ಸುಪ್ರಸಿದ್ಧ ಸೂಳೆಕೆರೆ ಕೋಡಿ ಹರಿಯಲು ಐದೇ ಅಡಿ ಬಾಕಿ

| Published : Sep 02 2025, 01:00 AM IST

ಸಾರಾಂಶ

ಏಷ್ಯಾ ಖಂಡದಲ್ಲೇ 2ನೇ ಅತಿ ದೊಡ್ಡ ಕೆರೆಯಾದ, ತಾಲೂಕಿನ ಇತಿಹಾಸ ಪ್ರಸಿದ್ಧ ಸೂಳೆಕೆರೆ ಭರ್ತಿಯಾಗಿ ಕೋಡಿ ಬೀಳಲು ಕೇವಲ 5 ಅಡಿ ನೀರು ಏರಿಕೆಯಾಗಲು ಮಾತ್ರ ಬಾಕಿ ಇದೆ.

- ಹಿರೇಹಳ್ಳ, ಹರಿದ್ರಾವತಿ ಹಳ್ಳ ವ್ಯಾಪ್ತಿಯಲ್ಲಿ ಉತ್ತಮ ಮಳೆ

- ಭದ್ರಾ ಚಾನಲ್‌ನಿಂದಲೂ ಕೆರೆಗೆ ನೀರು

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಏಷ್ಯಾ ಖಂಡದಲ್ಲೇ 2ನೇ ಅತಿ ದೊಡ್ಡ ಕೆರೆಯಾದ, ತಾಲೂಕಿನ ಇತಿಹಾಸ ಪ್ರಸಿದ್ಧ ಸೂಳೆಕೆರೆ ಭರ್ತಿಯಾಗಿ ಕೋಡಿ ಬೀಳಲು ಕೇವಲ 5 ಅಡಿ ನೀರು ಏರಿಕೆಯಾಗಲು ಮಾತ್ರ ಬಾಕಿ ಇದೆ.

ಕೆರೆಗೆ ನೀರಿನ ಸಂಪನ್ಮೂಲವಾದ ಭದ್ರಾ ನಾಲೆಯ ಬಿಡುಗಂಡಿಯ ಮೂಲಕ ಹರಿಸುವ ನೀರು ಮತ್ತು ಚನ್ನಗಿರಿ ಪಟ್ಟಣದ ಹರಿದ್ರಾವತಿ ಹಳ್ಳ ಮತ್ತು ಹಿರೇಹಳ್ಳದಿಂದ ಹರಿಯುವ ನೀರು ಈ ಕೆರೆಗೆ ನೀರಿನ ಸಂಪನ್ಮೂಲವಾಗಿದೆ. ಹಿರೇಹಳ್ಳ ಮತ್ತು ಹರಿದ್ರಾವತಿ ಹಳ್ಳದ ವ್ಯಾಪ್ತಿಯ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಹಾಗೂ ಭದ್ರಾ ಚಾನಲ್‌ನಿಂದಲೂ ನೀರು ಕೆರೆಗೆ ಹರಿದು ಭರ್ತಿಯಾಗುತ್ತಿದೆ.

ಸೂಳೆಕೆರೆ (ಶಾಂತಿಸಾಗರ)ಯ ಸುತ್ತಳತೆ ವಿಸ್ತೀರ್ಣ 5447.10 ಹೆಕ್ಟರ್ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. 27 ಅಡಿ ಆಳವಿದ್ದು, ಪ್ರಸ್ತುತ 22 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕೇವಲ 5 ಅಡಿ ನೀರು ಏರಿಕೆ ಕಂಡಲ್ಲಿ ಕೆರೆ ಸಂಪೂರ್ಣ ತುಂಬಿ ಕೋಡಿ ಹರಿಯಲಿದೆ. ಈ ಸಂಭ್ರಮಕ್ಕೆ ಈಗ ದಿನಗಣನೆ ಆರಂಭವಾಗಿದೆ.

ಈ ಕೆರೆಗೆ ಸಿದ್ದನನಾಲೆ, ಬಸವನನಾಲೆ ಎಂಬ ಎರಡು ತೂಬುಗಳಿವೆ. ಈ ತೂಬುಗಳ ಮೂಲಕ 2891 ಹೆಕ್ಟರ್ ಪ್ರದೇಶಗಳಿಗೆ ನೀರುಣಿಸುತ್ತಾ ಕಬ್ಬು, ಬತ್ತ ಮತ್ತು ತೋಟದ ಬೆಳೆಗಳ ರೈತರಿಗೆ ಕೆರೆ ವರದಾನವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಅಭಿಯಂತರ ರಮೇಶ್ ಕೆರೆಯ ಮಹತ್ವವನ್ನು ಹೇಳುತ್ತಾರೆ.

2.9 ಟಿಎಂಸಿ ನೀರು ಸಂಗ್ರಹ:

ಶಾಂತಿಸಾಗರ ಅಥವಾ ಸೂಳೆಕೆರೆ ಹೆಸರಿನ ಈ ಕೆರೆಯು ಚಿತ್ರದುರ್ಗ, ಹೊಳಲ್ಕೆರೆ, ಸಿರಿಗೆರೆ, ಜಗಳೂರು, ಚನ್ನಗಿರಿ ತಾಲೂಕಿನಲ್ಲಿನ ಗ್ರಾಮಗಳು ಸೇರಿದಂತೆ 120 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವಂತಹ ಜಲಪಾತ್ರೆಯಾಗಿದೆ.

- - -

(ಬಾಕ್ಸ್) * ಚನ್ನಗಿರಿ ತಾಲೂಕಿನ ಸೂಳೆಕೆರೆ ಜಾಗ ಒತ್ತುವರಿಯಾಗುತ್ತಿದೆ. ಹೀಗಿದ್ದರೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇದು ಆಡಳಿತ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸೂಳೆಕೆರೆ ಉಳಿಸಿ ಎಂಬ ಘೋಷಣೆಯೊಂದಿಗೆ ಹೋರಾಟ ಮಾಡುತ್ತಿರುವ ಖಡ್ಗ ಸಂಸ್ಥೆಯ ಅಧ್ಯಕ್ಷ ರಘು ತಿಳಿಸಿದ್ದಾರೆ.

ಎಂಟ್ಹತ್ತು ವರ್ಷಗಳಿಂದ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ಮತ್ತು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಸಂಘಟನೆ ಹೋರಾಟಗಾರರು ಸೇರಿ ಪಾದಯಾತ್ರೆ, ಪ್ರತಿಭಟನೆಗಳ ನಡೆಸಿ ಸರ್ಕಾರದ ಗಮನವನ್ನು ಸೆಳೆಯಲಾಗಿತ್ತು ಎಂದಿದ್ದಾರೆ.

ಸೂಳೆಕೆರೆಯ ಸುತ್ತಲಿನ ಪ್ರದೇಶ ಸರ್ವೆ ಮೂಲಕ ಕೆರೆ ವಿಸ್ತೀರ್ಣ ಅಳತೆ ಮಾಡಿಸಿ, ಕೆರೆಯ ಜಾಗ ರಕ್ಷಿಸುವಂತೆ ಹೋರಾಟ ನಡೆಯುತ್ತಲೇ ಇದೆ. ಈ ವಿಚಾರವಾಗಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಕೆಯಾಗಿದೆ ಎಂದಿದ್ದಾರೆ.

- - -

-1ಕೆಸಿಎನ್ಜಿ1, 2: ಸೂಳೆಕೆರೆಯಲ್ಲಿ ನೀರು ಸಂಗ್ರಹವಾಗಿರುವ ವಿಹಂಗಮ ನೋಟ.