ಸಾರಾಂಶ
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಮೆಣಸಿನಕಾಯಿ ಬೆಳೆದ ತಾಲೂಕಿನ ರೈತರ ಬದುಕು ಈ ಸಲ ಖಾರವಾಗಿದೆ. ಮಳೆ ಮತ್ತು ನೀರಿನ ಕೊರತೆಯಿಂದ ಇಳುವರಿ ಕಮ್ಮಿಯಾಗಿದೆ. ಅದರ ಬೆನ್ನಲ್ಲಿಯೇ ಬೆಲೆ ತೀವ್ರ ಕುಸಿತವಾಗಿದೆ. ಹೀಗಾಗಿ ಮೆಣಸಿನಕಾಯಿ ಬೆಳೆದವರು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.ಸಾವಿರಾರು ರೈತರು ಈ ಸಲ ಮೆಣಸಿನಕಾಯಿ ಬೆಳೆದು ಬದುಕನ್ನೆ ಖಾರವಾಗಿಸಿಕೊಂಡಿದ್ದಾರೆ. ಮೆಣಸಿನಕಾಯಿ ದರದಲ್ಲಿ ದಾಖಲೆ ಬೆಲೆ ಕುಸಿತಗೊಂಡಿದ್ದರಿಂದ ಬೆಳೆದ ನೂರಾರು ಕ್ವಿಂಟಲ್ ಮೆಣಸಿನಕಾಯಿ ಹೊಲದಲ್ಲಿಟ್ಟುಕೊಂಡು ಕಾಯುತ್ತಿರುವ ಸ್ಥಿತಿ ಎದುರಾಗಿದೆ. ತಾಲೂಕಿನ ಮಣ್ಣೂರ ರಾಮನಗರ ಕುಡಗನೂರ ಶಿವೂರ ದಯಾನಂದನಗರ ಕರಜಗಿ ಮಾಶಾಳ ದಿಕ್ಸಂಗಾ ತೆಲ್ಲೂಣಗಿ ನಂದರ್ಗಾ ಗೌರ ಬಿ ಹಿರೇಜೇವರ್ಗಿ ಉಡಚಣ ಭೋಸಗಾ ದುದ್ದುಣಗಿ ಮಂಗಳೂರ ಭಂಕಲಗಾ ಅಳ್ಳಗಿ ಬಿ ಘತ್ತರಗಾ ಹಿಂಚಗೇರಾ ಹವಳಗಾ ಆನೂರ ಬಿಲ್ವಾಡ, ತೆಲ್ಲೂರ ಹವಳಗಾ ದೇವಲ ಗಾಣಗಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಹತ್ತಾರು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ,ರೈತರು ಈ ಸಲ ಹೆಚ್ಚು ಮೆಣಸಿನಕಾಯಿ ಬೆಳೆದ ಕಾರಣ ಏಕಾಏಕಿ ದರದಲ್ಲಿ ಕುಸಿದಿದೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹12ರಿಂದ ₹13 ಸಾವಿರ ವರೆಗೆ ಇದೆ. ದಾಖಲೆ ಬೆಲೆ ಕುಸಿತ ಕಂಡಿರುವುದು ರೈತರನ್ನು ಕಂಗೆಡಿಸುವಂತೆ ಮಾಡಿದೆ. ಈ ಹಿಂದೆ ಎಕರೆಗೆ 20 ಕ್ವಿಂಟಲ್ ಮೆಣಸಿನಕಾಯಿ ಇಳುವರಿ ತೆಗೆಯುತ್ತಿದ್ದರು. ಕಳೆದ ಬಾರಿ ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹20 ಸಾವಿರದಿಂದ ₹30 ಸಾವಿರ ಇತ್ತು. ಎಕರೆಗೆ ₹1 ಲಕ್ಷ ದಿಂದ ₹1.20ಲಕ್ಷ ವೆಚ್ಚ ಮಾಡಿ, ಎಕರೆಗೆ ₹80 ಸಾವಿರ ಲಾಭ ಮಾಡಿಕೊಳ್ಳುತ್ತಿದ್ದರು. ಮೆಣಸಿನಕಾಯಿಯಲ್ಲಿ ಹೆಚ್ಚಿನ ಲಾಭ ಇರುವುದು ಅರಿತ ಸ್ಥಳೀಯ ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ.ಇಳುವರಿ ಎನೋ ಬಂದಿದೆ. ಆದರೆ, ಈ ಬಾರಿ ಮೆಣಸಿನಕಾಯಿ ಬೆಳೆದ ರೈತನ ಪರಸ್ಥಿತಿ ಹದಗೆಟ್ಟು ಹೋಗಿದೆ. ಮೆಣಸಿನಕಾಯಿ ಇನ್ನೊಂದಿಷ್ಟು ದಿನ ಸಂಗ್ರಹಿಸಿಡಲು ಸರ್ಕಾರದಿಂದ ತಾಲೂಕಿನಲ್ಲಿ ಕೋಲ್ದ್ ಸ್ಟೋರೆಜ್ ಉಗ್ರಾಣಗಳಿಲ್ಲ. ಇದರಿಂದ ಅನಿವಾರ್ಯವಾಗಿ ರೈತರು ಹೊಲದಲ್ಲಿ ಕಾಯ್ದಿಟ್ಟುಕೊಳ್ಳಬೇಕು ಇಲ್ಲವೇ ಅನಿವಾರ್ಯವಾಗಿ ಸಿಕ್ಕ ರೇಟಿಗೆ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಸಂಕಷ್ಟದಲ್ಲಿರುವ ಮೆಣಸಿನಕಾಯಿ ಬೆಳೆದ ರೈತರ ನೆರವಿಗೆ ಸರ್ಕಾರ ಸಹಾಯ ಹಸ್ತಚಾಚಿ, ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ಆರಂಭಿಸಿದರೆ ಅನುವು ಆಗುತ್ತದೆ. ಅಲ್ಲದೆ ರೈತರಿಗೆ ಸ್ಥೈರ್ಯ ತುಂಬುವ ಕಾರ್ಯವನ್ನು ತುರ್ತಾಗಿ ಮಾಡಬೇಕು ಎಂದು ಮೆಣಸಿನಕಾಯಿ ಬೆಳೆದ ತಾಲೂಕಿನ ರೈತರು ಒತ್ತಾಯಿಸಿದ್ದಾರೆ.3 ಎಕರೆಯಲ್ಲಿ ಎಂಡೋ ಫೈವ್ ಸಿಮ್ಸ್ ತಳಿಯ ಮೆಣಸಿನಕಾಯಿ ಬೆಳೆದಿದ್ದೇನೆ. ಎಕರೆಗೆ 10 ಕ್ವಿಂಟಲ್ ಇಳುವರಿ ಬಂದಿದೆ. ಎಕರೆಗೆ ₹70 ಲಕ್ಷ ಖರ್ಚು ಮಾಡಿದ್ದೇನೆ. ಈಗ ಕಡಿಮೆ ಬೆಲೆಯಾಗಿದ್ದರಿಂದ ಮಾರಾಟ ಮಾಡಿದರೆ ಎಕರೆಗೆ ಒಂದು ಲಕ್ಷ ರು. ನಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ಸಂಗ್ರಹಿಸಿಟ್ಟುಕೊಳ್ಳಲು ಸೂಕ್ತ ಸ್ಥಳವಿಲ್ಲದೆ ಪರದಾಡುವಂತಾಗಿದೆ.
- ಸೇತುಮಾಧವ ಅವಧಾನಿ, ಮಲ್ಲಪ್ಪ ಬಿಜಾಪುರ ಮೆಣಸಿನಕಾಯಿ ಬೆಳೆದ ರೈತರು