ಹೋಟೆಲ್ ಹಾಗೂ ಆಹಾರ ಉತ್ಪಾದನಾ ಘಟಕಗಳಲ್ಲಿ ಪದೇ ಪದೆ ಬಳಸಿದ ಕರಿದ ಎಣ್ಣೆಯನ್ನು (ಯುಸಿಒ) ಬಯೋಡೀಸೆಲ್ ಉತ್ಪಾದನೆಗೆ ಮಾತ್ರ ಪೂರೈಸುವಂತೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಸಹಕರಿಸಬೇಕೆಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ ಸುಧೀಂದ್ರ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೋಟೆಲ್ ಹಾಗೂ ಆಹಾರ ಉತ್ಪಾದನಾ ಘಟಕಗಳಲ್ಲಿ ಪದೇ ಪದೆ ಬಳಸಿದ ಕರಿದ ಎಣ್ಣೆಯನ್ನು (ಯುಸಿಒ) ಬಯೋಡೀಸೆಲ್ ಉತ್ಪಾದನೆಗೆ ಮಾತ್ರ ಪೂರೈಸುವಂತೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಸಹಕರಿಸಬೇಕೆಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ ಸುಧೀಂದ್ರ ಮನವಿ ಮಾಡಿದರು.ಬುಧವಾರ ಈ ಕುರಿತು ವಿಧಾನಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಯು.ಟಿ.ಖಾದರ್ ಅವರು ಆಯೋಜಿಸಿದ್ದ ಸಭೆಯಲ್ಲಿ ಭೇಟಿಯಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಧೀಂದ್ರ, ನಗರ ಹಾಗೂ ಟೈರ್-1 ಪಟ್ಟಣಗಳ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಮತ್ತು ಸಣ್ಣ ಹೋಟೆಲ್‌ಗಳಿಗೆ ಮರು ಪೂರೈಕೆ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಬಯೋಡೀಸಲ್ ಉತ್ಪಾದನಾ ಕೈಗಾರಿಕೆಗಳಿಗೆ ಮಾತ್ರ ಈ ಕರಿದ ಎಣ್ಣೆಯನ್ನು ಕಡ್ಡಾಯವಾಗಿ ಪೂರೈಸುವಂತೆ ಕಟ್ಟುನಿಟ್ಟಿನ ಕಾನೂನು ರೂಪಿಸುವ ಅಗತ್ಯವಿದೆ ಎಂದರು.ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಈ ಪ್ರಸ್ತಾವನೆಗೆ ಸಚಿವ ಖಾದರ್ ಸಕಾರಾತ್ಮಕವಾಗಿ ಸ್ಪಂದಿಸಿದರು. ಕರಿದ ಎಣ್ಣೆ ಯಾವುದೇ ಕಾರಣಕ್ಕೂ ಮತ್ತೆ ಆಹಾರ ತಯಾರಿಕೆಯಲ್ಲಿ ಬಳಕೆಯಾಗದಂತೆ ತಡೆಯಲು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಸೂಕ್ತ ಕಾನೂನು ಹಾಗೂ ನೀತಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಹಾರ ಸುರಕ್ಷತೆ ಆಯುಕ್ತ ಗುರುನಾಥ್ ಹೆಗಡೆ ಸೇರಿ ಇತರರಿದ್ದರು.