ಸಾರಾಂಶ
ಮೊಳಕಾಲ್ಮುರು: ಬರಗಾಲದಿಂದಾಗಿ ಜಾನುವಾರುಗಳ ರಕ್ಷಣೆಗೆ ಸರ್ಕಾರ ಗೋಶಾಲೆ ಆರಂಭಿಸಿದ್ದು, ರೈತರಿಗೆ ಸಿಗುವಂತ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ದೇವಸಮುದ್ರ ಹೋಬಳಿಯ ರಾಂಪುರ ಹಾಗೂ ಕಸಬಾ ಹೋಬಳಿ ಮುತ್ತಿಗಾರಹಳ್ಳಿಯಲ್ಲಿ ಗೋಶಾಲೆ ಉದ್ಘಾಟಿಸಿ ಮಾತನಾಡಿದರು.ಈ ಬಾರಿ ಎದುರಾಗಿರುವ ಬರಗಾಲದಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜನ ಜಾನುವಾರುಗಳ ಮೇವಿನ ಕೊರತೆಯಾಗದಂತೆ ಸರ್ಕಾರ ಗೋಶಾಲೆ ಆರಂಭಿಸಿದೆ. ಬರಪರಿಹಾರದ ಪ್ರಾರಂಭಿಕವಾಗಿ ತಾಲೂಕಿನ ರಾಂಪುರ ಮತ್ತು ಮುತ್ತಿಗಾರಹಳ್ಳಿಯಲ್ಲಿ ಗೋಶಾಲೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾರಮ್ಮನಹಳ್ಳಿ ಸೇರಿದಂತೆ ವಿವಿಧ ಕಡೆ ಗೋಶಾಲೆಗಳನ್ನು ಆರಂಬಿಸಲು ಕ್ರಮವಹಿಸಲಾಗಿದೆ. ಬರದಿಂದ ಮೇವಿನ ಕೊರತೆ ಇದ್ದು, ಮೇವನ್ನು ವ್ಯರ್ಥ ಮಾಡದೆ ಅಗತ್ಯವಿದ್ದಷ್ಟು ಪಡೆಯಬೇಕು ಎಂದರು.
ಬರದಿಂದಾಗಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆವಹಿಸಲಾಗಿದ್ದು, ಜನರು ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕೆಲಸ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ಅವರೊಂದಿಗೆ ನಿತ್ಯವೂ ಸಂಪರ್ಕದಲ್ಲಿದ್ದೇನೆ ಎಂದರು.ತಹಸೀಲ್ದಾರ್ ಶಂಕ್ರಪ್ಪ ತಾಪಂ ಇಒ ಪ್ರಕಾಶ, ರಾಂಪುರ ಪಿಡಿಒ ಗುಂಡಪ್ಪ, ಬಿಜಿಕೆರೆ ಗ್ರಾಪಂ ಅಧ್ಯಕ್ಷ ಎಸ್.ಜಯಣ್ಣ, ಪಿಡಿಒ ಮಲ್ಲಿಕಾರ್ಜುನ, ಜಿಪಂ ಎಇಇ ನಾಗನಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಪ್ಪ, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಹರೀಶ, ಮುಖಂಡ ದೇವ ಸಮುದ್ರ ಕುಮಾರಸ್ವಾಮಿ ಇದ್ದರು.