ಒಂದು ಯುನಿಟ್ ರಕ್ತ ಹಲವು ಜೀವಗಳಿಗೆ ನೆರವು: ವೃತ್ತ ನಿರೀಕ್ಷಕ ನಿರಂಜನ್

| Published : Sep 06 2025, 01:00 AM IST

ಒಂದು ಯುನಿಟ್ ರಕ್ತ ಹಲವು ಜೀವಗಳಿಗೆ ನೆರವು: ವೃತ್ತ ನಿರೀಕ್ಷಕ ನಿರಂಜನ್
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮ ರಕ್ತದಾನ ಮಾಡಬಹುದು. ರಕ್ತದಾನದಿಂದ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಿಸುತ್ತದೆ. ಸಾವು ನೋವಿನಲ್ಲಿರುವ ಜನರಿಗೆ ರಕ್ತದಾನ ಮಾಡಿದ ಪುಣ್ಯವೂ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಯುವ ಸಮುದಾಯ ಸ್ವಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕು.

ಪ್ರತಿಯೊಬ್ಬರೂ ರಕ್ತದಾನ ಮಾಡಿ:

ಕನ್ನಡಪ್ರಭವಾರ್ತೆ ನಾಗಮಂಗಲ

ಅಪಘಾತ, ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಆರೋಗ್ಯವಂತರು ರಕ್ತದಾನ ಮಾಡುವ ಒಂದು ಯುನಿಟ್ ರಕ್ತದಿಂದ ಹಲವು ಜೀವಗಳನ್ನು ಉಳಿಸಲು ನೆರವಾಗಬೇಕು ಎಂದು ವೃತ್ತ ನಿರೀಕ್ಷಕ ನಿರಂಜನ್ ತಿಳಿಸಿದರು.

ಪಟ್ಟಣದ ಮೈಸೂರು ರಸ್ತೆಯ ಎಂಬಿಎಸ್ ಕಲ್ಯಾಣ ಮಂಟಪದಲ್ಲಿ ಈದ್‌ ಮಿಲಾದ್ ಹಬ್ಬದ ಪ್ರಯುಕ್ತ ಜಾಮಿಯಾ ಮಸೀದಿ ಮ್ಯಾನೇಜಿಂಗ್ ಕಮಿಟಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೂಡ ರಕ್ತಕ್ಕೆ ಪರ್‍ಯಾಯವಾಗಿ ಯಾವುದನ್ನೂ ತಯಾರಿಸಲು ಸಾಧ್ಯವಾಗಿಲ್ಲ ಎಂದರು.

ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮ ರಕ್ತದಾನ ಮಾಡಬಹುದು. ರಕ್ತದಾನದಿಂದ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಿಸುತ್ತದೆ. ಸಾವು ನೋವಿನಲ್ಲಿರುವ ಜನರಿಗೆ ರಕ್ತದಾನ ಮಾಡಿದ ಪುಣ್ಯವೂ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಯುವ ಸಮುದಾಯ ಸ್ವಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ ಮಾತನಾಡಿ, ಪ್ರತಿನಿತ್ಯ ಹತ್ತು ಜನರ ಪೈಕಿ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ವಯಸ್ಕರಲ್ಲಿ ಅನಿಮಿಯಾ ಎಂಬ ಕಾಯಿಲೆ ಕಂಡು ಬರುತ್ತಿದೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ರಕ್ತ ಅತ್ಯವಶ್ಯಕ. ರಕ್ತದಾನ ಶಿಬಿರವು ಸಮಾಜಮುಖಿ ಕೆಲಸ. ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದರು.

ಜಾಮಿಯಾ ಮಸೀದಿ ಮ್ಯಾನೇಜಿಂಗ್ ಕಮಿಟಿ ಕಾರ್ಯದರ್ಶಿ ಇರ್ಷಾದ್‌ಪಾಷ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ತಾರತಮ್ಯವಿಲ್ಲದೆ ಶಾಂತಿ- ನೆಮ್ಮದಿಯಿಂದ ಸಾಮರಸ್ಯದ ಬದುಕು ನಡೆಸಬೇಕು. ಉಳ್ಳವರು ಬಡವರಿಗೆ ಸಹಾಯ ಮಾಡಬೇಕೆಂಬ ಮಹಮ್ಮದ್ ಪೈಗಂಬರ್ ಅವರ ಆಶಯದಂತೆ ಅತ್ಯವಶ್ಯಕವಿರುವ ರೋಗಿಗಳಿಗೆ ಅನುಕೂಲವಾಗಲೆಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.

ಈ ವೇಳೆ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪುರಸಭೆ ಸದಸ್ಯ ನದೀಮ್‌ಪಾಷ, ಹನೀಫ್‌ಮಸೀದಿ ಅಧ್ಯಕ್ಷ ಮಹಮ್ಮದ್ ಜಫ್ರುಲ್ಲಾ, ಕಮಿಟಿ ಸದಸ್ಯರಾದ ಇದ್ರೀಸ್‌ಪಾಷ, ಯೂನೂಸ್ ಪಾಷ, ಅತೀಖ್‌ಪಾಷ, ಆರ್.ಕೆ.ರೆಹಮಾನ್, ಸಾದಿಕ್‌ಪಾಷ ಸೇರಿದಂತೆ ಹಲವರು ಇದ್ದರು.

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ:

ನಾಗಮಂಗಲ: ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ಮುಸ್ಲಿಂ ಸಮುದಾಯ ಮುಖಂಡರು ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮತ್ತು ಟಿಎಚ್‌ಒ ಡಾ.ನಾರಾಯಣ, ಮಕ್ಕಳ ತಜ್ಞ ಡಾ.ಆದಿತ್ಯ, ನೇತ್ರ ತಜ್ಞ ಡಾ.ಪ್ರಕಾಶ್‌ ನಾಯಕ್, ಜಾಮಿಯಾ ಮಸೀದಿ ಮ್ಯಾನೇಜಿಂಗ್ ಕಮಿಟಿ ಕಾರ್ಯದರ್ಶಿ ಇರ್ಷಾದ್‌ಪಾಷ, ಮುಖಂಡರಾದ ಸಿಬ್ಗತ್ ಅಲಿಖಾನ್, ಸಾದಿಕ್‌ಪಾಷ ಸೇರಿದಂತೆ ಹಲವರು ಇದ್ದರು.