ಚಿಕ್ಕಮಗಳೂರುಕಳೆದೊಂದು ವರ್ಷದಿಂದ ರಾಜ್ಯಾದ್ಯಂತ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌, ಅಗ್ರಿ ಟೂರಿಸಂಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆಯಲು ಪರದಾಡುತ್ತಿದ್ದವರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಇನ್ನೊಂದು ತಿಂಗಳಲ್ಲಿ ನೂತನ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬರಲಿದ್ದು, ಅರ್ಜಿ ಸಲ್ಲಿಸಿ ಒಂದೇ ಸೂರಿನಡಿ ಕಾಲಮಿತಿಯಲ್ಲಿ ಪರವಾನಗಿ ಪಡೆಯಬಹುದು.

ಪರವಾನಗಿ ಪಡೆಯಲು ಪರದಾಡುತ್ತಿದ್ದವರಿಗೆ ಇದೀಗ ಶುಭ ಸುದ್ದಿ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಳೆದೊಂದು ವರ್ಷದಿಂದ ರಾಜ್ಯಾದ್ಯಂತ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌, ಅಗ್ರಿ ಟೂರಿಸಂಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆಯಲು ಪರದಾಡುತ್ತಿದ್ದವರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಇನ್ನೊಂದು ತಿಂಗಳಲ್ಲಿ ನೂತನ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬರಲಿದ್ದು, ಅರ್ಜಿ ಸಲ್ಲಿಸಿ ಒಂದೇ ಸೂರಿನಡಿ ಕಾಲಮಿತಿಯಲ್ಲಿ ಪರವಾನಗಿ ಪಡೆಯಬಹುದು.

ಪ್ರವಾಸೋದ್ಯಮ ಇಲಾಖೆ ಸೇವೆಗಳನ್ನು ಸಕಾಲದಡಿ ತರಲು ಹಾಗೂ ಇಲಾಖೆ ವೆಬ್‌ಸೈಟ್‌ ಪುನಾರಚನೆ ಕಾರ್ಯಕ್ಕಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೋಂಸ್ಟೇ, ರೆಸಾರ್ಟ್‌, ಹೋಟೆಲ್‌, ಅಗ್ರಿ ಟೂರಿಸಂ ಆರಂಭಿಸುವವರಿಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಈಗಾಗಲೇ ಪರವಾನಗಿ ಪಡೆದು ಹೋಟೆಲ್‌, ರೆಸಾರ್ಟ್‌, ನಡೆಸುತ್ತಿದ್ದವರ ಪರವಾನಗಿ ಅವಧಿ ಮುಕ್ತಾಯ ಗೊಂಡು ಸಮಸ್ಯೆ ಉಂಟಾಗಿತ್ತು. ಆ ಎಲ್ಲ ಸಮಸ್ಯೆಗಳಿಗೆ ಇನ್ನೊಂದು ತಿಂಗಳಲ್ಲಿ ಪರಿಹಾರ ದೊರೆಯಲಿದೆ.

ಹೊಸ ವೆಬ್‌ಸೈಟ್‌ ಅನುಕೂಲ ಏನಿವೆ?

ಇನ್ನು ಮುಂದೆ ಹೋಂಸ್ಟೇ, ರೆಸಾರ್ಟ್‌, ಹೋಟೆಲ್‌ ಹಾಗೂ ಅಗ್ರಿ ಟೂರಿಸಂಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆಯಲು ಅಲೆದಾಡಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಿದರೆ ಸಾಕು ನಿರ್ದಿಷ್ಟ ದಿನದಲ್ಲಿ ಪರವಾನಗಿ ದೊರೆಯಲಿದೆ. ಜತೆಗೆ, ಈ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಸ್ಥಳೀಯ ಸಂಸ್ಥೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆಯಿಂದ ನಿರಾಪೇಕ್ಷಣ ಪ್ರಮಾಣ ಪತ್ರ (ಎನ್‌ಒಸಿ) ಪಡೆಯುವುದಕ್ಕೂ ಅಲೆಯಬೇಕಾಗಿಲ್ಲ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿದರೆ ಎನ್‌ಒಸಿ ದೊರೆಯಲಿದೆ.

ಸೌಲಭ್ಯಕ್ಕೂ ಅರ್ಜಿಗೆ ಅವಕಾಶ

ಪ್ರವಾಸೋದ್ಯಮ ಇಲಾಖೆಯಿಂದ ಪ್ರತಿ ವರ್ಷ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ವಿವಿಧ ಸೌಲಭ್ಯ ಮತ್ತು ರಿಯಾಯಿತಿ ನೀಡುವ ಯೋಜನೆಗಳಿವೆ. ಆ ಯೋಜನೆಗೂ ಹೊಸ ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

--ಬಾಕ್ಸ್‌--

ಇತ್ತೀಚೆಗಷ್ಟೆ ಆಫ್‌ಲೈನ್‌ಗೆ ಅವಕಾಶ

ಆನ್‌ಲೈನ್‌ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಪರವಾನಗಿ ನೀಡುವ ವ್ಯವಸ್ಥೆ ಪೂರ್ಣವಾಗಿ ಸ್ಥಗಿತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲೆ 86 ಹೋಂ ಸ್ಟೇ ಅರ್ಜಿ ವಿಲೇವಾರಿ ಬಾಕಿ ಇದೆ. ಒಟ್ಟಾರೆ, ರಾಜ್ಯ ಪರವಾನಗಿ ಅವಧಿ ಮೀರಿ ಹಾಗೂ ಹೊಸ ಅರ್ಜಿ ಸೇರಿದಂತೆ ನೂರಾರು ಅರ್ಜಿ ವಿಲೇವಾರಿ ಬಾಕಿ ಉಳಿದಿದ್ದವು. ಈ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಶುಲ್ಕ ಪಾವತಿಸಿ ಕೊಂಡು ಹೋಂ ಸ್ಟೇ ಅರ್ಜಿ ವಿಲೇ ವಾರಿಗೆ ಪ್ರವಾಸೋದ್ಯಮ ಇಲಾಖೆ ಆಯುಕ್ತರು ಅವಕಾಶ ನೀಡಿದ್ದರು. ಆ ಬಳಿಕ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲಿಯೇ ಬರೋಬ್ಬರಿ 36 ಹೋಂ ಸ್ಟೇ ಗಳ ಅರ್ಜಿ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದು ಪ್ರವಾಸೋದ್ತಮ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

--- ಕೋಟ್‌---

ಪ್ರವಾಸೋದ್ಯಮ ಇಲಾಖೆ ಹಿಂದಿನ ವೆಬ್‌ಸೈಟ್‌ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಆ ಎಲ್ಲವನ್ನೂ ಪರಿಹಾರ ಮಾಡಿ ಹೊಸ ವೆಬ್‌ಸೈಟ್‌ ಸಿದ್ಧಪಡಿಸಲಾಗಿದೆ. ಇನ್ನಷ್ಟು ಪಾರದರ್ಶಕ ವ್ಯವಸ್ಥೆ ಮೂಲಕ ಒಳಗೊಂಡಿರುವ ಈ ವೆಬ್‌ಸೈಟ್‌ ಬಹುತೇಕ ಪೂರ್ಣಗೊಂಡಿದ್ದು, ಒಂದು ತಿಂಗಳಲ್ಲಿ ಚಾಲನೆ ನೀಡಲಾಗುವುದು.

- ಡಾ.ತ್ರಿಲೋಕಚಂದ್ರ, ಆಯುಕ್ತರು, ಪ್ರವಾಸೋದ್ಯಮ ಇಲಾಖೆ

ಸೂಕ್ತ ಫೋಟೋ ಬಳಸಿ