ಸಾರಾಂಶ
ವಿಧಾನಸಭೆ : ನಾಡಪ್ರಭು ಕೆಂಪೇಗೌಡ ನಿರ್ಮಿಸಿರುವ ಬೆಂಗಳೂರನ್ನು ಏಳು ಭಾಗವಾಗಿ ವಿಂಗಡಿಸದೆ ಒಬ್ಬರೇ ಮೇಯರ್ ಒಂದೇ ಪಾಲಿಕೆಯನ್ನು ಮುಂದವರಿಸುವಂತೆ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಆಗ್ರಹಿಸಿದ್ದಾರೆ.
ಸೋಮವಾರ ಸದನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಮಾತನಾಡಿದ ಅವರು, ಪ್ರತಿ 10 ವರ್ಷಕ್ಕೊಮ್ಮೆ ಬಿಬಿಎಂಪಿ ಮೂರು ಮತ್ತು ನಾಲ್ಕು ಭಾಗವಾಗುತ್ತಿದೆ. ಮೊದಲನೆದಾಗಿ 95 ವಾರ್ಡ್ ನಂತರ 198 ವಾರ್ಡುಗಳಾಗಿ ಮಾಡಲಾಯಿತು. ನಂತರ ಬಿಜೆಪಿ ಸರ್ಕಾರ ಬಂದಾಗ 243 ವಾರ್ಡುಗಳಾಗಿ ಮಾಡಲಾಯಿತು. ಪ್ರತಿ ಸರ್ಕಾರ ಬಂದಾಗಲೂ ಕೂಡ ಬೆಂಗಳೂರನ್ನು ವಿಭಜನೆ ಮಾಡುತ್ತಿರುವುದು ಬೆಂಗಳೂರಿನ ಅಭಿವೃದ್ಧಿಗೆ ತೊಂದರೆವಾಗುತ್ತದೆ ಎಂದು ಹೇಳಿದರು.
ಸಂವಿಧಾನ 1974ರ ತಿದ್ದುಪಡಿಯ ಜಾರಿಗೆಯಲ್ಲಿ ಈ ದೇಶದಲ್ಲಿ ಮೂರು ಪ್ರಕಾರದ ಆಡಳಿತ ಇದೆ. ಒಂದು ಕೇಂದ್ರ ಸರ್ಕಾರ, ಮತ್ತೊಂದು ರಾಜ್ಯ ಸರ್ಕಾರ ಮತ್ತು ಇನ್ನೊಂದು ಸ್ಥಳೀಯ ಸಂಸ್ಥೆಗಳು ಆಡಳಿತ ಮಾಡಬೇಕು. 1974ರ ಅಧಿನಿಯಮವು ಇದನ್ನೇ ಹೇಳುತ್ತದೆ. 2024ರಲ್ಲಿ ಗ್ರೇಟರ್ ಬೆಂಗಳೂರು ಮಾಡಲಾಗಿದೆ. ಈಗ ಸ್ಥಳೀಯ ಸಂಸ್ಥೆ ಆಡಳಿತ ತೆಗೆದು ಮುಖ್ಯಮಂತ್ರಿ ಎಲ್ಲರೂ ಸೇರಿ ಅವರ ಅಧಿಕಾರವನ್ನು ಕಸಿದಿದ್ದೇವೆ. ಏಳು ನಗರ ಪಾಲಿಕೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಒಂದೆಡೆ ಕೆಲಸವಾಗುತ್ತದೆ, ಇನ್ನೊಂದೆಡೆ ಕೆಲಸವಾಗುವುದಿಲ್ಲ. ಆದ್ದರಿಂದ ಅಭಿವೃದ್ಧಿ ದೃಷ್ಟಿಯಿಂದ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಮತ್ತು ಏಳು ನಗರ ಪಾಲಿಕೆ ಮಾಡಿ. ಆದರೆ ಒಬ್ಬರೇ ಮೇಯರ್ ಆಗಿರಬೇಕು, ಒಂದೇ ಆಡಳಿತದಲ್ಲಿರಬೇಕು ಮತ್ತು ಒಂದೇ ಬಜೆಟ್ ಮಂಡನೆ ಮಾಡಬೇಕು ಎಂದರು.