ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

| Published : Oct 26 2024, 12:49 AM IST

ಸಾರಾಂಶ

ಮೂರು ವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 2380 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾಳಾಗಿದೆ. ಅದರಲ್ಲಿ ನವಲಗುಂದ, ಅಣ್ಣಿಗೇರಿ ಮತ್ತು ಧಾರವಾಡ ತಾಲೂಕಿನಲ್ಲಿಯೇ ಹೆಚ್ಚಿನ ಪ್ರಮಾಣದ ಈರುಳ್ಳಿ ಮಳೆಗೆ ಸಿಲುಕಿದೆ.

ಧಾರವಾಡ:

ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಬೆಳೆ ಕೊಳೆತು ನಾರುತ್ತಿದ್ದು, ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಸಂಪೂರ್ಣವಾಗಿ ಗಡ್ಡೆ ಕೊಳೆತ್ತಿದ್ದು ಕೆಸರಿನಲ್ಲಿ ಕೆಸರಾಗಿ ಕಪ್ಪಾಗಿ ಕಾಣುತ್ತಿದೆ.

ಈ ಬಾರಿ ಈರುಳ್ಳಿಗೆ ಒಳ್ಳೆಯ ಬೆಲೆ ಇದೆ. ಪ್ರತಿ ಕೆಜಿಗೆ ₹ 50ರಿಂದ 80ರ ವರೆಗೆ ಮಾರಾಟವಾಗುತ್ತಿದೆ. ಉತ್ತಮ ಬೆಲೆ ನಿರೀಕ್ಷೆ ಹಿನ್ನೆಲೆಯಲ್ಲಿ ರೈತರು ಹಾಕಿದ್ದ ಈರುಳ್ಳಿ ಇದೀಗ ಕೊಳೆತು ನಾರುವ ಸ್ಥಿತಿ ಬಂದಿದೆ. ಕೊಯ್ಲು ಮಾಡುವ ಹೊತ್ತಿನಲ್ಲಿ ಸುರಿದ ಮಳೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಹೀಗಾಗಿ ಕಿತ್ತಿಟ್ಟ ಈರುಳ್ಳಿ ಗದ್ದೆಯಲ್ಲಿಯೇ ರೈತರು ಬಿಟ್ಟಿದ್ದು ಮಮ್ಮಲ ಮರುಗುವಂತಾಗಿದೆ. ಈಗ ಮಳೆ ಬಿಡುವು ಪಡೆಯುತ್ತಿದ್ದಂತೆ ಹೊಲಗಳಿಗೆ ಹೋಗಿ ನೋಡಿದರೆ ಎಲ್ಲ ಕೊಳೆತು ಹೋಗಿವೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ಮೋಹನ.

ಮೂರು ವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 2380 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾಳಾಗಿದೆ. ಅದರಲ್ಲಿ ನವಲಗುಂದ, ಅಣ್ಣಿಗೇರಿ ಮತ್ತು ಧಾರವಾಡ ತಾಲೂಕಿನಲ್ಲಿಯೇ ಹೆಚ್ಚಿನ ಪ್ರಮಾಣದ ಈರುಳ್ಳಿ ಮಳೆಗೆ ಸಿಲುಕಿದೆ. ಧಾರವಾಡ ಸುತ್ತಮುತ್ತಲಿನ ಕವಲಗೇರಿ, ಕಮಲಾಪುರ, ಅಮ್ಮಿನಬಾವಿ ಭಾಗದಲ್ಲಿ ಎಲ್ಲೆಲ್ಲಿ ರೈತರ ಗದ್ದೆಗಳಿಗೆ ಹೊಂದಿಕೊಂಡು ಹಳ್ಳಗಳು ಇವೆಯೋ ಅಲ್ಲೆಲ್ಲ ಮಳೆ ಅಬ್ಬರಕ್ಕೆ ಕಿತ್ತಿಟ್ಟ ಈರುಳ್ಳಿ, ಕೊಚ್ಚಿಕೊಂಡು ಹೋಗಿ ಹಳ್ಳ ಸೇರಿವೆ. ಒಂದು ಎಕರೆಗೆ ಸುಮಾರು ₹ 35 ಸಾವಿರ ಖರ್ಚು ಮಾಡಿ ರೈತರು ಈರುಳ್ಳಿ ಬೆಳೆದಿದ್ದರು. ಬೆಳೆ ಚೆನ್ನಾಗಿ ಕೈಗೆ ಸಿಕ್ಕಿದ್ದರೆ ಎಕರೆಗೆ ₹ 2.5 ಲಕ್ಷ ಆದಾಯ ಸಿಗುತ್ತಿತ್ತು. ಆದರೆ ಈಗ ಹಾಕಿದ ಖರ್ಚು ಕೂಡ ಬರದಂತಾಗಿ ಹೋಗಿದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ಹಜರತ್ ಸಾಬ್ ನದಾಫ್.

ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರುತ್ತಿದ್ದು, ಜಿಲ್ಲೆಯಲ್ಲಿ ಈಗ ಈರುಳ್ಳಿ ಬೆಳೆದ ರೈತರಿಗೂ ಕಣ್ಣೀರು ತರಿಸುವಂತಾಗಿದೆ. ಮಳೆಯು ರೈತರ ಎಲ್ಲ ನಿರೀಕ್ಷೆಗಳನ್ನು ಹೊಸಕಿ ಹಾಕಿದ್ದು, ಈಗ ಸರ್ಕಾರದ ಪರಿಹಾರವೇ ರೈತರನ್ನು ಕಾಪಾಡಬೇಕಿದೆ.