಎಂಬ ಇಬ್ಬರ ಹೆಸರಿಗೂ ಜಂಟಿ ಖಾತೆ ಮಾಡಲಾಗಿದ್ದು, ಇದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಕಳೆದ ಒಂದೂವರೆ ವರುಷದ ಹಿಂದೆ ನಗರಸಭಾಧಿಕಾರಿಗಳೇ ಒಂದೇ ಜಾಗವನ್ನು ಇಬ್ಬರಿಗೆ ಖಾತೆ ಮಾಡಿಕೊಟ್ಟಿದ್ದು ಇಬ್ಬರು ಹೆಸರಿಗೂ ಖಾತೆ ಮಾಡಲಾಗಿರುವ ಸ್ಥಳ ಹಾಗೂ ಸಂಬಂಧಪಟ್ಟವರು ನೀಡಿರುವ ಭಾವಚಿತ್ರವೂ ಒಂದೇ ಆಗಿದೆ. ನಿಜಕ್ಕೂ ಅಸಲಿ ಮಾಲೀಕರಾರು ಎಂಬುದು ಸ್ಪಷ್ಟವಾಗಬೇಕಿದೆ. ಹಾಗಾಗಿ ಈ ವಿಚಾರವು ನ್ಯಾಯಾಲಯದಲ್ಲೆ ಬಗೆಹರಿಸಿಕೊಳ್ಳಲಿ ಎಂದು ಸಂಬಂಧಿಸಿದ ಕೇಸ್ ವರ್ಕರ್ ಸಹಾ ಅಧಿಕಾರಿಗಳಿಗೆ ವರದಿ ನೀಡಿರುವುದು ಈಗ ನಾನಾ ಚರ್ಚೆಯ ಕೇಂದ್ರ ಬಿಂದುವಾಗಿದೆ. ನಗರಸಭಾಧಿಕಾರಿಗಳ ರಾದ್ದಾಂತ?:

ರಾಮಕೃಷ್ಣ ಪರಮಹಂಸ ಬಡಾವಣೆಯ ಖಾಲಿ ನಿವೇಶನದ 1864 ಸಂಖ್ಯೆಯ ಸುತ್ತಳತೆ ಒಳಗೊಂಡ 40 ಮತ್ತು 54 ವಿಸ್ತೀರ್ಣವಿದ್ದು ಚಾಮರಾಜು ಮತ್ತು ಎಂ. ಶೇಖರ್( ಅಲಿಯಾಸ್ ಶೇಖರ್ ಬುದ್ದ) ಎಂಬವರ ಹೆಸರಿಗೆ ಅಲ್ಲದೆ ಅದೇ ಜಾಗವನ್ನು 1887ಎ ಸಂಖ್ಯೆಯಡಿ ಪ್ರಭಾವತಿ ಕೋಂ ರಮೇಶ್ ಎಂಬ ಇಬ್ಬರು ಮಾಲೀಕರು ಹೆಸರಿಗೂ ಖಾತೆಯಾಗಿದೆ. ಇಬ್ಬರು ಖಾತೆದಾರರು ಸಹಾ ಮೂಲ ಖಾತೆದಾರರು ನಾವೇ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಸಲಿಗೆ ಪ್ರಭಾವತಿ ಅವರು ನಗರಸಭೆ ಅರ್ಜಿ ಸಲ್ಲಿಸಿ ಇ-ಸ್ವತ್ತು ನೀಡಲು ಅಗತ್ಯ ದಾಖಲೆ ಸಲ್ಲಿಸಿದ್ದ ಹಿನ್ನೆಲೆ ಇದೆ.

ಜಾಗ ಚಾಮರಾಜು ಮತ್ತು ಶೇಖರ್ ಎಂಬವರಿಗೆ ಹೆಸರಿಗೂ ಜಂಟಿ ಖಾತೆಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಆದರೆ ಪ್ರಭಾವತಿ ಅವರು ಇ-ಸ್ವತ್ತು ನಮಗೆ ಸೇರಿದ್ದು, ನಮಗೆ ದಶಕಗಳ ಹಿಂದೆಯೇ ಖಾತೆಯಾಗುತ್ತಿದೆ ಎಂದು ಕ್ರಯಪತ್ರ, ಆಸ್ತಿ ಖರೀದಿ, ನೋಂದಣಿ ಹಾಗೂ ಹಿಂದಿನ ಅಧಿಕಾರಿಗಳು ಖಾತೆ ಮಾಡಿಕೊಟ್ಟಿರುವ ಇ-ಸ್ವತ್ತು ನೀಡಿದ್ದು ನನಗೆ ಇ-ಸ್ವತ್ತು ನವಿಕರಣ ನೀಡಬೇಕು. ಮೂಲ ಮಾಲೀಕರು ನಾವೆ ಎಂದು ಮನವಿ ಸಲ್ಲಿಸಿರುವುದು ಸಹಾ ಬೆಳಕಿಗೆ ಬಂದಿದೆ.

ಏತನ್ಮಧ್ಯೆ ನಮ್ಮ ಬಳಿ ಈ ಜಾಗದ ಮಾಲೀಕರು ನಾವೇ, ನಮ್ಮಿಬ್ಬರಿಗೆ ಸೇರಿದ ಜಾಗ ಇದಾಗಿದ್ದು ನಗರಸಭೆ ನಮಗೆ ಇ-ಸ್ವತ್ತು ನವೀಕರಣಗೊಳಿಸಬೇಕು. ಇಲ್ಲದಿದ್ದರೆ ನಾವು ನ್ಯಾಯಾಲಯದಲ್ಲಿ ದಾವೆ ಹೊಡಬೇಕಾಗುತ್ತದೆ ಎನ್ನುತ್ತಾರೆ ಜಂಟಿ ಖಾತೆದಾರ ಎಂ.ಶೇಖರ ಬುದ್ದ ಮತ್ತು ಚಾಮರಾಜು. ಹಾಗಾಗಿ ಈ ವಿಚಾರ ಯಾವ ಹಂತ ತಲುಪಲಿದೆ. ಈ ಪ್ರಕರಣದಲ್ಲಿ ನಗರಸಭೆ ಮೂಲ ಮಾಲೀಕರನ್ನು ಪತ್ತೆ ಹಚ್ಚಿ ನ್ಯಾಯ ಸಲ್ಲಿಸುವುದೆ ಕಾದು ನೋಡಬೇಕಿದೆ.ಕೇಸ್ ವರ್ಕರ್ ಆರ್‌ಐ ನೈಜ ವರದಿ ಪತ್ರಿಕೆಗೆ ಲಭ್ಯ:ಈ ಪ್ರಕರಣದಲ್ಲಿ 2022ರಲ್ಲಿ ಇ-ಸ್ವತ್ತು ನವಿಕರಣಕ್ಕೆ ಪ್ರಬಾವತಿ ಎಂಬವರು ನಗರಸಭೆಗೆ ದಾಖಲೆ ಸಮೇತ ಅರ್ಜಿ ಸಲ್ಲಿಸಿ ನಗರಸಭಾಧಿಕಾರಿಗಳು ಕೋರಿದ ಅಗತ್ಯ ದಾಖಲೆ ಸಮೇತ ಮಾಹಿತಿ ಒದಗಿಸಿದ ಹಿನ್ನೆಲೆ ಪರಿಶೀಲನೆ ವೇಳೆ ಈ ಜಾಗ ಚಾಮರಾಜು, ಶೇಖರಬುದ್ದ ಎಂಬಿಬ್ಬರ ಹೆಸರಿಗೂ ಜಂಟಿ ಖಾತೆಯಾಗಿರುವ ಕುರಿತು ಅಂದಿನ ಅಧಿಕಾರಿಗಳ ಗಮನಕ್ಕೆ ಬರುತ್ತೆ. ನಂತರ ಈ ಪ್ರಕರಣದ ತೀವ್ರತೆ ಗಮನಿಸಿ 2023ರಲ್ಲಿಯೇ ಈ ಖಾತೆ ಜಾಗ ಪರಿಶೀಲಿಸದ ವೇಳೆ ಒಂದೇ ಜಾಗದಲ್ಲಿ ಫೋಟೊ ತೆಗೆಸಿಕೊಂಡು ಇಬ್ಬರು ಖಾತೆದಾರರು ಖಾತೆ ಮಾಡಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು ಅಚ್ಚರಿ ಮೂಡಿಸಿದೆ. ಅಕ್ರಮ ಖಾತೆಯಲ್ಲಿ ನಗರಸಭೆ ಖ್ಯಾತಿ:ಕೊಳ್ಳೇಗಾಲ ನಗರಸಭೆ ಅಕ್ರಮ ಖಾತೆ ಮಾಡಿಕೊಡುತ್ತಿರುವ ವಿಚಾರದಲ್ಲಿ ಕುಖ್ಯಾತಿಗೆ ಭಾಜನವಾಗಿರುವುದು ಜನಜನಿತ ವಿಚಾರ. ದಶಕಗಳ ಹಿಂದೆ ರಸ್ತೆಯೊಂದನ್ನ ಬಾಲಸುಬ್ರಮಣ್ಯಂ ರಾಜು, ಪ್ರಭಾಮಣಿ ಎಂಬವರಿಗೆ ಖಾತೆ ಮಾಡಿ ವಿವಾದಕ್ಕೀಡಾದ ಬೆನ್ನಲ್ಲೆ ಈ ಹಿಂದೆ ಖಾತೆ ರದ್ದು ಮಾಡಲಾಗಿತ್ತು. ಪುನಃ ಪಿಎಸಿಸಿ ಸಹಕಾರಿ ಸಂಘಕ್ಕೆ ಸೇರಿದ ಜಾಗವನ್ನು ಸಹಾ (ಅದು ರಸ್ತೆಗೆ ಬಿಡಲಾಗಿದೆ) ಅದನ್ನ ಸಹಾ ದಶಕಗಳ ಹಿಂದೆ ಹಿಂದಿನ ಅಧಿಕಾರಿಗಳು ಅಕ್ರಮ ಖಾತೆ ಮಾಡಿದ್ದು ಅದು ಸಹಾ ವಿವಾದದ ಕೇಂದ್ರ ಬಿಂದುವಾಗಿದೆ. ಅದೇ ರೀತಿಯಲ್ಲಿ ರಾಮನಾಥ್ ಎಂಬವರ ಕುಟುಂಬಕ್ಕೆ ಸೇರಿದ ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿನ ಜಾಗವು ಸಹಾ ಸಂಸ್ಥೆಯೊಂದರ ಹೆಸರಿಗೂ ಅಕ್ರಮ ಖಾತೆ ವಿಚಾರ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಪ್ರಭಾವತಿ, ಚಾಮರಾಜು ಮತ್ತು ಶೇಖರ ಬುದ್ದ ಎಂಬವರ ಹೆಸರಿಗೆ ಇದೆ ಜಾಗದಲ್ಲಿ ನಿಲ್ಲಿಸಿ ಪೋಟೊ ತೆಗೆದು ಇ-ಸ್ವತ್ತು ಮಾಡಿಕೊಡಲಾಗಿದೆ. ಅವರು ಇ- ಸ್ವತ್ತು ನವಿಕರಣಕ್ಕೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ 2 ದಾಖಲೆಗಳನ್ನು ಪರಿಶೀಲಿಸಿದ್ದು ಲೋಪ ಹಾಗೂ ಅಕ್ರಮ ಎಂದು ಕಂಡು ಬಂದ ಖಾತೆಯನ್ನು ಕೂಡಲೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಶೀಘ್ರದಲ್ಲೆ ಮನವಿ ಸಲ್ಲಿಸುವೆ.

-ರಮೇಶ್, ಕೊಳ್ಳೇಗಾಲ ನಗರಸಭೆ ಆಯುಕ್ತರುಮೂಲ ದಾಖಲೆ ನಮ್ಮ ಬಳಿ ಇದೆ. ಜಾಗ ನಮಗೆ ಸೇರಿದ್ದು ಹಾಗಾಗಿ ನಗರಸಭೆ ಇ-ಸ್ವತ್ತು ನವಿಕರಣಕ್ಕೆ ನಾನು, ಚಾಮರಾಜು ಅರ್ಜಿ ಸಲ್ಲಿಸದ್ದು ನಗರಸಭೆ ಇ-ಸ್ವತ್ತು ನವಿಕರಣ ಮಾಡದಿದ್ದರೆ ನಾವು ನ್ಯಾಯಕ್ಕಾಗಿ ಸಿವಿಲ್ ಕೋರ್ಟ್‌ ಮೊರೆ ಹೋಗದೆ ವಿಧಿ ಇಲ್ಲ.

-ಎಂ ಶೇಖರ್ ಬುದ್ದ (ವೆಂಕಟೇಶ್ವರ ಮಹಲ್ ರಸ್ತೆ ಜಾಗದ ಜಂಟಿ ಖಾತೆದಾರ)