ಕನ್ನಡಪ್ರಭ ವಾರ್ತೆ ಬೆಂಗಳೂರು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಮೊದಲ ಬಾರಿಗೆ ಗೆದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡವನ್ನು ಅಭಿನಂದಿಸುವ ಸಂಭ್ರಮದ ವೇಳೆ ಕರುನಾಡಿನ ‘ಕ್ರಿಕೆಟ್ ಕಾಶಿ’ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ 11 ಅಭಿಮಾನಿಗಳನ್ನು ಬಲಿಪಡೆದ ಘಟನೆಗೆ ವರ್ಷ ತುಂಬಿದೆ.ಎರಡನೇ ಬಾರಿ ಐಪಿಎಲ್ ಕಪ್ ಗೆದ್ದು ಆರ್‌ಸಿಬಿ ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ ಕಳೆದ ವರ್ಷ ಸಂಭವಿಸಿದ ಈ ಕಪ್ ತುಳಿತದ ನೆನಪು ಸ್ಮೃತಿಪಟಲದಲ್ಲಿ ಇನ್ನೂ ಮರೆಯಾಗಿಲ್ಲ. ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪ ಪಟ್ಟಿಯನ್ನು ಸಿಐಡಿ ಸಲ್ಲಿಸಿದೆ. ಇಷ್ಟಾದರೂ ಘಟನೆ ನಡೆದು ವರ್ಷ ಕಳೆದರೂ ದುರ್ಘಟನೆಯ ಹೊಣೆಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ!
ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಗಳಿಗೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಐಪಿಎಲ್ ಆರಂಭಕ್ಕೂ ಮುನ್ನ ಕಾಲ್ತುಳಿತ ಘಟನೆಯಲ್ಲಿ ಮೃತರ ನೆನಪಿಗೆ ಕ್ರೀಡಾಂಗಣದ ಆವರಣದಲ್ಲಿ ಸ್ಮಾರಕವೊಂದನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಮಿಸಿತು. ಅಲ್ಲದೆ ಐಪಿಎಲ್ ಪಂದ್ಯಗಳಲ್ಲಿ 11 ಆಸನಗಳನ್ನೂ ಮೀಸಲಿಟ್ಟು ಕೆಎಸ್‌ಸಿಎ ಗೌರವ ಸಲ್ಲಿಸಿತು.ಏನಿದು ಘಟನೆ?:
2025ರ ಜನವರಿ 3 ರಂದು ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿತು. ಐಪಿಎಲ್‌ನ 17 ವರ್ಷದ ಇತಿಹಾಸದಲ್ಲಿ ಆರ್‌ಸಿಬಿ ಕಪ್ ಗೆಲ್ಲುತ್ತಿರುವುದು ಇದೇ ಮೊದಲು. ಆಗ ತಮ್ಮ ನೆಚ್ಚಿನ ತಂಡ ಚಾಂಪಿಯನ್ ಪಟ್ಟಕ್ಕೇರುವುದನ್ನು ಶಬರಿಯಂತೆ ಕಾದಿದ್ದ ಆರ್‌ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಮರು ದಿನ ಐಪಿಎಲ್ ವಿಜೇತ ತಂಡದ ವಿಜಯೋತ್ಸವ ಆಚರಣೆಗೆ ತವರಿನಲ್ಲಿ ಸಿದ್ಧತೆಯೂ ನಡೆಯಿತು. ಇಡೀ ರಾತ್ರಿ ಗೆಲುವಿನ ಉನ್ಮಾನದಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಆರ್‌ಬಿಸಿ ತಂಡದ ವಿಜಯೋತ್ಸವ ಮೆರೆವಣಿಗೆಗೆ ಪೊಲೀಸರು ಕೆಂಪು ಬಾವುಟ ತೋರಿಸಿದರು. ಆದರೆ ಇದನ್ನು ಗಣನೆಗೆ ತೆದೆದುಕೊಳ್ಳದೆ ಆರ್‌ಸಿಬಿ ತಂಡವನ್ನು ಅಭಿನಂದಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತು.
ಪೊಲೀಸರು ಹಾಗೂ ಸರ್ಕಾರ ಮಟ್ಟದಲ್ಲಿ ಹಗ್ಗಜಗ್ಗಾಟದ ಬಳಿಕ ಕೊನೆಗೆ ಸರ್ಕಾರವೇ ಮೇಲುಗೈ ಸಾಧಿಸಿತು. ಕೊನೆಗೆ ವಿಧಾನಸೌಧದ ಮುಂದೆ ಸರ್ಕಾರದ ಪರ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ, ಆರ್‌ಸಿಬಿ ಆಡಳಿತ ಮಂಡಳಿ ಜಂಟಿಯಾಗಿ ಅಭಿನಂದನಾ ಸಮಾರಂಭ ಆಯೋಜಿಸಿದ್ದವು. ಆದರೆ ವಿಜಯೋತ್ಸವ ಮೆರವಣಿಗೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ಆದರೆ ವಿಕ್ಟರಿ ಪರೇಡ್ ನಡೆಯಲಿದೆ ಎಂದು ಆರ್‌ಸಿಬಿ ಆಡಳಿತ ಮಂಡಳಿ ಸಂದೇಶ ಹಂಚಿಕೊಂಡ ಆರೋಪ ಕೇಳಿ ಬಂತು. ಇದರಿಂದ ವಿಜಯೋತ್ಸವ ಆಚರಣೆ ವೇಳೆ ಜಮಾಯಿಸಿದ್ದ ಅಸಂಖ್ಯಾತ ಸಂಖ್ಯೆಯ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನುಗ್ಗಲು ಅಭಿಮಾನಿಗಳು ಯತ್ನಿಸಿದಾಗ ಭಾರೀ ಕಾಲ್ತುಳಿತ ಸಂಭವಿಸಿತು. ದುರಂತದಲ್ಲಿ 11 ಅಭಿಮಾನಿಗಳು ಮೃತಪಟ್ಟರು. 33ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಸಂಬಂಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣವೂ ದಾಖಲಾಯಿತು. ಕಾರ್ಯಕ್ರಮ ಆಯೋಜಕ ಕಂಪನಿಯ ಐವರನ್ನು ಪೊಲೀಸರು ಬಂಧಿಸಿದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಅವರು ಹೊರಬಂದರು. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತು.
ಆಯುಕ್ತರು ಸೇರಿ ಐವರು ಪೊಲೀಸರ ತಲೆದಂಡಕಾಲ್ತುಳಿತ ದುರಂತ ಸಂಬಂಧ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ಅವರನ್ನು ಸರ್ಕಾರ ಅಮಾನತುಗೊಳಿಸಿತು. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೆಂಗಳೂರು ಆಯುಕ್ತರು ಅಮಾನತುಗೊಂಡಿದ್ದು ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿತು. ಎಂಟು ತಿಂಗಳ ಬಳಿಕ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಲಾಯಿತು.
ನ್ಯಾಯಾಂಗ ತನಿಖೆ ರಚಿಸಿದ ಸರ್ಕಾರಕಾಲ್ತುಳಿತ ಘಟನೆಗೆ ಹೈಕೋರ್ಟ್ ನಿವೃತ್ತ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ತನಿಖಾ ಆಯೋಗವನ್ನು ಸರ್ಕಾರ ರಚಿಸಿತು. ಈ ಸಮಿತಿ ವರದಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಐಪಿಎಲ್ ಪಂದ್ಯಾವಳಿ ನಡೆಸಲು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸರ್ಕಾರ ಒಪ್ಪಿಗೆ ನೀಡಿತು.
