ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿ 3 ವರ್ಷಕ್ಕೊಮ್ಮೆ ಬರುವ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಾ.17ರಿಂದ 20ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಸಮೀಪದ ಕಚೇರಿಯಲ್ಲಿ ಜಾತ್ರಾ ಸಿದ್ಧತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸುವುದರಿಂದ ಜಿಲ್ಲಾಡಳಿತ, ಪಾಲಿಕೆಯಿಂದ ಜನರಿಗೆ ಸುಗಮ ಸಂಚಾರ, ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ಪೊಲೀಸ್ ಬಂದೋಬಸ್ತ್, ಶೌಚಾಲಯ ವ್ಯವಸ್ಥೆ ಸೇರಿ ಜನರ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದರು. ಸರ್ಕಾರದ ಸೂಚನೆಯಂತೆ ಜಾತ್ರೆ ಆಚರಿಸಲಿದ್ದು, ಪ್ರಾಣಿ ಬಲಿ ನೀಡುವುದಿಲ್ಲ. ಮೌಢ್ಯಾಚರಣೆ ಮಾಡಲ್ಲ. ವಿದ್ಯುತ್ ಅವಘಡ ಆಗದಂತೆ ಸ್ಥಳದಲ್ಲಿ ಸಿಬ್ಬಂದಿಗಳ ಬೆಸ್ಕಾಂ ನಿಯೋಜಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳೂ ಸಮನ್ವಯದಿಂದ ಕೆಲಸ ಮಾಡಿ, ನಗರ ದೇವತೆ ಜಾತ್ರೆ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಜಾತ್ರೆಗೆ ಬಂದ ಭಕ್ತರು ಹರಕೆ ವಸ್ತುಗಳ ಬಿಡುವುದು, ಹೂವು, ಬೇವಿನ ಸೊಪ್ಪು ತಂದರೆ ಆಗಿಂದಾಗ್ಗೆ ತೆರವು ಮಾಡಬೇಕು. ಪಾಲಿಕೆಯಿಂದ ಇದಕ್ಕಾಗಿ ಸಿಬ್ಬಂದಿ ನಿಯೋಜಿಸಬೇಕು. ದೇವಸ್ಥಾನ ಬಳಿ 2 ಶೌಚಾಲಯ ಇದ್ದು, ಹೆಚ್ಚುವರಿಯಾಗಿ ಮೊಬೈಲ್ ಟಾಯ್ಲೆಟ್‌ಗಳ ಪಾಲಿಕೆಯಿಂದ ಅಳವಡಿಸಬೇಕು. ಆರೋಗ್ಯ ಇಲಾಖೆಯಿಂದ ಮೊಬೈಲ್ ಚಿಕಿತ್ಸಾಲಯ ನಿಯೋಜಿಸಿ, ತುರ್ತು ಸೇವೆಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಜಾತ್ರೆ ವೇಳೆ ಜನಸಂದಣಿ ಹೆಚ್ಚಿರುವುದರಿಂದ ಜೇಬುಗಳ್ಳರು, ಸರಗಳ್ಳರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳ ದೇವಸ್ಥಾನ ಸಮಿತಿಯಿಂದ ಅಳವಡಿಸಬೇಕು. 18 ಕಡೆ ಚೆಕ್ ಪೋಸ್ಟ್ ನಿರ್ಮಾಣ, ರಸ್ತೆ ಬದಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ಮಾಡಿಕೊಡದೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜಾತ್ರಾ ವೇಳೆ ಜಗಳ, ಗಲಾಟೆ ನಡೆಯದಂತೆ ದೇವಸ್ಥಾನ ಸಮಿತಿಯಿಂದ ಸ್ವಯಂ ಸೇವಕರ ನೇಮಿಸಬೇಕು ಎಂದು ತಿಳಿಸಿದರು.
ಪಾಲಿಕೆ ಆಯುಕ್ತೆ ಜಿ.ರೇಣುಕಾ ಮಾತನಾಡಿ, ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸಲಾಗುವುದು. ಈಗಾಗಲೇ ಇಲ್ಲಿನ ರಸ್ತೆ ಗುಂಡಿ ಮುಚ್ಚಲು, ಚರಂಡಿ ದುರಸ್ತಿಗೆ ಹಾಗೂ ಈ ಭಾಗದ 40 ದೇವಸ್ಥಾನಗಳಿಗೆ ಸಣ್ಣ ಬಣ್ಣಕ್ಕಾಗಿ ಪಾಲಿಕೆಯಿಂದ 2 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಚರಂಡಿಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಟ್ರಸ್ಟ್‌ನ ಸದಸ್ಯರಾದ ಗೌಡರ ಚನ್ನಬಸಪ್ಪ, ಅಥಣಿ ಎಸ್.ವೀರಣ್ಣ, ಎಎಸ್ಪಿ ವಿಜಯಕುಮಾರ ಬಿ.ಸಂತೋಷ, ಮಂಜುನಾಥ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ಸಮಿತಿ ಸದಸ್ಯರು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರಿದ್ದರು.
........................ಪರಿಸರ ಸ್ನೇಹಿ ಜಾತ್ರೆ ಆಚರಿಸಿ
ಜಾತ್ರೆ ವೇಳೆ ಪ್ಲೆಕ್ಸ್, ಬಂಟಿಂಗ್ಸ್ ಹಾಕಲು ಪಾಲಿಕೆ ಅನುಮತಿ ಕಡ್ಡಾಯ. ಪ್ಲಾಸ್ಟಿಕ್ ಬಳಕೆ ಮಿತಿಗೊಳಿಸಿ ಪರಿಸರ ಸ್ನೇಹಿ ಜಾತ್ರೆ ಆಚರಣೆಗೆ ಮುಂದಾಗಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದ್ದು ಇದನ್ನು ಪಾಲಿಸಬೇಕಾಗುತ್ತದೆ. ಜಾತ್ರಾ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆಗಳ ನಿರ್ವಹಣೆಗಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗುತ್ತದೆ. ಭಕ್ತಾದಿಗಳು ಮೂಢ ನಂಬಿಕೆ ಆಚರಿಸುವ ಸಾಧ್ಯತೆ ಇದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿದ್ದು, ನಿಗಾ ವಹಿಸಬೇಕು.ಡಾ.ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ.