ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹೋಬಳಿ ಸರ್ಕಾರಿ ನೌಕರರ ಮತ್ತು ಬಳಕೆದಾರರ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.ಶಿಕ್ಷಣ ಇಲಾಖೆ ನಿವೃತ್ತ ವಿಷಯ ಪರಿವೀಕ್ಷಕ ಎಸ್.ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡಿ ಸಮಾಜವನ್ನು ತಿದ್ದುವ ಒಂದು ಪ್ರಭಾವಿ ವಲಯವನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಎಂದರು.
ಮಾಜಿ ಪ್ರಧಾನಿ ಅಬ್ದುಲ್ ಕಲಾಂ ಹೇಳುವಂತೆ ದೇಶದ ಭವಿಷ್ಯವನ್ನು ನಿರ್ಮಿಸುವ ಬುದ್ಧಿ ಶಕ್ತಿ ಇರುವ ವ್ಯಕ್ತಿಗಳು ತರಗತಿ ಕೊನೆ ಸಾಲಿನ ವಿದ್ಯಾರ್ಥಿಗಳು. ಆದರೆ, ನಮ್ಮ ಗಮನವೆಲ್ಲ ಮುಂದಿನ ಸಾಲಿನ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಮತ್ತೆ ಕೆಲವೊಮ್ಮೆ ತರಗತಿ ಬಿಟ್ಟು ಹೊರ ಪ್ರಪಂಚದಲ್ಲಿ ಪ್ರತಿಭಾವಂತರಿದ್ದಾರೆ ನಾವು ಹುಡುಕಬೇಕು ಎಂದರು.ಇದೇ ವೇಳೆ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಬೋರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕೆ.ಪುಟ್ಟರಾಜು ವಾರ್ಷಿಕ ವರದಿ ಮಂಡಿಸಿದರು.
ವೇದಿಕೆಯಲ್ಲಿ ನಿವೃತ್ತ ವಿಷಯ ಪರೀಕ್ಷಕ ಸಿ.ಎಲ್.ನಂದರಾಜು, ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಪಿ.ಚಂದ್ರೇಗೌಡ, ಡಿ.ರಾಮು, ಭೈರವಯ್ಯ, ಕೆ.ಪುಟ್ಟರಾಜು, ಜಿ.ಎಸ್.ಕೃಷ್ಣ, ಸಚಿನ್ ಸೇರಿದಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸುಂದ್ರಪ್ಪ ಮತ್ತು ಸಂಘದ ನಿರ್ದೇಶಕರು ಸೇರಿದಂತೆ ಇತರರು ಇದ್ದರು.ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಾಣ ಸರಿಯಲ್ಲ: ಶಿವಲಿಂಗಯ್ಯ
ಮಂಡ್ಯ:ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಿಸುವುದು ಸರಿಯಲ್ಲ ಎಂದು ವಾಲಿಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಸಂಕೀರ್ಣ ಪಕ್ಕ ಇರುವ ಜಾಗ ಕ್ರೀಡಾ ಚಟುವಟಿಕೆಗಳಿಗಾಗಿ ಮೀಸಲಾಗಿದೆ. ಇದನ್ನು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಈ ಜಾಗದಲ್ಲಿ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲದಿಂದ ವಿವಿಧ ಕ್ರೀಡೆಗಳಲ್ಲಿ ಅಭ್ಯಾಸ ಮಾಡಲಾಗುತ್ತಿತ್ತು. ಈ ಜಾಗವನ್ನು ಕ್ರೀಡಾ ಇಲಾಖೆಗಿಂತ ಹೆಚ್ಚಾಗಿ ಕ್ರೀಡಾಪಟುಗಳಿಗೋಸ್ಕರ ಕ್ರೀಡಾಪಟುಗಳು, ಕ್ರೀಡಾ ಪ್ರೇಕ್ಷಕರು, ಕ್ರೀಡಾ ಸಂಸ್ಥೆಗಳು ಹೋರಾಟ ಮಾಡಿಕೊಂಡು ಉಳಿಸಿವೆ. ಆದರೆ, ಜಿಲ್ಲಾಡಳಿತ ಈ ಜಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.ಸದರಿ ಜಾಗವನ್ನು ಕ್ರೀಡಾ ಚಟುವಟಿಕೆಗಾಗಿಯೇ ಮೀಸಲಿಟ್ಟು, ಬೇರೊಂದು ಬದಲಿ ಜಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು. ಈ ಸ್ಥಳದಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್ ನಂತರದ ದಿನಗಳಿಂದ ಇದು ಸ್ಥಗಿತಗೊಂಡಿದೆ. ಇರುವ 37 ಗುಂಟೆ ಜಮೀನಿನಲ್ಲಿ ಅರ್ಧ ಭಾಗವನ್ನು ಉಳಿಸಿಕೊಂಡು ನಿಮಗೂ ಅದರಲ್ಲಿ ಸ್ವಲ್ಪ ಭಾಗ ಕೊಡುವುದಾಗಿ ತಿಳಿಸಿದ್ದಾರೆ. ಆದರೆ, ಇದರಲ್ಲಿ ಪಂದ್ಯಾವಳಿ ನಡೆಸಲು ಸಾಧ್ಯವಾಗದು ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಸರ್ಕಾರ ಮತ್ತು ಚುನಾಯಿತ ಪ್ರತಿನಿಗಳಿಗೆ ಮನವಿ ಮಾಡಿದ ಕಾರಣ ವಾಲಿಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ 68 ಲಕ್ಷ ರು. ಯೋಜನೆ ತಯಾರಿಸಿ ಈ ಪೈಕಿ 28 ಲಕ್ಷ ರು.ಗಳನ್ನು ಬಿಡುಗಡೆ ಮಾಡಿತ್ತು. ಅಂದಿನ ಶಾಸಕರು ಗುದ್ದಲಿ ಪೂಜೆಯನ್ನೂ ಮಾಡಿದ್ದರು. ಆದರೆ, ಕೆಲಸ ಪ್ರಾರಂಭವಾಗಿರಲಿಲ್ಲ. ಇನ್ನಾದರೂ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ. ಬೋರಯ್ಯ, ಸತ್ಯ, ಜಿ.ಕುಬೇರ ನಾರಾಯಣ ಇದ್ದರು.