ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಇತ್ತೀಚಿನ ವರ್ಷಗಳಲ್ಲಿ ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದು ಹಕ್ಕು ಮತ್ತು ಕರ್ತವ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಬೇಸರ ವ್ಯಕ್ತಪಡಿಸಿದರು.ತಾಲೂಕು ಆಡಳಿತ ಬೇಲೂರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸರ್ಕಾರಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಿಶು ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ. ಜೊತೆಗೆ ಮತ ಚಲಾಯಿಸುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆರಿಸುವುದು ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಬಹಳಷ್ಟು ಜನರು ಸರದಿ ಸಾಲಿನಲ್ಲಿ ಯಾರು ನಿಲ್ಲುತ್ತಾರೆ, ಹೇಗಿದ್ದರೂ ರಜಾ ಸಿಕ್ಕಿದೆ. ಪ್ರವಾಸ ಹೋಗೋಣ ಅಥವಾ ಮನೆಯಲ್ಲಿ ಇರೋಣ ಎಂದು ಮತದಾನ ಮಾಡುವುದಿಲ್ಲ. ಪ್ರಜ್ಞಾವಂತ ಮಹಿಳೆಯರು ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ಅರಿತು ಜವಾಬ್ದಾರಿಯುತವಾಗಿ ಜೀವನ ನಡೆಸಬೇಕು. ಬಾಲ್ಯವಿವಾಹಗಳಂತಹ ಘಟನೆಗಳು ನಡೆದರೆ ತಕ್ಷಣ ಮಾಹಿತಿ ನೀಡಬೇಕು ಎಂದರು.
ತಹಸೀಲ್ದಾರ್ ಮಮತಾ ಎಂ ಮಾತನಾಡಿ, ಹೆಣ್ಣುಮಕ್ಕಳು ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವ್ಯಾಮೋಹಕ್ಕೆ ಬಲಿಯಾಗಿ ಒಂದೆರಡು ತಿಂಗಳ ನಂತರ ವಾಸ್ತವಾಂಶ ತಿಳಿದು ತಾನು ದುಡುಕಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಾರೆ. ಆಸೆ, ಆಮಿಷಗಳಿಗೆ ಬಲಿಯಾಗದೆ ವಿದ್ಯಾಭ್ಯಾಸದ ಕಡೆ ಗಮನಕೊಟ್ಟು ಶಾಲೆಗೂ ಕುಟುಂಬಕ್ಕೂ ಒಳ್ಳೆಯ ಹೆಸರು ತರಬೇಕು. ಹಕ್ಕು ಮತ್ತು ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿಎಂ ಪೃಥ್ವಿ, ಕಾರ್ಯದರ್ಶಿ ಜೆಸಿ ಪುಟ್ಟಸ್ವಾಮಿಗೌಡ, ಸಹಾಯಕ ಸರ್ಕಾರಿ ಅಭಿಯೋಜಕೆ ಶಶಿಕಲಾ, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಗುರುಪ್ರಸಾದ್, ನಿರೂಪಣೆ ಶಿವ ಮರಿಯಪ್ಪ, ಸ್ವಾಗತ ಮಂಜು ನೆರವೇರಿಸಿದರು.