ಚಿಕ್ಕಮಗಳೂರುಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪಾಲಿಸುತ್ತಿರುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪಾಲಿಸುತ್ತಿರುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಈಗಿನ ಕಾಂಗ್ರೆಸ್ ನಾಯಕರು ಕೇವಲ ಮುಖವಾಡ ಧರಿಸಿಕೊಂಡು ಅಂಬೇಡ್ಕರ್ ನಮ್ಮನವರು ಎನ್ನುತ್ತಿದ್ದು, ನಿಜವಾದ ಕಾಳಜಿಯಿಲ್ಲ. ಬಿಜೆಪಿ ಮಾತ್ರ ಅವರ ಆದರ್ಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಹೀಗಾಗಿ, ಮುಂದೆ ಪ್ರತಿವಾರ್ಡ್, ಮಂಡಲ, ಬೂತ್ ಮಟ್ಟದಲ್ಲಿ ಅವರ ವಿಚಾರಧಾರೆ ಪ್ರಸ್ತಾಪಿಸುವ ಕಾರ್ಯ ಮಾಡಬೇಕು ಎಂದರು.
ಭಾರತದ ಸ್ವಾತಂತ್ರ್ಯಕ್ಕೆ ಗಾಂಧೀಜಿ ಕಾರಣವಾದರೂ, ನಿಜವಾದ ರಾಷ್ಟ್ರಪಿತ ಡಾ.ಬಿ.ಆರ್.ಅಂಬೇಡ್ಕರ್. ಸರ್ವರನ್ನು ಒಂದೇ ದೋಣಿಯಲ್ಲಿ ಕೊಂಡೊಯ್ಯುವ ಮಹತ್ತರ ಕನಸು, ಆಧುನಿಕ ಭಾರತದಲ್ಲಿ ಈಡೇರುತ್ತಿದೆ ಎಂದು ತಿಳಿಸಿದರು.ಜೆಪಿ ರಾಜ್ಯ ಪ್ರಕೋಷ್ಟಗಳ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಆರ್.ಪ್ರೇಮ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ವಿಚಾರ ಧಾರೆ ಒಂದು ಪವಿತ್ರವಾದ ಬೆಳಕು. ಇದನ್ನು ಆರಿಸಿದೇ ಸದಾಕಾಲ ಉರಿಯುವಂತೆ ಮಾಡುವುದು ಭಾಜಪ ಕಾರ್ಯ ಕರ್ತರ ಮೂಲ ಧ್ಯೇಯ. ಸಮಾನತೆ, ಭಾತೃತ್ವ, ಸಹ ಬಾಳ್ವೆ ಎಂಬ ಹಾದಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಶ್ರೇಷ್ಟ ಜ್ಞಾನಿ. ಶೋಷಿತ ಸಮುದಾಯವನ್ನು ಮುನ್ನೆಲೆಗೆ ಕರೆತರಲು ದೇಶ-ವಿದೇಶಗಳಲ್ಲಿ ಅಧ್ಯಯನ ನಡೆಸಿ, ಅಲ್ಲಿನ ಸಂವಿಧಾನ ಅರ್ಥೈಸಿಕೊಂಡು, ಭಾರತದಲ್ಲಿ ಸಂವಿಧಾನ ರಚಿಸಿ ಸರ್ವಜಾತಿ, ಧರ್ಮದವರಿಗೂ ಒಂದೇ ರೀತಿ ಕಾನೂನು ರೂಪಿಸಿದವರು ಎಂದರು.ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಅಂಬೇಡ್ಕರ್ ರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡು ಚುನಾವಣೆಯಲ್ಲಿ ಸೋಲಿಸಲು ಆಪ್ತ ಸಹಾಯಕರನ್ನೇ ಎದುರಾಳಿಯಾಗಿಸಿ ಕುತಂತ್ರ ನಡೆಸಲಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್ ನಾಯಕರಾದ ನೆಹರು, ಇಂದಿರಾಗಾಂಧಿ ಜೀವಂತಿಕೆಯಲ್ಲೇ ಭಾರತ ರತ್ನ ಪಡೆದು ಕೊಂಡರು. ಆದರೆ ದೇಶಕ್ಕಾಗಿ ಸಂಪೂರ್ಣ ಜೀವನ ಮೀಸಲಿಟ್ಟ ಅಂಬೇಡ್ಕರ್ ಬಗ್ಗೆ ಯೋಚಿಸಲಿಲ್ಲ. ಕೊನೆ ಗಳಿಗೆಯಲ್ಲಿ ಅಂತಿಮ ಸಂಸ್ಕಾರಕ್ಕೂ ದೇಶದ ರಾಜಧಾನಿಯಲ್ಲಿ ಅವಕಾಶ ಕಲ್ಪಿಸದೇ ಕಡಲತೀರಕ್ಕೆ ರವಾನಿಸಿದ್ದು ಹೀನಕೃತ್ಯ ಎಂದರು.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಜಯ ಸದಾನಂದ್ ಮಾತನಾಡಿ, ಅಂಬೇಡ್ಕರ್ ವಿಚಾರಧಾರೆ ಸಾಗರದಷ್ಟು ಆಳ ಹಾಗೂ ಆಕಾಶದಷ್ಟು ವಿಸ್ತೀರ್ಣ. ಅವರ ಜೀವನ ಚರಿತ್ರೆಗಳು ಮನುಷ್ಯನ ಬಾಳಿಗೆ ಮೌಲ್ಯ ಯುತ ಬದುಕು ರೂಪಿಸಲಿದೆ. ಕೇಂದ್ರ ಸರ್ಕಾರ ಅಂಬೇಡ್ಕರ್ ಅವರ ಪಂಚಧಾಮಗಳ ಅಭಿವೃ ದ್ದಿಗೊಳಿಸಿ ಸಮಾಜಕ್ಕೆ ಅರ್ಪಿಸಿದೆ ಎಂದರು.
ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಹಿರಿಯ ಮುಖಂಡ ಕೋಟೆ ರಂಗನಾಥ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹೇಶ್, ನಗರ ಮಂಡಲ ಅಧ್ಯಕ್ಷ ಪುಷ್ಪ ರಾಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ ಉಪಸ್ಥಿತರಿದ್ದರು.