ಸಾರಾಂಶ
ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಮಾಯಾವತಿ ಜನ್ಮ ದಿನಾಚರಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಮೂರನೇ ಅತಿ ದೊಡ್ಡ ಪಕ್ಷ ಬಿಎಸ್ಪಿಯಿಂದ ಮಾತ್ರ ಬಹುಸಂಖ್ಯಾತ ವರ್ಗಕ್ಕೆ ಸರ್ವ ಸಮಾನ ಹಕ್ಕು, ಅಧಿಕಾರ ಹಾಗೂ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಲು ಸಾಧ್ಯ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.
ತಾಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಯವರ 70ನೇ ಜನ್ಮದಿನವನ್ನು ಸ್ವಚ್ಛತಾ ಕಾರ್ಯ ಹಾಗೂ ಹಿರಿಯ ನಾಗರಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ ಮೂಲಕ ಬುಧವಾರ ಆಚರಿಸಿ ಮಾತನಾಡಿದರು.ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಅಂಬೇಡ್ಕರ್ ಆಶಯದಂತೆ ಅಧಿಕಾರ ನಿರ್ವಹಿಸಿದ ಕೀರ್ತಿ ಮಾಯಾವತಿ ಅವರಿಗೆ ಸಲ್ಲುತ್ತದೆ. ಶೋಷಿತರು, ಬಡವರು, ನಿವೇಶನ ಹಾಗೂ ಸೌಲಭ್ಯ ವಂಚಿತರಿಗೆ ನಿವೇಶನ, ನೌಕರಿ, ವಸತಿ ಹಾಗೂ ಉಳುವವನಿಗೆ ಭೂಮಿ ವ್ಯವಸ್ಥೆ ಕಲ್ಪಿಸಿಕೊಟ್ಟು ಸಹಾಯಕರಿಗೆ ಆಸರೆಯಾಗಿದ್ದರು ಎಂದರು.
ಪ್ರಸ್ತುತ ದೇಶ ಮತ್ತು ರಾಜ್ಯ ಆಳುತ್ತಿರುವ 2 ರಾಷ್ಟ್ರೀಯ ಪಕ್ಷಗಳು ಬಹುಸಂಖ್ಯಾತರ ಜಾತಿ ಹೆಸರು ಹೇಳಿಕೊಂಡು ಅಧಿಕಾರ ಗಿಟ್ಟಿಸಿವೆ. ಹೊರತು ಸಮಗ್ರವಾಗಿ ದೊರೆಯಬೇಕಾದ ಅಧಿಕಾರ ನೀಡಿಲ್ಲ, ದುಡಿಯುವ ವರ್ಗಕ್ಕೆ ನ್ಯಾಯ ಬದ್ಧ ಹಕ್ಕು, ಸುಸ್ಥಿರ ಜೀವನ ನೀಡದೇ ಸುಳ್ಳು ಹೇಳಿ, ಮತ ಪಡೆದು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ಜಾರಿಗೊಳಿಸಿ ಭವಿಷ್ಯದಲ್ಲಿ ಸದೃಢ ದೇಶ ನಿರ್ಮಿಸಲು ಕೇಂದ್ರದಲ್ಲಿ ಮಾಯಾವತಿ ಪ್ರಧಾನಿಯಾದರೆ ಮಾತ್ರ ಸಾಧ್ಯ. ಹೀಗಾಗಿ ಕಾರ್ಯಕರ್ತರು ಸ್ಥಳೀಯ ಮಟ್ಟದಿಂದ ಪಾರ್ಲಿಮೆಂಟ್‌ವರೆಗೂ ಶ್ರಮಿಸಬೇಕಿದ್ದು ಒಗ್ಗಟ್ಟಿನಿಂದ ಕೈ ಜೋಡಿಸಿ, ಆಡಳಿತ ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದರು.
ಬಿಎಸ್ಪಿ ಪಕ್ಷ ಅಂದಿನ ಕಾಲದಲ್ಲಿ ಕಾನ್ಸಿರಾಂ ಸ್ಥಾಪಿಸಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ ಪಕ್ಷ ಸಂಘಟಿಸಿದ್ದರು. ನಂತರ ಮಾಯಾವತಿ ಅವರ ನಾಯಕತ್ವ ಗುರುತಿಸಿ ಭವಿಷ್ಯದ ನಾಯಕಿಯನ್ನಾಗಿ ಮಾಡಿ ಅಂಬೇಡ್ಕರ್ ಆಶಯವನ್ನು ಬಿಎಸ್ಪಿ ಮುಖಾಂತರ ರಾಷ್ಟ್ರಕ್ಕೆ ಪರಿಚಯಿಸಿದ ಕೀರ್ತಿ ಕಾನ್ಸಿರಾಂ ಅವರಿಗೆ ಸಲ್ಲಬೇಕು ಎಂದು ಹೇಳಿದರು.ಪ್ರಸ್ತುತ ಹಿಂದೂ ಧರ್ಮದ ಹೆಸರು ಹೇಳಿ ಪರಿಶಿಷ್ಟರಿಗೆ ಅಧಿಕಾರದಿಂದ ದೂರ ತಳ್ಳಿ, ಮೌಢ್ಯತೆ ಬಿತ್ತಿ ಹಿಂದಿಕ್ಕುವ ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಶೂನ್ಯ ಸಾಧಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಮಾಯಾವತಿ ಪ್ರಧಾನಿಯಾಗುವುದು ಅನಿವಾರ್ಯ ವಾಗಿದ್ದು ಎಲ್ಲರೂ ಒಕ್ಕೊರಲಿನಿಂದ ರಾಷ್ಟ್ರೀಯ ಅಧ್ಯಕ್ಷರ ಕೈ ಬಲಪಡಿಸಬೇಕಿದೆ ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಉಳುವವನಿಗೆ ಸಾಗುವಳಿ ಚೀಟಿ, ಅಂಬೇಡ್ಕರ್ ಆವಾಸ್ ಯೋಜನೆ ಯಡಿ ವಸತಿ ಹಕ್ಕುಪತ್ರ, ಖಾಸಗೀ ವಲಯದಲ್ಲಿ ಮೀಸಲಾತಿ, ರಕ್ಷಣೆ ಮಾಯಾವತಿ ಕಲ್ಪಿಸಿದ್ದರು. ಇಂದಿನ ಯುವ ಸಮೂಹ ಬೇಡವಾದ ಪುಸ್ತಕಗಳನ್ನು ಓದುವ ಬದಲಾಗಿ ಅಂಬೇಡ್ಕರ್ ಚರಿತ್ರೆ ಅಭ್ಯಾಸಿಸಿ ಮುನ್ನೆಡೆದರೆ ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ರಾಷ್ಟ್ರದಲ್ಲಿ ಮಾಯಾವತಿಯವರನ್ನು ಪ್ರಧಾನಿ ಯಾಗಿಸಲು ಅಧಿಕಾರಬಲ ಬಹಳಷ್ಟಿದೆ. ಸ್ಥಳೀಯ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷವನ್ನು ಸದೃಢಗೊಳಿಸಿ, ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದಾಗ ಮಾತ್ರ ರಾಷ್ಟ್ರೀಯ ಅಧ್ಯಕ್ಷರ ಜನ್ಮ ದಿನಕ್ಕೆ ಅರ್ಥ ಬರಲಿದೆ ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ವೇಲಾಯುಧನ್, ಜಿಲ್ಲಾ ಉಪಾಧ್ಯಕ್ಷೆ ಕೆ. ಎಸ್.ಮಂಜುಳಾ, ತಾಲೂಕು ಅಧ್ಯಕ್ಷ ಎಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ್, ಖಜಾಂಚಿ ರತ್ನ, ಮುಖಂಡರಾದ ವೆಂಕಟೇಶ್, ಕಿಟ್ಟು, ಗಿರೀಶ್, ವೃದ್ಧಾಶ್ರಮದ ವ್ಯವಸ್ಥಾಪಕ ಶಿವಣ್ಣ ಉಪಸ್ಥಿತರಿದ್ದರು. 15 ಕೆಸಿಕೆಎಂ 1ಚಿಕ್ಕಮಗಳೂರಿನ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಬುಧವಾರ ನಡೆದ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕೆ.ಟಿ. ರಾಧಾಕೃಷ್ಣ ಉದ್ಘಾಟಿಸಿದರು. ಕೆ.ಬಿ. ಸುಧಾ, ಪರಮೇಶ್ವರ್, ಎಚ್.ಕುಮಾರ್ ಇದ್ದರು.