ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ: ವಿಜಯವೆಂಕಟೇಶ

| Published : Jun 23 2025, 11:53 PM IST / Updated: Jun 23 2025, 11:54 PM IST

ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ: ವಿಜಯವೆಂಕಟೇಶ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತದಾನಕ್ಕೆ ಮುಂದಾದಾಗ ಅದಕ್ಕೆ ಉತ್ತಮ ಮೌಲ್ಯ ಬರುತ್ತದೆ

ಮರಿಯಮ್ಮನಹಳ್ಳಿಯಲ್ಲಿ ರಕ್ತದಾನ ಶಿಬಿರ, 133 ಜನರಿಂದ ರಕ್ತದಾನ

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಯಾವುದೇ ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತದಾನಕ್ಕೆ ಮುಂದಾದಾಗ ಅದಕ್ಕೆ ಉತ್ತಮ ಮೌಲ್ಯ ಬರುತ್ತದೆ ಎಂದು ಬಿಎಂಎಂ ಇಸ್ಪಾತ್ ಸಂಸ್ಥೆಯ ಆರೋಗ್ಯಾಧಿಕಾರಿ ಡಾ. ಪಿ. ವಿಜಯವೆಂಕಟೇಶ ಹೇಳಿದರು.

ಇಲ್ಲಿಗೆ ಸಮೀಪದ ಬಿಎಂಎಂ ಸಂಸ್ಥೆಯ ವೃತ್ತೀಯ ಆರೋಗ್ಯ ಕೇಂದ್ರದಲ್ಲಿ ಬಿಎಂಎಂ ಸಂಸ್ಥೆ, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆ ಮತ್ತು ವಿಮ್ಸ್ ರಕ್ತ ಭಂಡಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಯಾವುದೇ ಒಬ್ಬ ವ್ಯಕ್ತಿಯ ಅಮೂಲ್ಯ ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ. ಇದೊಂದು ನಿಸ್ವಾರ್ಥ ಸೇವೆ. ಈ ಕಾರ್ಯ ಅಸಂಖ್ಯಾತ ಜೀವ ಉಳಿಸಲು ಸಹಕಾರಿಯಾಗಿದೆ. ಯಾವುದೇ ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು, ಹೃದಯ ರಕ್ತನಾಳಗಳ ಕಾಯಿಲೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಬಿಎಂಎಂ ಸಂಸ್ಥೆಯ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ ಹೆಗಡೆ ಮಾತನಾಡಿ, ಎಷ್ಟೋ ಬಾರಿ ರಸ್ತೆ ಅಪಘಾತ, ಹೆರಿಗೆ ಸಂದರ್ಭ, ಶಸ್ತ್ರ ಚಿಕಿತ್ಸೆ, ತುರ್ತು ಸಂದರ್ಭಗಳು ಮತ್ತು ಅವಶ್ಯಕತೆ ಇರುವವರಿಗೆ ರಕ್ತ ನೀಡುವುದರಿಂದ ಅವರ ಜೀವ ಉಳಿಸಿದ ಕೀರ್ತಿ ನಮ್ಮದಾಗುತ್ತದೆ ಎಂದು ಹೇಳಿದರು.

ಬಿಎಂಎಂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಪ್ರಧಾನ ಹಣಕಾಸು ಅಧಿಕಾರಿ ವಿ.ವಿ.ವಿ. ರಾಜು, ಸಂಸ್ಥೆಯ ಉಪಾಧ್ಯಕ್ಷ ಮನೀಶ್ ಡಿ. ವೆರ್ಣೇಕರ್, ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಂದ್ರ ಮುಂದ್ರಾ, ಸಂಸ್ಥೆಯ ವೈದ್ಯಾಧಿಕಾರಿ ಡಾ. ಅಂಜನಿ, ಡಾ. ಅನುಷಾ, ಡಾ. ವೀರೇಂದ್ರ,, ಡಾ. ಜನಾರ್ದನ, ಬಿಎಂಎಂ ಸಂಸ್ಥೆಯ ಹಿರಿಯ ಅಧಿಕಾರಿ ಎಚ್. ಜಹಾಂಗೀರ್, ನೂರುಹಾಸಿಗೆ ಆಸ್ಪತ್ರೆಯ ಡಾ. ಸೋಮಶೇಖರ, ಬಿಎಂಸಿ ಮತ್ತು ಆರ್‌ಸಿಯ ಡಾ. ಪುಷ್ಪಾ, ಆಪ್ತ ಸಮಾಲೋಚಕ ಸಂತೋಷ, ವೆಂಕಟೇಶ, ಹನುಮನಗೌಡ, ನೂರು ಹಾಸಿಗೆ ಆಸ್ಪತ್ರೆಯ ರಕ್ತ ಭಂಡಾರದ ಶಿವಮೂರ್ತಿ ಹಾಜರಿದ್ದರು.

ಆನಂತರ ಸಂಸ್ಥೆಯ ಸಿಬ್ಬಂದಿ ಮತ್ತು ಗುತ್ತಿಗೆ ಕಾರ್ಮಿಕರು ಒಟ್ಟು 133 ಜನರು ರಕ್ತದಾನ ಮಾಡಿದರು.

---

(20ಎಂಎಂಎಚ್‌1)

ಮರಿಯಮ್ಮನಹಳ್ಳಿ ಸಮೀಪದ ಬಿಎಂಎಂ ಸಂಸ್ಥೆಯ ವೃತ್ತೀಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.