ಮಲೇರಿಯಾ ಮುಕ್ತ ಜಿಲ್ಲೆಯಾಗಿ ಘೋಷಣೆಯೊಂದೇ ಬಾಕಿ

| Published : May 07 2025, 12:46 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಮಲೇರಿಯಾ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಲೇರಿಯಾ ಪ್ರಕರಣಗಳು ಇಲ್ಲದ ಕಾರಣ ಚಾಮರಾಜನಗರ ಮಲೇರಿಯಾ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಹೇಳಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮಲೇರಿಯಾ ಸೋಂಕು ಅನಾ ಫಿಲೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಸೊಳ್ಳೆಗಳು ಕೆರೆ, ಕುಂಟೆ, ಕಾಲುವೆ ಹಾಗೂ ನಿಂತ ನೀರಿನಲ್ಲಿ ಮೊಟ್ಟೆ ಇಡುತ್ತವೆ ಹಾಗೂ ಸೋಂಕು ಹರಡುತ್ತದೆ. ಬ್ಯಾಂಬೂಸಿಯ ಮತ್ತು ಗಪ್ಪಿ ಮೀನುಗಳನ್ನು ಎಲ್ಲ ನೀರಿನ ತಾಣಗಳಿಗೆ ಬಿಡಲಾಗಿರುವ ಕಾರಣ ಸೊಳ್ಳೆಗಳ ಸಂತತಿ ನಿಯಂತ್ರಣವಾಗಿದೆ ಎಂದರು.

ಮಲೇರಿಯ ಪುರಾತನ ಕಾಯಿಲೆಯಾಗಿದ್ದು, ಈ ಹಿಂದೆ ಹೆಚ್ಚಿನ ಜನರು ತುತ್ತಾಗುತ್ತಿದ್ದರು. ಆದರೀಗ ಕಾಯಿಲೆಯಿಂದ ಬಳಲುವರ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಿಂದ ಮಲೇರಿಯಾ ಸೋಂಕು ಕಾಣಿಸಿಕೊಂಡಿಲ್ಲ, ಚಾಮರಾಜನಗರ ಜಿಲ್ಲಾದ್ಯಂತ ಕಡಿಮೆಯಾಗಿದೆ ಹಾಗೂ ಮಲೇರಿಯಾ ಮುಕ್ತ ಜಿಲ್ಲೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದರು.

ಜಾಥಾದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಚ್.ಅಲಿಂ ಪಾಶ್‌, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ರಾಜೇಶ್ ಕುಮಾರ್, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಜಾಥಾದಲ್ಲಿ ಪಟ್ಟಣದ ಗೌತಮ್‌ ನರ್ಸಿಂಗ್ ಶಾಲೆಯ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.