ಸಾರಾಂಶ
- ಭಗತ್ ಸಿಂಗ್ ಕಾರ್ಮಿಕರ ಹಿತರಕ್ಷಣಾ ಸಮಿತಿ ಉದ್ಘಾಟನೆ - - - ದಾವಣಗೆರೆ: ಸಂಘಟನೆಗಳು ಬಲವಾಗಿದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸಂಘಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೆಬ್ಬಾಳು ಟೋಲ್ ಪ್ಲಾಜಾದಲ್ಲಿ ಭಾನುವಾರ ಆಯೋಜಿಸಿದ್ದ ಭಗತ್ ಸಿಂಗ್ ಕಾರ್ಮಿಕರ ಹಿತರಕ್ಷಣಾ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸಂಘಟನೆಗಳಲ್ಲಿ ಸಾಕಷ್ಟು ಅವಘಡಗಳಿಗೆ ತುತ್ತಾಗುವುದು ಕಾಣುತ್ತಿದ್ದೇವೆ. ಇಂತಹ ಅವಘಡಗಳಿಗೆ ತುತ್ತಾಗದೇ ನಿಮ್ಮ ಸಂಘಟನೆ ಬಲಿಷ್ಠಗೊಳಿಸಬೇಕು. ಆ ಮೂಲಕ ಸಮಸ್ಯೆಗಳು ಬಂದಾಗ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಳ್ಳಬಹುದು ಎಂದರು.ಗುತ್ತಿಗೆದಾರರು ಕಾರ್ಮಿಕರ ಹಿತಕಾಯುತ್ತಿಲ್ಲ. ಅವರನ್ನು ಶೋಷಣೆ ಮಾಡಲಾಗುತ್ತದೆ. ಸಕಾಲಕ್ಕೆ ವೇತನ, ಪಿಎಫ್, ಇಎಸ್‌ಐ ಹಣ ಕಟ್ಟದೇ ಹಗಲುದರೋಡೆ ಮಾಡಲಾಗುತ್ತಿದೆ. ಈ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಕಾರ್ಮಿಕರ ಪರವಾಗಿ ಧ್ವನಿಯೆತ್ತಿ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ. ಸರ್ಕಾರದಿಂದಲೇ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವೇತನ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ. ಅದಕ್ಕೆ ಕಾರ್ಮಿಕರು ಸಚಿವರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಾಗಿ ಭರವಸೆ ಸಹ ನೀಡಿದ್ದಾರೆ ಎಂದು ತಿಳಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಆರ್.ಎಸ್. ಸಿಂಗ್ ಮಾತನಾಡಿ, ಕಾರ್ಮಿಕರು ಸಂಘಟಿತರಾಗಬೇಕು. ಎಲ್ಲ ವರ್ಗಗಳ ಕಾರ್ಮಿಕರ ಆರ್ಥಿಕ ಬಲವರ್ಧನೆಗೆ ಸಂಘಟನೆಗಳು ಕೂಡ ಬಲಗೊಳ್ಳಬೇಕಾಗಿದೆ ಎಂದರು.ಈ ಸಂದರ್ಭ ರಾಣೇಬೆನ್ನೂರು ರೈತ ಸಂಘದ ಮುಖಂಡ ರವೀಂದ್ರನಾಥ್ ಪಟೇಲ್, ಟೋಲ್ ಮುಖ್ಯಸ್ಥ ಚೌದರಿ, ಟೋಲ್ ಸಿಬ್ಬಂದಿ, ರೈತ ಮುಖಂಡರು, ಭಗತ್ ಸಿಂಗ್ ಕಾರ್ಮಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
- - - -4ಕೆಡಿವಿಜಿ32ಃ:ದಾವಣಗೆರೆ ತಾಲೂಕಿನ ಹೆಬ್ಬಾಳು ಟೋಲ್ ಪ್ಲಾಜ್‌ನಲ್ಲಿ ಆಯೋಜಿಸಿದ್ದ ಭಗತ್‌ಸಿಂಗ್ ಕಾರ್ಮಿಕರ ಹಿತರಕ್ಷಣಾ ಸಮಿತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿದರು.