ಕಳೆದ ಎರಡ್ಮೂರು ವಾರದಿಂದ ಈರುಳ್ಳಿ ದರ ಇಳಿಮುಖವಾಗಿಯೇ ಹೊರಟಿದೆ. ಸ್ಥಳೀಯ ಈರುಳ್ಳೀ ಹೆಚ್ಚಿನ ಪ್ರಮಾಣದಲ್ಲಿ ಎಪಿಎಂಸಿಗೆ ಬರುತ್ತಿದ್ದು, ವರ್ತಕರು ತೇವಾಂಶದ ನೆಪ ಹೇಳಿ ದರವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಹುಬ್ಬಳ್ಳಿ:

ದರ ಕುಸಿತವಾಗಿರುವುದನ್ನು ಖಂಡಿಸಿ ಬುಧವಾರ ರಸ್ತೆಗೆ ಈರುಳ್ಳಿ ಸುರಿದು ರೈತರು ಪ್ರತಿಭಟನೆ ನಡೆಸಿದರು.

ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿ ಅಕ್ಕಪಕ್ಕದ ಹಲವು ಜಿಲ್ಲೆಗಳಿಂದ ಹುಬ್ಬಳ್ಳಿ ಎಪಿಎಂಸಿಗೆ ಈರುಳ್ಳಿ ಆವಕವಾಗಿತ್ತು. ಬುಧವಾರ ಸುಮಾರು 8 ಸಾವಿರ ಕ್ವಿಂಟಲ್​ ಈರುಳ್ಳಿ ಆವಕವಾಗಿದ್ದು, ಪ್ರತಿ ಕ್ವಿಂಟಲ್​ಗೆ ಕನಿಷ್ಠ ₹ 100ರಿಂದ ಗರಿಷ್ಠ ₹ 1500ರ ವರೆಗೆ ಮಾತ್ರ ಟೆಂಡರ್​ನಲ್ಲಿ ದರ ನಿಗದಿಯಾಗಿತ್ತು. ಕಳೆದ ಎರಡ್ಮೂರು ವಾರದಿಂದ ಈರುಳ್ಳಿ ದರ ಇಳಿಮುಖವಾಗಿಯೇ ಹೊರಟಿದೆ. ಸ್ಥಳೀಯ ಈರುಳ್ಳೀ ಹೆಚ್ಚಿನ ಪ್ರಮಾಣದಲ್ಲಿ ಎಪಿಎಂಸಿಗೆ ಬರುತ್ತಿದ್ದು, ವರ್ತಕರು ತೇವಾಂಶದ ನೆಪ ಹೇಳಿ ದರವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರೈತರು, ಮಾರಾಟಕ್ಕೆ ತಂದಿದ್ದ ಈರುಳ್ಳಿಯನ್ನು ರಸ್ತೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ದರವನ್ನು ಅತ್ಯಂತ ಕಡಿಮೆ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಳೆಗಾರರು ಎಪಿಎಂಸಿ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಸಮೀಪದಲ್ಲಿರುವ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಗೆ ಆಗಮಿಸಿ ಕೆಲಹೊತ್ತು ರಸ್ತೆ ಸಂಚಾರ ತಡೆ ನಡೆಸಿದರು.

ಈ ವೇಳೆ ಮಾತನಾಡಿದ ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ, ಹುಬ್ಬಳ್ಳಿ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್​ ಈರುಳ್ಳಿಯನ್ನು ಕೇವಲ ₹ 100ರಿಂದ ₹ 1500ರ ವರೆಗೆ ಖರೀದಿ ಮಾಡಲಾಗುತ್ತಿದೆ. ರೈತರಿಗೆ ದಲ್ಲಾಳಿಗಳಿಂದ ಅನ್ಯಾಯವಾಗುತ್ತಿದೆ. ಕ್ವಿಂಟಲ್​ಗೆ ಕನಿಷ್ಠ ₹ 2000 ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ಈ ವೇಳೆ ಈರುಳ್ಳಿ ಬೆಳೆಗಾರರಾದ ವಿರೂಪಾಕ್ಷ ಗಣಿ, ಶಂಕ್ರಪ್ಪ ಕುಂದಗೋಳ, ರಾಜಶೇಖರ ಪಾಟೀಲ, ಸುನೀಲ ಯಲಿಗಾರ, ಲಕ್ಷ್ಮಣಗೌಡ ಶಿವನಗೌಡರ, ಜಡೆಪ್ಪ ಮಡಿವಾಳರ, ಮಂಜುನಾಥ ಮರಿಗೌಡ್ರ, ಪುಂಡಲಿಕ ಮಡಿ, ಇದ್ದರು.