ಸಿಎಂ ಸಾಚಾ ಆಗಿದ್ದರೇ ಕೆಂಪಣ್ಣ ವರದಿ ಬಿಡುಗಡೆ ಮಾಡಲಿ: ಜಗದೀಶ ಶೆಟ್ಟರ್‌

| Published : Aug 14 2024, 12:47 AM IST

ಸಿಎಂ ಸಾಚಾ ಆಗಿದ್ದರೇ ಕೆಂಪಣ್ಣ ವರದಿ ಬಿಡುಗಡೆ ಮಾಡಲಿ: ಜಗದೀಶ ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರೇ ನೀವು ಸಾಚಾ ಆಗಿದ್ದರೆ, ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಬೇಕು ಎಂದು ಸಂಸದ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಿಎಂ ಸಿದ್ದರಾಮಯ್ಯ ಅವರೇ ನೀವು ಸಾಚಾ ಆಗಿದ್ದರೆ, ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಬೇಕು ಎಂದು ಸಂಸದ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ, ನೀವು ಸಾಚಾ ಎನ್ನುವುದು ಗೊತ್ತಾಗುತ್ತದೆ. ಪದೇ ಪದೆ ನಾನು ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ನಿಮ್ಮ‌ ಪ್ರಾಮಾಣಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಸದನದಲ್ಲಿ ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚಿಸಿದಾಗ ಚರ್ಚೆಗೆ ಅವಕಾಶ ಕೊಡಲಿಲ್ಲ. ಆದರೆ, ಸದನದಲ್ಲಿ ಉತ್ತರ ಕೊಡದೇ ಮಾಧ್ಯಮಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದೀರಿ. ಇದೆಲ್ಲವನ್ನು ನೋಡಿದಾಗ ನೀವು ತಪ್ಪು ಮಾಡಿರುವುದು ಗೊತ್ತಾಗುತ್ತದೆ. ಅರ್ಕಾವತಿ ಹಗರಣ ಬಗ್ಗೆ ನಾನು ಧ್ವನಿ ಎತ್ತಿದ್ದೆ. ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೀಡಿದ ವರದಿಯನ್ನು ಸದನದಲ್ಲಿ ‌ಮಂಡನೆ ಮಾಡುವಂತೆ ಒತ್ತಾಯಿಸಿದರು.

ಪ್ರತಿಪಕ್ಷವಾಗಿ ನಾವು ಸರ್ಕಾರ ಮಾಡಿದ ತಪ್ಪನ್ನು ಪಾದಯಾತ್ರೆ ಮೂಲಕ ಜನರ ಬಳಿ ಹೋಗಿ ಜಾಗೃತಿ ಮೂಡಿಸಿದ್ದೇವೆ. ಮುಡಾ, ಎಸ್ಸಿ, ಎಸ್ಟಿ ಹಗರಣದಲ್ಲಿ ನೇರವಾದ ಪಾತ್ರ ಇದೆ. ಹಾಗಾಗಿ ನಾವು ಸಿಬಿಐ ತಿನಿಖೆಗೆ ಒತ್ತಾಯಿಸಿದ್ದೇವೆ ಎಂದರು.

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ವಿಚಾರದ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ. ಈ ವಿಚಾರಗಳನ್ನು ವರಿಷ್ಠರು ಗಮನಿಸುತ್ತಾರೆ. ಸರಿಯಾದ ಸಮಯದಲ್ಲಿ ಕ್ರಮಕೊಳ್ಳುತ್ತಾರೆ. ನಾನು ಹೈಕಮಾಂಡ್ ಅಲ್ಲ, ಎಲ್ಲವನ್ನೂ ವರಿಷ್ಠರು ಸಾಂದರ್ಭಿಕವಾಗಿ ಗಮನಿಸುತ್ತಾರೆ. ಸಂದರ್ಭ ಬಂದಾಗ ಏನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಎಲ್ಲರ ಜೊತೆಗೆ ಮಾತನಾಡಿ ನಿರ್ಧರಿಸುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಏನಾದರೂ ಹೆಚ್ಚು ಕಮ್ಮಿ ಆಗಿದ್ದರೂ ಅದನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದು ಉತ್ತರಿಸಿದರು.

ಬಳ್ಳಾರಿ ಪಾದಯಾತ್ರೆಗೆ ಹೋಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪಕ್ಷಕ್ಕೆ ಬದ್ಧ ಇರುವ ವ್ಯಕ್ತಿ. ಪಕ್ಷ ಕೈಗೊಳ್ಳುವ ನಿರ್ಧಾರದಂತೆ ನಾನು ನಡೆದುಕೊಳ್ಳುತ್ತೇನೆ ಎಂದರು.