ಸಾರಾಂಶ
ಹಾನಗಲ್ಲ: ದಾನದಲ್ಲಿ ದೌಲತ್ತು ದೈನ್ಯತೆಗಳಿರಬಹುದು. ದಾಸೋಹದಲ್ಲಿ ಮಾತ್ರ ನಿಯತ್ತು ಸಂತೃಪ್ತಿಗಳೇ ಪ್ರಧಾನವಾಗಿದ್ದು, ಕಾಯಕದಿಂದ ಬಂದ ಫಲವೇ ದಾಸೋಹವಾಗುತ್ತದೆ ಎಂದು ಉಪನ್ಯಾಸಕಿ ಸುನೀತಾ ಉಪ್ಪಿನ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ, ಸುತ್ತೂರು ಜಗದ್ಗುರು ಶ್ರೀ ಈಶಾನೇಶ್ವರ ಒಡೆಯರ ಹಾಗೂ ಜಗದ್ಗುರು ಶ್ರೀ ನಿಜಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದತ್ತಿ, ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದುರ್ಬಲರಿಗೆ ನೈತಿಕ ಬಲ ತಂದು ಕೊಟ್ಟ, ಅನ್ನ ಆಶ್ರಯ ಅಕ್ಷರ ದಾಸೋಹದ ದಿವ್ಯ ಶಕ್ತಿಯಾದ, ಜಾಗತಿಕ ಮಟ್ಟದಲ್ಲಿ ಶರಣ ತತ್ವ ಚಿಂತನೆಗೆ ಇಂಬು ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಸುತ್ತೂರು ರಾಜೇಂದ್ರ ಜಗದ್ಗುರುಗಳವರು ನಾಡು ಕಂಡ ಅಪ್ರತಿಮ ಸಾಧಕರು. ವಚನವೆಂಬ ಅಮೂಲ್ಯ ರತ್ನಗಳ ಪ್ರಚಾರದಲ್ಲಿ ತೊಡಗಿ ವಿಕೃತ ವಿಕಾರ ವಿರೂಪ ಮನಸ್ಸಿನ ಪರಿವರ್ತನೆಗೆ ನಾಂದಿ ಹಾಡಿದ್ದಾರೆ. ಭಕ್ತಿ ಶಕ್ತಿ ಮುಕ್ತಿಯ ಮಾರ್ಗ ತೋರಿದ್ದಾರೆ. ದೀನರ ಸೇವೆಯಲ್ಲಿಯೇ ಜೀವನದ ಸಂತೃಪ್ತಿ ಕಂಡ ದಿವ್ಯ ಚೇತನ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಶರಣ ಸಂಸ್ಕೃತಿ ಸಾಮಾಜಿಕ ಸ್ವಾಸ್ಥ್ಯದ ಸರಳ ಸಂದೇಶ ಹೊಂದಿದೆ. ಸದಾ ಕಾಲಕ್ಕೂ ಸಲ್ಲುವ, ಮನುಷ್ಯನಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವ ಸಂವೇದನೆಯ ಸಾಹಿತ್ಯ. ಪರಿಶುದ್ಧ ಜೀವನಕ್ಕೆ ಸಪ್ತ ಸೂತ್ರಗಳನ್ನು ನೀಡಿದ ಶರಣರು ನಡೆದದ್ದನ್ನೆ ನುಡಿದರು. ಅದರ ಫಲವೇ ವಚನ ಸಾಹಿತ್ಯ ಎಂದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಶರಣರ ಪುಣ್ಯ ಪರಂಪರೆಯಲ್ಲಿ ನಮ್ಮ ಬದುಕನ್ನು ಅರಳಿಸಿಕೊಳ್ಳಬೇಕಾಗಿದೆ. ಇಂದಿನ ಸಾಮಾಜಿಕ ವ್ಯವಸ್ಥೆಗೆ ವಚನಗಳ ಅರಿವು ಪ್ರತಿ ಮನೆ ಮುಟ್ಟಬೇಕಾಗಿದೆ ಎಂದರು.ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಯಕ ಭಕ್ತಿ ಸಂದೇಶಗಳು ವಚನಗಳ ಸಾರ ಸರ್ವಸ್ವ. ಬದುಕಿನಲ್ಲಿ ಅಳವಡಿಸಿಕೊಂಡು ಆತ್ಮಾವಲೋಕನದ ಮೂಲಕ ಜೀವನ ಸಾಧನೆಗೆ ಅತ್ಯುತ್ತಮ ಸಂದೇಶಗಳು ಎಂದರು.ನಗರ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಆಶಯ ನುಡಿ ನುಡಿದರು. ಕಾರ್ಯದರ್ಶಿ ನಿರಂಜನ ಗುಡಿ, ತಾಲೂಕು ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪರಸ್ಕೃತ ಎಸ್.ಎಫ್. ಕಠಾರಿ, ಅಕ್ಕಮ್ಮ ಶೆಟ್ಟರ, ಸುಭಾಸ ಹೊಸಮನಿ, ಅಶೋಕ ದಾಸರ, ಎ.ಆರ್. ಪ್ರಾಣೇಶರಾವ, ಎಂ.ಎಸ್. ಹುಲ್ಲೂರ, ಕದಳಿ ಕಾರ್ಯದರ್ಶಿ ರೇಖಾ ಶೆಟ್ಟರ, ಸೌಭಾಗ್ಯ ಉದಾಸಿ, ಶಾರದಾ ಉದಾಸಿ, ಲಕ್ಷ್ಮೀ ಸಿಂಧೂರ. ವಿಜಯಕ್ಕ ಕಬ್ಬೂರ, ರೂಪಾ ಗೌಳಿ, ಪ್ರೊ.ಸಿ.ಮಂಜುನಾಥ ಮೊದಲಾದವರು ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಆದಿತ್ಯ ಹಾಗೂ ಆದ್ಯಾ ಡೂಗೂರಮಠ, ಪೂರ್ಣಿಮಾ ಶಿವಗಿರಿ, ಲಕ್ಷ್ಮೀ ಸಿಂಧೂರ ವಚನಗಳನ್ನು ಹಾಡಿದರು.