ನೋಟಿಸ್‌ಗೆ ಬೆಚ್ಚಿದ ವರ್ತಕರು ಯುಪಿಎ ಪೇಮೆಂಟ್‌ ಬೇಡ, ಓನ್ಲಿ ಕ್ಯಾಷ್‌!

| Published : Jul 17 2025, 12:31 AM IST / Updated: Jul 17 2025, 12:32 AM IST

ನೋಟಿಸ್‌ಗೆ ಬೆಚ್ಚಿದ ವರ್ತಕರು ಯುಪಿಎ ಪೇಮೆಂಟ್‌ ಬೇಡ, ಓನ್ಲಿ ಕ್ಯಾಷ್‌!
Share this Article
  • FB
  • TW
  • Linkdin
  • Email

ಸಾರಾಂಶ

ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದ ಬೇಕರಿ, ಕಾಂಡಿಮೆಂಟ್ಸ್​ ಮತ್ತು ಇತರ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ.

ಹಂತಹಂತ ಯುಪಿಎ ಸ್ವೀಕಾರ ತಿರಸ್ಕಾರಡಿಜಿ ಪೇಮೆಂಟ್‌ ಬದಲು ನಗದಿಗೆ ಮನವಿ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದ ಬೇಕರಿ, ಕಾಂಡಿಮೆಂಟ್ಸ್​ ಮತ್ತು ಇತರ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ.

ಪರಿಣಾಮ ಪ್ರಮುಖವಾಗಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಚಿಲ್ಲರೆ ವ್ಯಾಪಾರಿಗಳು ನಗದು ವ್ಯಾಪಾರಕ್ಕೆ ಮರಳುವ ಮನಸ್ಸು ಮಾಡುತ್ತಿದ್ದು, ತಮ್ಮ ಅಂಗಡಿಗಳಿಗೆ ಅಂಟಿಸಿದ್ದ ಯುಪಿಐ ಕ್ಯೂ ಆರ್ ಕೋಡ್ ಸ್ಟಿಕ್ಕರ್ ತೆಗೆಯುತ್ತಿದ್ದಾರೆ.

ಯುಪಿಐ ಪ್ಲಾಟ್‌ಫಾರ್ಮ್‌ಗಳ ಮೂಲಕ್ ಮಾಹಿತಿ ಪಡೆದಿರುವ ಇಲಾಖೆ ರಾಜ್ಯದಲ್ಲಿ ಈವರೆಗೆ ಯುಪಿಐ ಮೂಲಕ ಹಣ ಪಡೆಯುತ್ತಿರುವ 65ಸಾವಿರ ವರ್ತಕರ ಮಾಹಿತಿ ಸಂಗ್ರಹಿಸಿದೆ. ಸುಮಾರು 5900 ವರ್ತಕರಿಗೆ ನೋಟಿಸ್‌ ನೀಡಿದೆ. ಜಿಎಸ್‌ಟಿ ಕಟ್ಟುವಂತೆ, ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವಂತೆ ನೋಟಿಸ್ ನೀಡಲಾಗಿದೆ. ಹಣ ವರ್ಗಾವಣೆ ಸಂದರ್ಭದಲ್ಲಿ ಸಂದೇಹ ಇರುವ ಕೆಲವರ ಮಾಹಿತಿ ನೀಡುವಂತೆ ಬ್ಯಾಂಕ್‌ಗೂ ಕೋರಿದೆ. ಈ ಮಾಹಿತಿ ದೊರೆತ ಬಳಿಕ ಎರಡು-ಮೂರನೇ ಹಂತದಲ್ಲಿ ಇನ್ನಷ್ಟು ಜನರಿಗೆ ನೋಟಿಸ್‌ ಹೋಗಲಿದೆ.

ಸಂದೇಹ ಯಾಕೆ?:

ತೆರಿಗೆ ತಪ್ಪಿಸುವ ಉದ್ದೇಶದಿಂದ ಒಂದೇ ಅಂಗಡಿಗಳಲ್ಲಿ ಐದರಿಂದ ಒಂಬತ್ತು ಯುಪಿಐ ಐಡಿ ಇಟ್ಟುಕೊಂಡು ವಹಿವಾಟು ಮಾಡಿದವರ ಮಾಹಿತಿ ಇದೆ. ಅಲ್ಲದೆ, ಒಂದೇ ವಿಳಾಸದಲ್ಲಿ ನೋಂದಣಿ ಆದ ಹಲವು ಪ್ಯಾನ್ ಕಾರ್ಡ್‌ ಸಿಕ್ಕಿದ್ದು ಇವುಗಳಿಗೆ ಲಿಂಕ್‌ ಆದ ಬ್ಯಾಂಕ್‌ ಖಾತೆಗಳಿಗೆ ನಿರಂತರವಾಗಿ ಹಣ ವರ್ಗಾವಣೆ ಆಗಿದೆ. ಹೀಗಾಗಿ ತೆರಿಗೆ ಇಲಾಖೆಗೆ ಸಂದೇಹ ಇದೆ.

ನೋಟಿಸ್‌ ತಂದ ಆತಂಕ:

ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ಮಾಡಿದವರಿಗೆ ನೋಟಿಸ್‌ ನೀಡಲಾಗಿದ್ದರೂ ಇದು ಸಣ್ಣಮಟ್ಟದ ವರ್ತಕರಲ್ಲೂ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಬೆಂಗಳೂರಲ್ಲಿ ಸಣ್ಣಮಟ್ಟದ, ಬೀದಿ ವ್ಯಾಪಾರಿಗಳು ಕೂಡ ಅಂಗಡಿಗಳ ಮುಂದೆ ಯುಪಿಐ ಸ್ಟಿಕರ್ ಅಂಟಿಸಿಕೊಂಡಿದ್ದಾರೆ. ನಿಂಬೆ ಹಣ್ಣು, ಚಾಕುಲೆಟ್‌ ಖರೀದಿಸಿದ ಗ್ರಾಹಕರೂ ₹10- ₹20 ಪೇಮೆಂಟ್ ಮಾಡುತ್ತಿದ್ದಾರೆ.

ನೋ ಯುಪಿಐ:

ಡಿಜಿಟಲ್ ಪೇಮೆಂಟ್‌ನಿಂದಾಗಿ ಚಿಲ್ಲರೆ ಸಮಸ್ಯೆ ನಿವಾರಣೆಯಾಗಿತ್ತು. ಆದರೆ ಈಗ ನೋಟಿಸ್ ನೀಡುತ್ತಿರುವುದು ತಿಳಿದುಬಂದಿದೆ. ಅಲ್ಪ ಆದಾಯದಲ್ಲಿ ನಾನು ಜೀವನ ನಡೆಸಬೇಕು. ಆದ್ರೆ ಇನ್ಮುಂದೆ ಯುಪಿಐ ಪಾವತಿಗಳನ್ನು ಸ್ವೀಕರಿಸಲ್ಲ ಎಂದು ಕೆ.ಆರ್.ಮಾರುಕಟ್ಟೆಯ ವರ್ತಕರೊಬ್ಬರು ಹೇಳಿದರು.

ಮುಖ್ಯವಾಗಿ ಬೆಂಗಳೂರಿನಲ್ಲಿ ನೋಂದಣಿ ಮಾಡಿಕೊಳ್ಳದ ಸಾವಿರಾರು ಸಣ್ಣ ವ್ಯಾಪಾರಿಗಳಿದ್ದಾರೆ. ಇದರಲ್ಲಿ ರಸ್ತೆ ಬದಿ ಆಹಾರ, ತರಕಾರಿ, ಮಾಂಸ ಮಾರಾಟಗಾರರು ಸೇರಿದ್ದಾರೆ. ಇವರೆಲ್ಲರೂ ಸಣ್ಣ ಪ್ರಮಾಣದ ವ್ಯಾಪಾರಿಗಳಾಗಿದ್ದು, ನೋಟಿಸ್ ಪಡೆದುಕೊಳ್ಳಲು ಇಷ್ಟಪಡಲ್ಲ. ಈಗ ಬರುತ್ತಿರುವ ನೋಟಿಸ್‌ಗಳು ತೆರಿಗೆ ಪಾವತಿಸುವಂತೆ ಸೂಚಿಸುತ್ತವೆ. ಇದರಿಂದ ವ್ಯಾಪಾರಿಗಳು ಡಿಜಿಟಲ್ ಪಾವತಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ವರ್ತಕರ ಸಂಘಟನೆ ಹೇಳಿದೆ.

ನಾಲ್ಕು ವರ್ಷ ಸುಮ್ಮನಿದ್ದು, ಈಗ ಏಕಾಏಕಿ ಇಲಾಖೆ ನೀಡಿರುವ ನೋಟಿಸ್‌ನಲ್ಲಿ ಮೂರು ದಿನಗಳಲ್ಲಿ ಉತ್ತರಿಸುವಂತೆ ಹೇಳಿರುವುದು ವರ್ತಕರಲ್ಲಿ ಭೀತಿ ಸೃಷ್ಟಿಸಿದೆ. ಇಲಾಖೆ ಮೊದಲು ಮಾಹಿತಿ ನೀಡಿ, ತಿಳಿವಳಿಕೆ ನೀಡಿ ನೋಟಿಸ್‌ ನೀಡಬೇಕಿತ್ತು. ಇಷ್ಟೊಂದು ಮೊತ್ತವನ್ನು ಕಟ್ಟಿ ಎಂದರೆ ಸಣ್ಣ ವ್ಯಾಪಾರಿಗಳಿಂದ ಹೇಗೆ ಸಾಧ್ಯ ಎಂದು ಅವರು ಎಂದು ರಾಜ್ಯ ಕಾರ್ಮಿಕ ಪರಿಷತ್‌ನ ಡಾ.ರವಿ ಶೆಟ್ಟಿ ಬೈಂದೂರು ಪ್ರಶ್ನಿಸಿದರು.