ಯಲಬುರ್ಗಾ ತಾಲೂಕಿನಲ್ಲಿ ಕುಡಿವ ನೀರಿಗೆ ಹಾಹಾಕಾರ

| Published : Mar 07 2024, 01:50 AM IST

ಸಾರಾಂಶ

ಪ್ರತಿ ವರ್ಷಕ್ಕಿಂತಲೂ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದೆ. ತಾಲೂಕಾಡಳಿತ, ಗ್ರಾಪಂಗಳಿಂದ ಸಮಸ್ಯಾತ್ಮಕ ಗ್ರಾಮಗಳಿಗೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಂಡರೂ ನೀರಿನ ಸಮಸ್ಯೆ ನೀಗುತ್ತಿಲ್ಲ.

ಶಿವಮೂರ್ತಿ ಇಟಗಿ

ಯಲಬುರ್ಗಾ: ಬೇಸಿಗೆ ಕಾಲ ಆರಂಭವಾಗಿದ್ದು, ತಾಲೂಕಿನ ನಾನಾ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ತಾಲೂಕು ಅಧಿಕಾರಿಗಳು ಮಾತ್ರ ಲೋಕಸಭಾ ಚುನಾವಣೆಯ ಗುಂಗಿನಲ್ಲಿದ್ದಾರೆ. ಪರಿಣಾಮ ಜನರ ಗೋಳು ಕೇಳುವವರಿಲ್ಲದಂತಾಗಿದೆ.

ಪ್ರತಿ ವರ್ಷಕ್ಕಿಂತಲೂ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದೆ. ತಾಲೂಕಾಡಳಿತ, ಗ್ರಾಪಂಗಳಿಂದ ಸಮಸ್ಯಾತ್ಮಕ ಗ್ರಾಮಗಳಿಗೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಂಡರೂ ನೀರಿನ ಸಮಸ್ಯೆ ನೀಗುತ್ತಿಲ್ಲ.ಪ್ಲೊರೈಡ್‌ ನೀರಿನಿಂದ ಆತಂಕ:ತಾಲೂಕಿನ ಬಹುತೇಕ ಭಾಗದಲ್ಲಿನ ಅಂತರ್ಜಲದಲ್ಲಿ ಅಧಿಕ ಪ್ರಮಾಣದಲ್ಲಿ ಪ್ಲೊರೈಡ್‌ ಅಂಶವಿರುವುದು ಪತ್ತೆಯಾಗಿದೆ. ಪ್ಲೊರೈಡ್‌ ಯುಕ್ತ ನೀರನ್ನು ಸೇವಿಸುವುದರಿಂದ ಇಲ್ಲಿಯ ಜನತೆ ಮೊಣಕಾಲು, ಹಲ್ಲುನೋವು, ಎಲುಬು ನೋವು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ತಾಲೂಕಿನ ೨೨ ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿದ ಶುದ್ಧ ನೀರಿನ ಘಟಕಗಳು ಹೆಸರಿಗೆ ಮಾತ್ರ ಎಂಬಂತಾಗಿವೆ. ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರೆ ಬಹುತೇಕ ಘಟಕಗಳು ಸ್ಥಗಿತಗೊಂಡಿವೆ.ಕೆರೆಯ ನೀರೇ ಆಸರೆ:ತಾಲೂಕಿನ ಹಲವು ಗ್ರಾಮಗಳಾದ ಕರಮುಡಿ, ತೊಂಡಿಹಾಳ, ಬಂಡಿಹಾಳ, ಸಂಗನಹಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೆರೆಯ ನೀರನ್ನು ಅವಲಂಬಿಸಿದ್ದಾರೆ. ಬೇಸಿಗೆ ಸಮಯಕ್ಕೆ ಕೆರೆಯ ನೀರು ಬರಿದಾದರೆ ಇಲ್ಲಿಯ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ.ಗಗನಕುಸುಮವಾದ ಜೆಜೆಎಂ:ನಮ್ಮ ತಾಲೂಕಿನ ಮಸಾರಿ ಭಾಗ (ಕೆಂಪು ಮಣ್ಣಿನ ಭೂಮಿ) ಸೇರಿದಂತೆ ಅನೇಕ ಕಡೆಗಳಲ್ಲಿ ಸಮಸ್ಯೆಗಳು ನಿರಂತರವಾಗಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲ. ಜೆಜೆಎಂ ಯೋಜನೆಯಿಂದ ಹಲವು ಗ್ರಾಮಗಳಲ್ಲಿ ನಲ್ಲಿ ನೀರು ಬರುತ್ತಿದ್ದರೆ, ಇನ್ನು ಕೆಲ ಗ್ರಾಮಗಳಿಗೆ ನೀರು ಬಾರದೇ ಯೋಜನೆ ಗಗನಕುಸುಮವಾದಂತಾಗಿದೆ.ಬೋರ್‌ವೆಲ್‌ ಮಾಲೀಕರೊಂದಿಗೆ ಒಪ್ಪಂದ:ಈಗಾಗಲೇ ಟಾಸ್ಕ್ ಫೋರ್ಸ್‌ ಸಮಿತಿ ರಚನೆ ಮಾಡಲಾಗಿದ್ದು, ಕುಡಿವ ನೀರಿಗಾಗಿ ತಾಲೂಕಿಗೆ ₹೫೦ ಲಕ್ಷ ಬಿಡುಗಡೆಗೊಳಿಸಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಅಂತರ್ಜಲ ಕಡಿಮೆಯಾಗಿ ತಾಲೂಕಿನಲ್ಲಿ ನೀರಿನ ಬರ ಆವರಿಸದಿರಲೆಂದು ತಾಲೂಕಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ೮೦ ಗ್ರಾಮಗಳಲ್ಲಿ ೧೦೫ ಖಾಸಗಿ ಬೋರ್‌ವೆಲ್ ಗುರುತಿಸಿ, ಅದರಲ್ಲಿ ೪೦ ಮಾಲೀಕರಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದಾಗ್ಯೂ ಸಮಸ್ಯೆ ಉಂಟಾದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ತಯಾರಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.ಬರಗಾಲದಲ್ಲಿ ಯಾವುದೇ ಬಡಕೂಲಿ ಕಾರ್ಮಿಕರು ಉದ್ಯೋಗ ಅರಿಸಿ ಗುಳೆ ಹೋಗದಂತೆ ನಾನಾ ಉದ್ಯೋಗಾವಕಾಶ ಒದಗಿಸಿಕೊಡಬೇಕು. ನೀರಿನ ಸಮಸ್ಯೆ ಕಂಡು ಬಂದರೆ ಅಧಿಕಾರಿಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎನ್ನುತ್ತಾರೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ.

ಯಲಬುರ್ಗಾ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ತಾಲೂಕಾಡಳಿತ ಹೆಚ್ಚಿನ ನಿಗಾ ವಹಿಸಿದೆ ಎನ್ನುತ್ತಾರೆ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ.