ರೈತನ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ ಬೆಳೆ

| Published : Jul 28 2025, 12:48 AM IST / Updated: Jul 28 2025, 12:49 AM IST

ಸಾರಾಂಶ

ಈರುಳ್ಳಿ ಬೆಲೆ ಪಾತಾಳಕ್ಕಿಳಿದಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳೆ ಇದ್ದರೆ ಬೆಲೆ ಇಲ್ಲ, ಬೆಲೆ ಇದ್ದರೆ ಬೆಳೆ ಇಲ್ಲ. ಈರುಳ್ಳಿ ಬೆಳೆ ಇದ್ದರೂ ಬೆಲೆ ಇಲ್ಲವಾಗಿದೆ. ಈರುಳ್ಳಿಬೆಲೆ ಪಾತಾಳಕ್ಕೀಳಿದಿದ್ದು, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಟಾವಾದ ಈರುಳ್ಳಿ ಅಪಾರ ಪ್ರಮಾಣದಲ್ಲಿ ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಬಂದಿದೆ. ಆದರೆ, ಬೆಲೆ ಪಾತಾಳಕ್ಕಿಳಿದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬೆಳಗಾವಿ ಎಪಿಎಂಸಿ ಪ್ರಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನಾಗಿದೆ. ಕನಿಷ್ಠ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆರು ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆಜಿಯೊಂದಕ್ಕೆ ಗರಿಷ್ಠ ₹40ರಿಂದ ₹60ರವರೆಗೆ ಇತ್ತು. ಮಾರುಕಟ್ಟೆಗೆ ಈರುಳ್ಳಿಯ ಹರಿವು ಕಡಿಮೆಯಾಗಿತ್ತು. ಅಲ್ಲದೇ, ಸಗಟು ವರ್ತಕರು ಕೃತಕ ಅಭಾವ ಸೃಷ್ಟಿಸಿದ ಆರೋಪ ಕೂಡ ಇದರ ಹಿಂದಿತ್ತು. ಇದರಿಂದಾಗಿ ಈರುಳ್ಳಿ ಬೆಲೆ ಉತ್ತಮವಾಗಿತ್ತು. ಆಗ ರೈತರಲ್ಲಿ ಬೆಳೆ ಇರಲಿಲ್ಲ. ಈರುಳ್ಳಿ ಧಾರಣೆ ಇದೇ ರೀತಿ ಮುಂದುವರಿಯಬಹುದು ಎಂಬ ಆಶಾಭಾವನೆ ಯಿಂದ ಬೆಳಗಾವಿ, ಮಹಾರಾಷ್ಟ್ರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ಬಹುತೇಕ ಕಡೆ ರೈತರು ಈರುಳ್ಳಿ ಬೆಳೆದಿದ್ದಾರೆ. ಬೆಳೆ ಅಂತಿಮ ಹಂತಕ್ಕೆ ಬರುವವರೆಗೂ ಸಾಮಾನ್ಯ ಬೆಲೆ ಇತ್ತು. ಆದರೆ, ಈಗ ದಿಢೀರನೆ ಕುಸಿದಿರುವುದು ರೈತರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಈರುಳ್ಳಿಗೆ ದರ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ತಾವು ಹಾಕಿದ ಬಂಡವಾಳ ಕೂಡ ವಾಪಸ್‌ ಬಾರದ ಸ್ಥಿತಿಯಲ್ಲಿದ್ದಾರೆ. ಇದರಿಂದ ಈರುಳ್ಳಿ ಬೆಳೆದ ಉತ್ತರ ಕರ್ನಾಟಕದ ರೈತರು ಕಂಗಾಲಾಗಿದ್ದಾರೆ. ಜುಲೈ ಅಂತ್ಯಕ್ಕೆ ಒಳ್ಳೆಯ ದರ ಬರುತ್ತದೆ ಎಂದು ರೈತರು ಈರುಳ್ಳಿ ಸಂಗ್ರಹಿಸಿದ್ದರು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಈರುಳ್ಳಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದರು.

ಕರ್ನಾಟಕದಲ್ಲಿ ಬೆಳೆದ ಈರುಳ್ಳಿ ಬಾಂಗ್ಲಾದೇಶಕ್ಕೆ ರಫ್ತು ಆಗುತ್ತಿತ್ತು. ಆದರೆ, ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಬಾಂಗ್ಲಾದೇಶಕ್ಕೆ ರಫ್ತಾಗುತ್ತಿದ್ದ ಈರುಳ್ಳಿ ಸ್ಥಗಿತಗೊಂಡಿದೆ. ಫೆಬ್ರುವರಿಯಿಂದ ಮೇವರೆಗೆ ಈರುಳ್ಳಿ ದರ ಕಡಿಮೆಯಿದ್ದ ಕಾರಣಕ್ಕೆ ಈರುಳ್ಳಿ ಸಂಗ್ರಹಿಸಿದ್ದರು. ಈರುಳ್ಳಿ ಇಳುವರಿ ದೇಶಾದ್ಯಂತ ಪ್ರಸಕ್ತ ಸಾಲಿನಲ್ಲಿ ಅಧಿಕ ಪ್ರಮಾಣದಲ್ಲಿದೆ. ವಿದೇಶಕ್ಕೆ ಈರುಳ್ಳಿ ರಪ್ತು ನಿಷೇಧ ಹಾಗೂ ಇಳುವರಿ ಹೆಚ್ಚಿರುವ ಕಾರಣಕ್ಕೆ ದರ ಕುಸಿದಿದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಿಂದ ಗೋವಾ, ಮಹಾರಾಷ್ಟ್ರ, ಗುಜರಾತ, ಹೈದ್ರಾಬಾದ್‌ಗೆ ಬೆಳಗಾವಿಯಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ, ಒಳ್ಳೆಯ ದರದ ನಿರೀಕ್ಷೆಯಲ್ಲಿದ್ದ ರೈತರಿಗೆ ತೀವ್ರ ನಿರಾಸೆ ಉಂಟಾಗಿದೆ.

ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಈಗ ಕೆಜಿ ಒಂದಕ್ಕೆ ಕೇವಲ ₹11ಕ್ಕೆ ಇಳಿದಿದೆ. ಈಗಾಗಲೇ ಕಿತ್ತಿಟ್ಟಿರುವ ಈರುಳ್ಳಿಯನ್ನು ಹೆಚ್ಚು ದಿನ ದಾಸ್ತಾನು ಮಾಡುವಂತಿಲ್ಲ. ಮಾರಾಟ ಮಾಡೋಣ ಎಂದರೆ ಉತ್ತಮ ಧಾರಣೆ ಮಾರುಕಟ್ಟೆಯಲ್ಲಿಲ್ಲ. ಇಂತಹ ಉಭಯ ಸಂಕಟವನ್ನು ಈರುಳ್ಳಿ ಬೆಳೆಗಾರರು ಎದುರಿಸುತ್ತಿದ್ದಾರೆ. ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬೆಲೆ ಪಾತಾಳಕ್ಕೀಳಿದಿದೆ. ಬೇಸಾಯ, ರಸಗೊಬ್ಬರ, ಕಾರ್ಮಿಕರ ಖರ್ಚು ಹಾಗೂ ಸಾಗಣೆ ವೆಚ್ಚ ಸೇರಿದರೆ ಈಗಿನ ಬೆಲೆಯಲ್ಲಿ ಬೆಳೆ ಬೆಳೆದವರಿಗೆ ಯಾವುದೇ ಲಾಭ ಇಲ್ಲ. ಹಾಕಿದ ಬಂಡವಾಳ ಕೂಡ ಬರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಈರುಳ್ಳಿ ಬೆಲೆ ಪಾತಾಳಕ್ಕಿಳಿದಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅಪ್ಪಾಸಾಹೇಬ ದೇಸಾಯಿ, ರೈತ