ಬರಗಾಲದ ನಂತರ ಈ ಸಾರಿ ಭರ್ಜರಿ ಮಳೆ : ಈರುಳ್ಳಿಗೆ ರೋಗ - ಬೆಳೆಹಾನಿ, ಗ್ರಾಹಕರ ಜೇಬಿಗೆ ಭಾರ

| Published : Aug 31 2024, 01:44 AM IST / Updated: Aug 31 2024, 11:36 AM IST

ONION
ಬರಗಾಲದ ನಂತರ ಈ ಸಾರಿ ಭರ್ಜರಿ ಮಳೆ : ಈರುಳ್ಳಿಗೆ ರೋಗ - ಬೆಳೆಹಾನಿ, ಗ್ರಾಹಕರ ಜೇಬಿಗೆ ಭಾರ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದ ನಂತರ ಈ ಸಾರಿ ಭರ್ಜರಿ ಮಳೆ ಆಗಿದೆ. ಹೀಗಾಗಿ ಅಲ್ಲಲ್ಲಿ ಬೆಳೆಹಾನಿ ಆಗಿದೆ. ಜೊತೆಗೆ ಈ ಭಾಗದಲ್ಲಿ ಅತಿವೃಷ್ಟಿಗೆ ಪ್ರಸಕ್ತ ವರ್ಷ ಈರುಳ್ಳಿ ಬೆಳೆ ರೋಗ ಬಾಧೆ ತಗುಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಉಂಟಾಗಿ ಬೆಲೆ ಕೂಡ ಏರಿಕೆಯಾಗಿದೆ.

ಚಂದ್ರಶೇಖರ ಶಾರದಾಳ

 ಕಲಾದಗಿ : ಬರಗಾಲದ ನಂತರ ಈ ಸಾರಿ ಭರ್ಜರಿ ಮಳೆ ಆಗಿದೆ. ಹೀಗಾಗಿ ಅಲ್ಲಲ್ಲಿ ಬೆಳೆಹಾನಿ ಆಗಿದೆ. ಜೊತೆಗೆ ಈ ಭಾಗದಲ್ಲಿ ಅತಿವೃಷ್ಟಿಗೆ ಪ್ರಸಕ್ತ ವರ್ಷ ಈರುಳ್ಳಿ ಬೆಳೆ ರೋಗ ಬಾಧೆ ತಗುಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಉಂಟಾಗಿ ಬೆಲೆ ಕೂಡ ಏರಿಕೆಯಾಗಿದೆ. ಗ್ರಾಹಕರ ಜೇಬಿಗೆ ಹೊಡೆತ ಬೀಳುತ್ತಿದೆ. ಹೌದು, ರೈತನಿಗೆ ಪ್ರಾಕೃತಿಕ ವಿಕೋಪದ ಒಂದಿಲ್ಲೊಂದು ಹೊಡೆತ ಬೀಳುತ್ತಿದ್ದು, ರೈತ ಬಾರಿ ನಷ್ಟ ಕಷ್ಟ ಅನುಭವಿಸುತ್ತಿದ್ದಾನೆ. ನದಿ ಪ್ರವಾಹದಿಂದ ನದಿ ಪಾತ್ರದ ಸಾವಿರಾರು ಎಕರೆ ಭೂಪ್ರದೇಶ ಹಚ್ಚ ಹಸುರು ಬೆಳೆ ಪ್ರವಾಹ ನೀರಿನಲ್ಲಿ ಕೊಚ್ಚಿ ಹಾನಿ, ನೀರು ನಿಂತು, ಜಲಾವೃತದಿಂದೆ ಬೆಳೆ ಹಾನಿಯಾಗಿದೆ. ಇದರ ನಡುವೆ ಅತೀವೃಷ್ಟಿಯಿಂದ ಬಿತ್ತಿದ ಈರುಳ್ಳಿ ಬೆಳೆಗೂ ರೋಗ ಭಾದೆ ಉಂಟಾಗಿ ಈರುಳ್ಳಿ ಬೆಳೆ ಹಳದಿರೋಗಕ್ಕೆ ಕೊಳೆಯುತ್ತಿದೆ. ಎಷ್ಟೇ ಔಷಧೋಪಚಾರ ಮಾಡಿದರೂ ರೋಗ ಹತೋಟಿಗೆ ಬರದೇ ದಿನದಿಂದ ದಿನಕ್ಕೆ ಬೆಳೆಕ್ಷೇತ್ರವನ್ನು ರೋಗ ಆವರಿಸಿ ಸಂಪೂರ್ಣ ಬೆಳೆ ಹಾನಿಯಾಗುತ್ತಿದೆ.

8000 ಹೆಕ್ಟೇರ್ ಬಿತ್ತನೆ:

ಪ್ರಸಕ್ತ ವರ್ಷ ಕಲಾದಗಿ ಹೋಬಳಿಯ ಉದಗಟ್ಟಿ, ಶಾರದಾಳ, ಖಜ್ಜಿಡೋಣಿ, ಅಂಕಲಗಿ, ಕಲಾದಗಿ, ತುಳಸಿಗೇರಿ, ದೇವನಾಳ, ಸಂಶಿ ಭಾಗದಲ್ಲಿ ೨೫೦೦ ಹೆಕ್ಟೇರ್ ಪ್ರದೇಶ ಈರುಳ್ಳಿಬಿತ್ತನೆಯಾಗಿದೆ. ಭಿತ್ತನೆಯಾದ ಈರುಳ್ಳಿ ಪ್ರತಿಶತ ಕಾಲು ಭಾಗ ಈರುಳ್ಳಿ ಈಗಾಗಲೇ ಹಳದಿರೋಗಕ್ಕೆ ತುತ್ತಾಗಿ ಹಾನಿಯಾಗುತ್ತಿದೆ. ಇನ್ನೂ ಕೆಲವೆಡೆ ಈರುಳ್ಳಿ ಬೆಳೆ ಕೊಳೆರೋಗಕ್ಕೆ ತುತ್ತಾಗುತ್ತಿದೆ. ಬಾಗಲಕೋಟೆ ತಾಲೂಕಿನಲ್ಲಿ ೮,೦೦೦ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಈರುಳ್ಳಿ ಬೆಳೆಗಾರರು ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ಸಾಕಷ್ಟು ಖರ್ಚು ಮಾಡಿದ್ದಾರೆ. ಆದರೆ, ಇದೀಗ ಈರುಳ್ಳಿ ಬೆಳೆಗೆ ಕೊಳೆರೋಗ ಬಂದಿದ್ದರಿಂದ ಹಾಕಿದ ದುಡ್ಡು ವಾಪಸ್‌ ಬರುತ್ತೋ ಇಲ್ಲವೋ ಎಂಬ ಚಿಂತೆ ರೈತರ ಮೊಗದಲ್ಲಿ ಮೂಡಿದೆ. ಆದರೆ, ಈರುಳ್ಳಿ ಬೆಳೆ ಹಾಳಾದರೆ ಇದರ ಹೊಡೆತ ಗ್ರಾಹಕರ ಮೇಲೂ ತಟ್ಟುತ್ತದೆ.

ಎರಡು ಮೂರು ವರ್ಷದ ಹಿಂದೆ ಇದ್ದ ಕೊಳೆ ರೋಗ ಈಗ ಮತ್ತೆ ಬೆಳೆಗೆ ಬಂದಿದೆ. ಈರುಳ್ಳಿ ಬೆಳೆಯಲು ೧ ಎಕರೆಗೆ ₹೪೦೦೦೦ ಖರ್ಚಾಗುತ್ತಿದೆ. ೩೫ ಎಕರೆಗೂ ಹೆಚ್ಚು ಪ್ರದೇಶದಲ್ಲಿ, ಹೆಚ್ಚು ಈರುಳ್ಳಿ ಬೆಳೆ ಬೆಳೆದಿದ್ದೇನೆ. ಬೆಳೆಗೆ ಕೊಳೆ ರೋಗ ಆವರಿಸಿ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಸರಕಾರ ಬೆಳೆ ಹಾನಿ ವೀಕ್ಷಣೆ ಮಾಡಿ ಬೆಳೆ ವಿಮೆ ಪರಿಹಾರ ಒದಗಿಸಿದಲ್ಲಿ ರೈತ ತುಸು ಹಾನಿಯಿಂದ ಪಾರಾಗಬಹುದು.

-ಕಿರಣ ಅರಕೇರಿ, ಶಾರದಾಳ ಗ್ರಾಮದ ಯುವ ರೈತರು

ನೀರಾವರಿ ಪ್ರದೇಶದಲ್ಲಿ ಕೊಳೆ ರೋಗ ಬಾಧಿಸುತ್ತದೆ. ಮಳೆ ಹೆಚ್ಚಾಗಿ ಜೊತೆಗೆ ರೈತರೂ ನೀರು ಹಾಯಿಸಿದ್ದಲ್ಲಿ ಕೊಳೆ ರೋಗಕ್ಕೆ ತುತ್ತಾಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಮಳೆಯೂ ಹೆಚ್ಚಾಗಿ ವಾತಾವರಣದಲ್ಲಿ ಏರು ಪೇರು ಉಂಟಾದಾಗ ಬೆಳೆಗಳಿಗೆ ರೋಗಗಳ ಬಾಧೆ ಕಾಣುತ್ತದೆ. ರೋಗ ಬಾಧೆ ತೋಟಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗುವುದು.

-ಬಿ.ಜಿ.ಗೌಡನ್ನವರ, ಬಾಗಲಕೋಟೆ ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ

ಜಿಲ್ಲೆಯಲ್ಲಿ 31 ,೦೦೦ ಹೆಕ್ಟೇರ್ ಪ್ರದೇಶ ಈರುಳ್ಳಿ ಬಿತ್ತನೆಯಾಗಿದೆ. ಮಳೆ ಹೆಚ್ಚಾದಾಗ ಮತ್ತು ಬ್ಲಾಕ್ ಸಾಯಿಲ್ ಇರುವೆಡೆ ಕೊಳೆರೋಗ ಬಾಧೆ ಹೆಚ್ಚು, ವಾತಾವರಣದಲ್ಲಿನ ಏರುಪೇರು ಆದಾಗ ರೋಗ ಬಾಧೆ ಇರುತ್ತದೆ. ಕೊಳೆ ರೋಗದ ಹತೋಟಿಗೆ ಅಗತ್ಯ ಕ್ರಮಗಳ ಬಗ್ಗೆ ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಜ್ಞಾನಿಗಳಿಂದ ಬೆಳೆ ವೀಕ್ಷಣೆ ಮಾಡಿಸಿ ರೈತರಿಗೆ ಅಗತ್ಯ ಔಷಧ ಉಪಚಾರದ ಬಗ್ಗೆ ಮಾಹಿತಿ ನೀಡಲಾಗುವುದು.

-ರವೀಂದ್ರ ಹಕಾಟೆ, ಬಾಗಲಕೋಟೆ ತೋಟಗಾರಿಕಾ ಇಲಾಖಾ ಉಪನಿರ್ದೇಶಕ

ಏನಿದು ಕೊಳೆರೋಗ?

ಇದೊಂದು ಶಿಲೀಂದ್ರ ರೋಗ. ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಈರುಳ್ಳಿ ಬೆಳೆಗೆ ಈ ರೋಗ ಬರುತ್ತದೆ. ಇದೀಗ ಕಲಾದಗಿ ಸುತ್ತಮುತ್ತಲ ಗ್ರಾಮಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಭೂಮಿ ತೇವಾಂಶ ಹೆಚ್ಚಾಗಿ ಕೊಳೆ ರೋಗ ಈರುಳ್ಳಿಗೆ ತಗುಲಿದೆ. ಇದರಿಂದ ಈರುಳ್ಳಿ ಬೆಳೆದಿದ್ದ ರೈತರು ಬೇಸ್ತು ಬಿದ್ದಿದ್ದಾರೆ.