ಆಶ್ರಯ ನಿವೇಶನ ಹಂಚಿಕೆಗೆ ಸಾವಿರ ಎಕರೆ ಭೂಮಿ

| Published : Oct 20 2025, 01:02 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆಶ್ರಯ ನಿವೇಶನ ಹಂಚಿಕೆಗಾಗಿ ಜಿಲ್ಲಾದ್ಯಂತ ಒಂದು ಸಾವಿರ ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ಗುರುತಿಸಿಲಾಗಿದ್ದು ಬೇಡಿಕೆ ಅನುಸಾರ ಮಂಜೂರು ಮಾಡಲಾಗುವುದೆಂದು ಜಿಲ್ಲಾದಿಕಾರಿ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಭೆ, ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜಿಗ್ ಕುರಿತು ಜರುಗಿದ ತ್ರೈಮಾಸಿಕ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರಾಶ್ರಿತರು, ದೌರ್ಜನ್ಯಕ್ಕೆ ಒಳಗಾದವರು, ನಿವೇಶನ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿಯೂ ಜಾಗ ಗುರುತಿಸಿ ಮೀಸಲು ಇರಿಸಬೇಕೆಂದರು.

ದೌರ್ಜನ್ಯಕ್ಕೆ ಒಳಾಗದವರ ಕುಟುಂಬಗಳಿಗೆ ಕಾಯ್ದೆ ಅನುಸಾರ ಧನ ಪರಿಹಾರದ ಜೊತೆ ನಿವೇಶನ ಹಂಚಿಕೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಂಜೂರು ಮಾಡುವ ಸಮಯದಲ್ಲಿಯೂ ಆದ್ಯತೆ ನೀಡಲಾಗುವುದು. ದೌರ್ಜನ್ಯ ಪ್ರಕರಣದಲ್ಲಿ ಹಲ್ಲೆಯಿಂದ ಬಲಿಯಾದವರ ಕುಟುಂಬದ ಸದಸ್ಯರಿಗೆ ನಿಯಮಾನುಸಾರ ಉದ್ಯೋಗ ಒದಗಿಸಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ವರೆಗೆ ಒಟ್ಟು 30 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಸಂತ್ರಸ್ಥರಿಗೆ ಒಟ್ಟು 40.42 ಲಕ್ಷ ರು. ಪರಿಹಾರ ಧನ ನೀಡಲಾಗಿದೆ. 6 ಪ್ರಕರಣದಲ್ಲಿ ಸಂತ್ರಸ್ಥರು ಮರಣ ಹೊಂದಿದ್ದಾರೆ. 3 ಅತ್ಯಾಚಾರ, 21 ಜಾತಿ ನಿಂದನೆ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ವಿವಿಧ ನ್ಯಾಯಾಲಯಗಳಲ್ಲಿ 136 ದೌರ್ಜನ್ಯ ಪ್ರಕರಣಗಳು ಬಾಕಿಯಿವೆ. ಈ ಪೈಕಿ 01 ಪ್ರಕರಣದಲ್ಲಿ ಶಿಕ್ಷೆಯಾದರೆ, 12 ಪ್ರಕರಣಗಳಲ್ಲಿ ಆರೋಪಿತರು ಬಿಡುಗಡೆಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆ ಕರೆ ತರಬೇಕು. ಗ್ರಾಮೀಣ ಭಾಗದಲ್ಲಿ ದೇವರ ಹೆಸರಿನಲ್ಲಿ ಅಮಾನವೀಯ ಮೌಢ್ಯ ಪದ್ಧತಿಗಳು ನಡೆಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಹೆಚ್ಚುವರಿಯಾಗಿ ಆಹಾರ, ಹಾಲು, ಮೊಟ್ಟೆ ವಿತರಿಸುವುದರ ಜೊತೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಬಾಲ ಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಡಿಸಿ ವೆಂಕಟೇಶ್ ಸೂಚಿಸಿದರು.

ಜಿಲ್ಲೆಯಲ್ಲಿ ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇ ಮಾಡಲು ಪ್ರತ್ಯೇಕವಾಗಿ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಸಂತ್ರಸ್ಥರು ನೇರವಾಗಿ ಈ ವಿಶೇಷ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಬಹುದು. ಇತರೆ ಠಾಣೆಗಳಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳನ್ನು ವಿಶೇಷ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು ಸಭೆಯಲ್ಲಿ ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಇಲ್ಲ. ಆದರೆ 2013ಕ್ಕಿಂತ ಮುನ್ನ ಇದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕೆಲಸಗಾರರ ಕುಟುಂಬದ ವಿವರಗಳನ್ನು ಸಂಗ್ರಹಿಸಬೇಕು. ಅವರಿಗೆ ದೊರೆತ ಯೋಜನೆಗಳ ಮಾಹಿತಿಯನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಪಶು ವೈದ್ಯಕೀಯ ಹಾಗೂ ಪಶು ಸೇವಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.