ಬೆಂಬಲ ಬೆಲೆ ಕೇಂದ್ರದತ್ತ ಈರುಳ್ಳಿ ಬೆಳೆಗಾರರ ಚಿತ್ತ!

| Published : Oct 20 2025, 01:04 AM IST

ಸಾರಾಂಶ

ಕಳೆದ ವರ್ಷ ಇದೇ ಅವಧಿಯಲ್ಲಿ ಕ್ವಿಂಟಲ್‌ಗೆ ₹1500ರಿಂದ ₹2000 ಇತ್ತು. ಆದರೆ ಬೆಲೆ ಇಳಿಕೆಯಿಂದ ರೈತರಿಗೆ ಉತ್ಪಾದನಾ ವೆಚ್ಚವೂ ಮರಳಿ ಸಿಗದಂತಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಈರುಳ್ಳಿ ಬೆಲೆ ತೀವ್ರವಾಗಿ ಕುಸಿದ ಹಿನ್ನೆಲೆ ಮುಂಡರಗಿ ತಾಲೂಕಿನಾದ್ಯಂತ ರೈತರು ಕಂಗಾಲಾಗಿದ್ದಾರೆ. ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯಲು ರೈತರ ಮೊರೆ ಇಟ್ಟಿದ್ದಾರೆ.

ಭೂಮಿ ಹದ ಮಾಡುವುದರಿಂದ ಹಿಡಿದು ಸಾವಿರಾರು ಬೆಲೆ ತೆತ್ತು ರೈತರು ತಿಂಗಳುಗಟ್ಟಲೆ ಹಗಲು- ರಾತ್ರಿ ಎನ್ನದೆ ಶ್ರಮ ಪಟ್ಟು ಬೆಳೆದ ಈರುಳ್ಳಿಯನ್ನು ಮಾರಾಟಕ್ಕೆ ಮಾರುಕಟ್ಟೆಗೆ ತಂದರೆ ಕ್ವಿಂಟಲ್‌ಗೆ ಕೇವಲ ₹300ರಿಂದ ₹600 ದರ ಸಿಗುತ್ತಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕ್ವಿಂಟಲ್‌ಗೆ ₹1500ರಿಂದ ₹2000 ಇತ್ತು. ಆದರೆ ಬೆಲೆ ಇಳಿಕೆಯಿಂದ ರೈತರಿಗೆ ಉತ್ಪಾದನಾ ವೆಚ್ಚವೂ ಮರಳಿ ಸಿಗದಂತಾಗಿದೆ. ರಸಗೊಬ್ಬರ, ಬಿತ್ತನೆ ಬೀಜ, ಕಾರ್ಮಿಕರ ಖರ್ಚು ಸೇರಿ ಸಾವಿರಾರು ರು. ಹೂಡಿಕೆ ಮಾಡಿದರೂ ಮಾರಾಟದ ಸಮಯದಲ್ಲಿ ನಷ್ಟ ಎದುರಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ರೈತಪರ ಕಿಂಚಿತ್ತೂ ಕಾಳಜಿ ಮಾಡುತ್ತಿಲ್ಲ ಎಂಬ ದೂರು ರೈತರಿಂದ ಕೇಳಿಬರುತ್ತಿವೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೇಳುವವರೆ ಇಲ್ಲದಂತಾಗಿದೆ. ದೂರದ ಬೆಂಗಳೂರಿಗೆ ಹೋದರೆ ಅಲ್ಲಿಯೂ ಈರುಳ್ಳಿಗೆ ಕಿಮ್ಮತ್ತು ಸಿಗುತ್ತಿಲ್ಲ. ಡಂಬಳ, ಪೇಠಾಆಲೂರ, ಬರದೂರ, ಮೇವುಂಡಿ, ಕದಾಂಪುರ, ಡೋಣಿ, ಅತ್ತಿಕಟ್ಟಿ ತಾಂಡಾ ಸೇರಿದಂತೆ ವಿವಿಧ ಗ್ರಾಮಸ್ಥರು ಬೆಂಗಳೂರಿಗೆ ಈರುಳ್ಳಿ ತೆಗೆದುಕೊಂಡು ಮಾರಾಟಕ್ಕೆ ಹೋದರೆ ಕ್ವಿಂಟಲ್‌ ಈರುಳ್ಳಿಗೆ ₹300ರಿಂದ ₹500ರ ವರೆಗೆ ಮಾರಾಟವಾಗುತ್ತಿವೆ. ಕೆಲವು ರೈತರಿಗೆ ಲಾರಿ ಬಾಡಿಗೆ ಕೊಡದಂಥ ಸ್ಥಿತಿ ಉಂಟಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬೆಂಬಲ ಬೆಲೆ ನಿಗದಿ ಮಾಡಿ: ಈರುಳ್ಳಿ ಬೆಳೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕನಿಷ್ಠ ₹3000 ಬೆಂಬಲ ದರ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.

ಹಳ್ಳಿಗಳಲ್ಲಿ ಈರುಳ್ಳಿಯನ್ನು ಮಾರಲು ಸಾಧ್ಯವಾಗದೆ ಕೆಲವರು ಈರುಳ್ಳಿ ಬೆಳೆಯನ್ನೆ ಹರಗುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿರುವ ಜನಪ್ರತಿನಿಧಿಗಳು ತುರ್ತಾಗಿ ವಿಶೇಷ ಸಭೆ ಕರೆದು ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರು ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಿರಂತರ ಆರ್ಥಿಕ ಸಂಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆದು ಅನ್ನದಾತರ ನೆರವಿಗೆ ಧಾವಿಸಬೇಕಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ. ಕೂಡಲೇ ಕ್ವಿಂಟಲ್‌ ಈರುಳ್ಳಿಗೆ ₹3000 ಬೆಂಬಲ ಬೆಲೆ ಘೋಷಿಸಬೇಕು. ಬೇರೆ ದೇಶಗಳಿಗೆ ಈರುಳ್ಳಿ ರಫ್ತು ಮಾಡಲು ಅವಕಾಶ ಕಲ್ಪಿಸಬೇಕು. ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡರ ತಿಳಿಸಿದರು.