ಸಾರಾಂಶ
ಕೆ.ಆರ್.ಪೇಟೆ : ಸಹಕಾರ ಕ್ಷೇತ್ರದಲ್ಲಿ ರಾಜ್ಯದ ಜನರಿಗೆ ಏನಾದರೂ ಅನುಕೂಲವಾಗಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಜನತೆ ಕೆಲಸ ಮಾಡುವವರನ್ನು ಸ್ಮರಿಸಿದರೆ ಅದು ರಾಜ್ಯಕ್ಕೂ ಒಳ್ಳೆಯದು ಮತ್ತು ದೇಶಕ್ಕೂ ಒಳ್ಳೆಯದು ಎಂದರು.
ನಾವು ರೈತರ ಪರ ಎನ್ನುವವರು ಮಾಡದ ಕೆಲಸಗಳನ್ನು ನಮ್ಮ ಸಿದ್ದರಾಮಯ್ಯ ಮಾಡಿದ್ದಾರೆ. ಜನರ ಆರ್ಥಿಕ ಸಬಲೀಕರಣಕ್ಕಾಗಿ ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಈ ಹಿಂದಿನ ಯಾವುದೇ ಸರ್ಕಾರ ಮಾಡಲಿಲ್ಲ ಎಂದು ಟೀಕಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿರಬಹುದು. ಆದರೆ, ಇತ್ತೀಚೆಗೆ ನಡೆದ ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಜನ ನಮ್ಮನ್ನು ಬೆಂಬಲಿಸಿ ನಮ್ಮ ಪರ ಜನಾದೇಶ ನೀಡಿದ್ದಾರೆ. ಜನರನ್ನು ದಾರಿತಪ್ಪಿಸುತ್ತಿದ್ದವರಿಗೆ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿಯ ಜನ ಉತ್ತರ ನೀಡಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತೀ ಹಂತದಲ್ಲಿಯೂ ಮೋಸ ಆಗುತ್ತಿದೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಮೋಸ ಆಗದಂತೆ ಕೆಲಸ ಮಾಡುತ್ತಿದೆ. ನಮ್ಮ ಜನಪರ ಕಾರ್ಯಕ್ರಮಗಳ ಬಗೆಗಿನ ಸಂದೇಶವನ್ನು ನಾಳೆ ಹಾಸನದ ಸಮಾವೇಶದಲ್ಲಿ ಜನರ ಮುಂದಿಡಲಿದ್ದೇವೆ ಎಂದರು.
ಕೃಷಿ ಇಲಾಖೆಯಲ್ಲಿ ಹಲವು ರೀತಿಯ ಸೌಲಭ್ಯ ಸದುಪಯೋಗಿಸಿಕೊಳ್ಳಿ: ಆರ್.ಹರೀಶ್
ನಾಗಮಂಗಲ : ರೈತರ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲು ಇಲಾಖೆಯಲ್ಲಿ ಹಲವು ರೀತಿಯ ಸೌಲಭ್ಯಗಳು ಲಭವಿದೆ. ಈ ಯೋಜನೆಯ ಸದುಪಯೋಗಪಡಿಸಿಕೊಂಡು ಹೆಚ್ಚು ಇಳುವರಿಯೊಂದಿಗೆ ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ರೈತರಿಗೆ ರಿಯಾಯ್ತಿ ದರದಲ್ಲಿ ರೋಟೋವೇಟರ್, ರೋಟರಿ ಟಿಲ್ಲರ್, ಕಳೆ ಕೊಚ್ಚುವ ಯಂತ್ರ, ಮೇವು ಕತ್ತರಿಸುವ ಯಂತ್ರ, ಪವರ್‌ಟಿಲ್ಲರ್ ಸೇರಿದಂತೆ ಅನೇಕ ಬಗೆಯ ಯಂತ್ರೋಪಕರಣಗಳು ಇಲಾಖೆಯಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಸೂಕ್ಷ್ಮ ನೀರಾವರಿ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ತುಂತುರು ನೀರಾವರಿ ಘಟಕ ಮತ್ತು ಕಬ್ಬಿಗೆ ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳಲು ಅವಕಾಶಗಳಿವೆ. ಕೃಷಿ ಸಂಸ್ಕರಣೆ ಯೋಜನೆಯಡಿ ರಾಗಿ ಕ್ಲೀನಿಂಗ್ ಮಿಲ್, ಹಿಟ್ಟಿನ ಗಿರಣಿ, ಎಣ್ಣೆಗಾಣ, ಕಬ್ಬಿನ ಜ್ಯೂಸ್ ತಯಾರಿಸುವ ಯಂತ್ರಗಳನ್ನೂ ಕೂಡ ಪಡೆಯದು.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶವಿದೆ. ಈ ಯೋಜನೆಯಡಿ ಪ್ಯಾಕೇಜ್ ಮಾದರಿಯಲ್ಲಿ ಕ್ಷೇತ್ರಬದು, ಕೃಷಿ ಹೊಂಡ, ಹೊಂಡದ ಅಳತೆಗೆ ಟಾರ್ಪಲ್, ಹೊಂಡದ ಸುತ್ತ ತಂತಿಬೇಲಿ, ಡೀಸೆಲ್ ಇಂಜಿನ್ ಮತ್ತು ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಬೇಕು.
ಫಲಾನುಭವಿ ರೈತರು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಒಟ್ಟಾರೆ 6 ಘಟಕಗಳನ್ನು ಕಡ್ಡಾಯ ಅಳವಡಿಸಿಕೊಂಡಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.80 ಹಾಗೂ ಎಸ್ಸಿ ಎಸ್ಟಿ ರೈತರಿಗೆ ಶೇ.90ರಷ್ಟು ಸಬ್ಸಿಡಿ ಸಿಗಲಿದೆ.
ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟಾರ್ಪಲಿನ್, ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೆಟ್, ಜಿಪ್ಸಂ, ಬೋರಾಕ್ಸ್, ಜೈವಿಕ ಗೊಬ್ಬರ, ಹಸಿರೆಲೆ ಬೀಜಗಳು, ಡಯಂಚ ಹಾಗೂ ಅಬ್ಸಣಬು ಲಭ್ಯವಿದೆ. ರೈತರು ಇಲಾಖೆ ಸವಲತ್ತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದ್ದಾರೆ.