ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಮಹಿಳಾ ಸಬಲೀಕರಣ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆ ಒಂದು ವರ್ಷ ಪೂರೈಸಿದೆ. ಯೋಜನೆ ಅಡಿಯಲ್ಲಿ ಜೂನ್ 9ರವರೆಗೆ 225.15 ಕೋಟಿ ಮಹಿಳಾ ಪ್ರಯಾಣಿಕರು ಲಾಭ ಪಡೆದಿದ್ದಾರೆ.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲು ಅನುಷ್ಠಾನಗೊಂಡ (2023 ಜೂ. 11) ಶಕ್ತಿ ಯೋಜನೆ ಭರ್ಜರಿ ಯಶಸ್ವಿಯಾಗಿದೆ. ಕಳೆದೊಂದು ವರ್ಷದಲ್ಲಿ ಯೋಜನೆ ಅಡಿ 225.15 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಹೀಗೆ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ವೆಚ್ಚವನ್ನು ನಿಗಮಗಳಿಗೆ ರಾಜ್ಯ ಸರ್ಕಾರ ಭರಿಸುತ್ತಿದ್ದು, ಜೂನ್ 9ರವರೆಗೆ ಒಟ್ಟು 5481.40 ಕೋಟಿ ರು.ಗಳನ್ನು ನೀಡಲಾಗಿದೆ. ಆರಂಭದಲ್ಲಿ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಯಿತಾದರೂ, ಆನಂತರ ಮಹಿಳಾ ಪ್ರಯಾಣಿಕರಿಂದ ಬಂದ ಪ್ರತಿಕ್ರಿಯೆಯಿಂದಾಗಿ ಯೋಜನೆ ಯಶಸ್ವಿಗೊಂಡಿದೆ.
ಯೋಜನೆ ಆರಂಭಕ್ಕೂ ಹಿಂದೆ ಕಡಿಮೆಯಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ, ಯೋಜನೆ ನಂತರ ಪುರುಷ ಪ್ರಯಾಣಿಕರಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚುವಂತಾಗಿದೆ. ಶಕ್ತಿ ಆರಂಭದಿಂದ ಈವರೆಗೆ 390.58 ಕೋಟಿ ಒಟ್ಟು ಪ್ರಯಾಣಿಕರು ಸಂಚರಿಸಿದ್ದರೆ, ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ 225.15 ಕೋಟಿಯಾಗಿದೆ.ಯೋಜನೆ ಆರಂಭವಾದ ತಿಂಗಳನ್ನು ಹೊರತುಪಡಿಸಿ ಆನಂತರದಿಂದ ಪ್ರತಿ ತಿಂಗಳು ಸರಾಸರಿ 18ರಿಂದ 19 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದರು. ಅಲ್ಲದೆ, 2023-24ನೇ ಸಾಲಿನ 10 ತಿಂಗಳಲ್ಲಿ 181.69 ಕೋಟಿ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದು, ಅದಕ್ಕಾಗಿ ಸರ್ಕಾರ 4,341.13 ಕೋಟಿ ರು. ವ್ಯಯಿಸಿದೆ.ಯಾವ ಕಾರಣಕ್ಕೂ ನಿಲ್ಲಿಸಲ್ಲ:
ಶಕ್ತಿ ಯೋಜನೆಯನ್ನು ವಿರೋಧ ಪಕ್ಷಗಳು ಆರಂಭದಲ್ಲಿ ಟೀಕಿಸಿದ್ದವು. ಆದರೆ, ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತರಲಾದ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಯಶಸ್ಸು ಕಂಡಿದೆ. ಶಕ್ತಿ ಯೋಜನೆಯನ್ನು ಚುನಾವಣೆಗಳನ್ನು ಗೆಲ್ಲಲು ಜಾರಿಗೆ ತಂದಿಲ್ಲ. ಬದಲಿಗೆ ಮಹಿಳೆಯರ ಅನುಕೂಲಕ್ಕಾಗಿ ಜಾರಿಗೆ ತರಲಾಗಿದೆ. ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ.- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ