ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರು ಮಾಡುವುದು ಸಂಬಂಧಿಸಿದ ಇಲಾಖೆ ಸಚಿವರು, ಶಾಸಕರು ಅಲ್ಲ, ಕೆಇಡಿಬಿ ಸಂಸ್ಥೆ ಮಾತ್ರ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಅವರು ಬಸರಾಳು ಬಳಿ ಕೈಗಾರಿಕಾ ಸ್ಥಾಪನೆಗೆ ಜಮೀನು ಇದೆ ಎಂದು ಬಾಯಿ ಮಾತಿನಲ್ಲಿ ಹೇಳಿದ್ದಾರೆ. ಯಾವುದೋ ಬೋರೇ ಮೇಲೆ ಜಾಗ ಕೊಟ್ಟರೆ ಯಾವ ಕೈಗಾರಿಕೋದ್ಯಮಿ ಬಂದು ಕಾರ್ಖಾನೆ ಸ್ಥಾಪನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬಸರಾಳಿನಲ್ಲಿ ಭೂಮಿ ಕೊಡುತ್ತೇವೆ ಎನ್ನುತ್ತಾರೆ. ಅಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಇಂತಹ ವ್ಯಕ್ತಿಗಳು ರಾಜಕೀಯ ಉದ್ದೇಶದಿಂದ ಮಾತುಗಳನ್ನಾಡುತ್ತಿದ್ದಾರೆ. ನಾನು ಅವರ ರೀತಿ ಕೆಳ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಶಾಸಕ ರವಿಕುಮಾರ್ ವಿರುದ್ಧ ಕಿಡಿಕಾರಿದರು.ನಾನು ನನ್ನ ಇಲಾಖೆಯಿಂದಲೇ ಕಾರ್ಖಾನೆಯನ್ನು ತರಲು ಮುಂದಾಗಿದ್ದೇನೆ. ಈ ಬಗ್ಗೆ ಸಿಎಂಗೆ ಪತ್ರವನ್ನೂ ಬರೆದಿದ್ದೇನೆ. ಅಲ್ಲಿ ನನಗೆ ಮೂಲ ಸೌಲಭ್ಯ ಕಲ್ಪಿಸಿಕೊಟ್ಟರೆ ನಾಳೆ ಬೆಳಗ್ಗೆಯೇ ಕೈಗಾರಿಕೆ ಸ್ಥಾಪನೆಗೆ ಶಂಕುಸ್ಥಾಪನೆ ಮಾಡುತ್ತೇನೆ. ನಮ್ಮ ಇಲಾಖೆ ಅಧಿಕಾರಿಗಳು ಸಹ ಕಾರ್ಖಾನೆ ಸ್ಥಾಪನೆಗೆ ಸ್ಥಳ ಪರಿಶೀಲನೆಗೆ ಹೇಳಿದ್ದೇನೆ. ಸೂಕ್ತ ಜಾಗ ಸಿಕ್ಕಿದರೆ ಸಂಬಂಧಪಟ್ಟ ಪ್ರಕ್ರಿಯೆ ನಡೆಸಲು ತಿಳಿಸಿದ್ದೇನೆ ಎಂದರು.
ಮೊದಲು ಕೈಗಾರಿಕೆಗೆ ಬೇಕಾದ ಅಗತ್ಯ ಜಾಗವನ್ನು ಕೊಡಲಿ, ಆ ನಂತರ ಕೈಗಾರಿಕೋದ್ಯಮಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಆದರೆ, ಈ ವಿಷಯದಲ್ಲಿ ಮೊದಲು ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಸಚಿವರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಸಚಿವ ಕುಮಾರಸ್ವಾಮಿ ಕಿವಿಮಾತು ಹೇಳಿದರು.
ಧರಣಿಯಲ್ಲಿ ರೈತ ಪರ ಹೋರಾಟಗಾರ್ತಿ ಸುನಂದ ಜಯರಾಮ್, ಗ್ರಾಪಂ ಮಾಜಿ ಅಧ್ಯಕ್ಷೆ ರಾಧಾ, ಸತ್ಯ ಪ್ರೇಮಕುಮಾರಿ, ಮುಖಂಡರಾದ ಜಿ.ಟಿ. ಪುಟ್ಟಸ್ವಾಮಿ, ಶಿವನಂಜು, ಜಿ.ಎಸ್. ಚಂದ್ರಶೇಖರ್, ವೀರಪ್ಪ, ಜಿ.ಪಿ.ಯೋಗೇಶ್, ಜಿ.ಟಿ.ಚಂದ್ರಶೇಖರ್, ಸತ್ಯ ಪ್ರೇಮ ಮತ್ತಿತರರು ಭಾಗವಹಿಸಿದ್ದರು.