ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಹರಣ: ದ.ಕ. ಬಿಜೆಪಿ ಆರೋಪ

| Published : Mar 07 2024, 01:50 AM IST

ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಹರಣ: ದ.ಕ. ಬಿಜೆಪಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ದೇಶಭಕ್ತ ಹಿಂದೂ ಮುಖಂಡರನ್ನು ಬಂಧಿಸಿ, ಪರೋಕ್ಷವಾಗಿ ದೇಶದ್ರೋಹಿಗಳ ಪರ ನಿಲ್ಲುವಂತಹ ಕೆಲಸ ಮಾಡುತ್ತಿದೆ ಎಂದ ಸತೀಶ್‌ ಕುಂಪಲ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್‌ ಸ್ವಾತಂತ್ರ್ಯ ಹರಣ ಮಾಡಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ನಡೆದ ಬಾಂಬ್ ದಾಳಿ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕರವರನ್ನು ಕುಣಿಗಲ್‌ನಲ್ಲಿ ಪೊಲೀಸರು ಬಂಧಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಾರೆ.

ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ದೇಶಭಕ್ತ ಹಿಂದೂ ಮುಖಂಡರನ್ನು ಬಂಧಿಸಿ, ಪರೋಕ್ಷವಾಗಿ ದೇಶದ್ರೋಹಿಗಳ ಪರ ನಿಲ್ಲುವಂತಹ ಕೆಲಸ ಮಾಡುತ್ತಿದೆ. ಇಷ್ಟೇ ಅಲ್ಲದೇ ಕಲಬುರ್ಗಿಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರನ್ನು ಜಿಲ್ಲೆ ಪ್ರವೇಶಿಸದಂತೆ ತಡೆದಿದ್ದು, ಆ ನಂತರ ಈ ಪ್ರಕರಣದಲ್ಲಿ ಹೈಕೋರ್ಟಿನಿಂದ ಉಗಿಸಿಕೊಂಡರೂ ಬುದ್ದಿ ಕಲಿತುಕೊಂಡಿಲ್ಲ. ಈಗ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಮೂಲಕ ಸಂವಿಧಾನ ವಿರೋಧಿಯಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವರ್ತಿಸುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.

ಸರ್ಕಾರದ ಹಿಂದೂವಿರೋಧಿ ನೀತಿಯ ಮುಖ: ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಭಯೋತ್ಪಾದಕ ಚಟುವಟಿಕೆಯ ವಿರುದ್ಧ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಗೆ ಭಾಷಣ ಮಾಡಲೆಂದು ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕ್‌ ಮುರಳೀಕೃಷ್ಣ ಹಸಂತಡ್ಕ ಅವರನ್ನು ತುಮಕೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಘಟನೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ಎಲ್ಲಿಯವರೆಗೆ ತಲುಪಿದೆ ಎಂದರೆ ಭಯೋತ್ಪಾದನೆಯ ವಿರುದ್ದ ಕೂಡ ಮಾತನಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಯಾವೂದೇ ಹಿಂದೂವಿಗೂ ಅನ್ಯಾಯವಾದರೂ ನಾವು ಅವರ ಜೊತೆಗಿರುತ್ತೇವೆ ಎಂದು ಅರುಣ್ ಪುತ್ತಿಲ ಹೇಳಿದ್ದಾರೆ.ಬಜರಂಗದಳ ಮುಖಂಡನ ಸೆರೆಗೆ ಆಕ್ಷೇಪ

ಮಂಗಳೂರು: ಕರ್ನಾಟಕದಲ್ಲಿ ನಡೆದ ಬಾಂಬ್ ದಾಳಿ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರನ್ನು ಕುಣಿಗಲ್‌ನಲ್ಲಿ ಪೊಲೀಸರು ಬಂಧಿಸಿರುವ ಕ್ರಮವನ್ನು ಬಜರಂಗದಳ ಮಂಗಳೂರು ವಿಭಾಗ ಆಕ್ಷೇಪಿಸಿದೆ.

ಮುರಳಿಕೃಷ್ಣ ಅವರನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಾರೆ, ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯ ಮುಖಾಂತರ ದೇಶಭಕ್ತ ಹಿಂದೂ ಮುಖಂಡರನ್ನು ಬಂಧಿಸಿ, ಪರೋಕ್ಷವಾಗಿ ದೇಶದ್ರೋಹಿಗಳ ಪರ ನಿಲ್ಲವ ಕೆಲಸ ಮಾಡುತ್ತಿದೆ. ಈ ದೇಶದ್ರೋಹಿ ಕೃತ್ಯವನ್ನು ಬಜರಂಗದಳ ಖಂಡಿಸುತ್ತದೆ. ಭಯೋತ್ಪಾದಕ ಚಟುವಟಿಕೆಯ ವಿರುದ್ಧ ಬಜರಂಗದಳ ನಿರಂತರವಾಗಿ ಹೋರಾಟ ನಡೆಸುತ್ತದೆ. ನೀವು ನಮ್ಮನ್ನು ಬಂಧಿಸಿದರೂ ನಮ್ಮ ಹೋರಾಟ ನಿಲ್ಲದು ಎಂದು ಬಜರಂಗದಳ ಮಂಗಳೂರು ವಿಭಾಗ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.