ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿಗೆ ಸಮೀಪದ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪದವಿ ಕೋರ್ಸ್‍ಗಳಿಗೆ ಮೇ 15ರಿಂದ 31ರ ವರೆಗೆ ಆನ್‍ಲೈನ್ ಮೋಡ್‍ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.27ರಿಂದ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮಾ.26ರ ರಾತ್ರಿ 11.50ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಲ್ಲಿಸಿದ ಅರ್ಜಿಗಳಲ್ಲಿ ಏನಾದರೂ ತಿದ್ದುಪಡಿ ಮಾಡಬೇಕಾದಲ್ಲಿ ಮಾ.28ರಿಂದ 29ರ ರಾತ್ರಿ 11.50ರ ವರೆಗೆ ಸಮಯಾವಕಾಶ ಇರುತ್ತದೆ. ಪರೀಕ್ಷೆ ನಡೆಯುವ ನಗರಗಳ ಸ್ಪಷ್ಟ ಮಾಹಿತಿ ಏಪ್ರಿಲ್ 30ರಂದು ಎನ್‍ಟಿಎ ವೆಬ್‍ಸೈಟಿನಲ್ಲಿ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಮೇ ಎರಡನೇ ವಾರದಲ್ಲಿ ಎನ್‍ಟಿಎ ವೆಬ್‍ಸೈಟ್ ಮೂಲಕ ಪ್ರವೇಶ ಪರೀಕ್ಷೆಯ ಹಾಲ್‍ಟಿಕೆಟ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗದಿದ್ದಲ್ಲಿ ಜೂ.30ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು.
ಬಿ.ಟೆಕ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಬಿ.ಟೆಕ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಬಿ.ಟೆಕ್ ಮ್ಯಾಥಮೆಟಿಕಲ್ ಕಂಪ್ಯೂಟಿಂಗ್, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಬಿಎಸ್ಸಿ ರಸಾಯನಶಾಸ್ತ್ರ, ಬಿ.ಎಸ್ಸಿ ಭೌತಶಾಸ್ತ್ರ, ಬಿ.ಎಸ್ಸಿ ಮನೋವಿಜ್ಞಾನ, ಬಿ.ಎಸ್ಸಿ ಭೂಗೋಳ, ಬಿ.ಬಿ.ಎ(ಸ್ವತಂತ್ರ), ಬಿ.ಎಸ್.ಡಬ್ಲ್ಯು, ಬಿ.ಎ ಅರ್ಥಶಾಸ್ತ್ರ, ಬಿ.ಎ ಇತಿಹಾಸ, ಬಿ.ಎ ಇಂಗ್ಲಿಷ್, ಬಿ.ಎಸ್ಸಿ ಭೂವಿಜ್ಞಾನ ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.ಭಾರತದ ಹೊರಗಿನ 26 ನಗರಗಳು ಸೇರಿದಂತೆ ಒಟ್ಟು 380 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು, ಕರ್ನಾಟಕದ 21 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಕೋಲಾರ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ/ಮಣಿಪಾಲ ಬೀದರ್ ಮತ್ತು ವಿಜಯಪುರ ನಗರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರೊ.ಸತ್ಯನಾರಾಯಣ ಹೇಳಿದರು.
13 ಭಾಷೆಗಳಲ್ಲಿ ಪರೀಕ್ಷೆ: ಈ ಬಾರಿ 13 ಭಾಷೆಗಳಲ್ಲಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶವಿದ್ದು, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲೆಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ವಿವರಿಸಿದರು.ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಬಿ.ಸಿನ್ನೂರ, ಪ್ರೊ.ಹನುಮೇಗೌಡ, ಪ್ರೊ.ಭರತಕುಮಾರ್ ಇದ್ದರು.
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‍ಟಿಎ) ನಡೆಸುವ ಕೇಂದ್ರೀಯ ವಿಶ್ವವಿದ್ಯಾಲಯದ ಪದವಿ ಕೋರ್ಸ್‍ಗಳ ಪ್ರವೇಶ ಪರೀಕ್ಷೆ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಹಿನ್ನೆಲೆಯಲ್ಲಿ ಬದಲಾಗುವ ಸಾಧ್ಯತೆಯಿದೆ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.ಹಾಗಾಗಿ, ಪ್ರವೇಶ ಪರೀಕ್ಷೆಗೆ ಹಾಜರಾಗಲು ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಎನ್‍ಟಿಎ ಜಾಲತಾಣ www.nta.ac.in http://www.nta.ac.in ಮತ್ತು https://exams.nta.ac.in/CUETUG/ ಆಗಾಗ ನೋಡುತ್ತಿರಬೇಕು ಎಂದು ಪ್ರೊ.ಸತ್ಯನಾರಾಯಣ ಕಿವಿಮಾತು ಹೇಳಿದರು.