ಹಿಪ್ಪರಗಿ ಜಲಾಶಯದಲ್ಲಿ ೩ ಟಿಎಂಸಿ ನೀರಷ್ಟೇ ಲಭ್ಯ

| Published : Feb 29 2024, 02:04 AM IST / Updated: Feb 29 2024, 02:05 AM IST

ಸಾರಾಂಶ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೆ ಸಂಜೀವಿನಿಯಾಗಿರುವ ತಾಲೂಕಿನ ಹಿಪ್ಪರಗಿ ಜಲಾಶಯದ ಒಡಲು ಬರಿದಾಗುತ್ತಿದ್ದು, ಫೆಬ್ರುವರಿ ತಿಂಗಳ ಕೊನೆಯಲ್ಲಿ ನದಿ ನೀರಿನಮಟ್ಟದ ತೀವ್ರ ಕುಸಿತವಾಗಿದ್ದರಿಂದ ಬೇಸಿಗೆ ನಿಭಾಯಿಸುವುದು ಸವಾಲಾಗಿ ಪರಿಣಮಸಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೆ ಸಂಜೀವಿನಿಯಾಗಿರುವ ತಾಲೂಕಿನ ಹಿಪ್ಪರಗಿ ಜಲಾಶಯದ ಒಡಲು ಬರಿದಾಗುತ್ತಿದ್ದು, ಫೆಬ್ರುವರಿ ತಿಂಗಳ ಕೊನೆಯಲ್ಲಿ ನದಿ ನೀರಿನಮಟ್ಟದ ತೀವ್ರ ಕುಸಿತವಾಗಿದ್ದರಿಂದ ಬೇಸಿಗೆ ನಿಭಾಯಿಸುವುದು ಸವಾಲಾಗಿ ಪರಿಣಮಸಿದೆ.

ಗರಿಷ್ಠ ೬ ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಈಗ ಕೇವಲ ೩ ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿದೆ. ಅಧಿಕಾರಿಗಳ ಪ್ರಕಾರ ಪ್ರತಿ ತಿಂಗಳಿಗೆ ೧ ಟಿಎಂಸಿಯಷ್ಟು ನೀರು ಹಿಪ್ಪರಗಿ ಜಲಾಶಯದಿಂದ ಬಳಕೆಯಾಗುತ್ತಿದೆ. ಈಗ ೩ ಟಿಎಂಸಿ ಮೇ ತಿಂಗಳವರೆಗೂ ನಿರ್ವಹಣೆಯಾಗುವುದೇ ಸವಾಲಿನ ಸಮಸ್ಯೆಯಾಗಿದ್ದು, ಶೀಘ್ರವೇ ಮಹಾರಾಷ್ಟ್ರದಿಂದ ಕನಿಷ್ಠ ೨ ಟಿಎಂಸಿಯಷ್ಟು ನೀರನ್ನು ಬಿಡುಗಡೆಗೊಳಿಸಿದ್ದಲ್ಲಿ ಬೇಸಿಗೆಯ ನಾಲ್ಕು ತಿಂಗಳು ನಿಭಾಯಿಸಲು ಸಾಧ್ಯವೆಂಬುದು ತಾಂತ್ರಿಕ ವಿಭಾಗದ ಲೆಕ್ಕಾಚಾರ.

ಬೆಳೆಗೆ ನೀರು ಬಳಕೆಗೆ ಕಡಿವಾಣವಿಲ್ಲ: ರಬಕವಿ-ಬನಹಟ್ಟಿ ನಗರ, ತೇರದಾಳ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ನಿಟ್ಟಿನಲ್ಲಿ ನದಿ ತಟದಲ್ಲಿರುವ ಭೂಮಿಗಳಿಗೆ ರೈತರು ಹರಿಸುತ್ತಿರುವ ನೀರು ಪೂರೈಕೆಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆಯಾಗದಿದ್ದಲ್ಲಿ ಬೆಳೆ ನಾಶವಾಗುವ ಭೀತಿಯೂ ಇದೆ. ಇದರಿಂದ ಭಾಗ್ಯಗಳ ಭರಾಟೆಯಲ್ಲಿರುವ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಂಡು ನೀರಿನ ವ್ಯವಸ್ಥೆ ಮಾಡಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.