ಪ್ರತಿವರ್ಷ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವದ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡುವ ಪ್ರಶಸ್ತಿಗೆ ಶಿಫಾರಸ್ಸು ಇಲ್ಲದ ಅರ್ಹ ಹಾಗೂ ನಿಜವಾದ ಸಾಧಕರು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ.
ಮಂಡ್ಯ:
ಪ್ರತಿ ವರ್ಷ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಜಿಲ್ಲೆಯಲ್ಲಿ ಅರ್ಹರಿಗಿಂತ ಮಿಗಿಲಾಗಿ ಬಲಾಢ್ಯರು ಹಾಗೂ ಲಾಬಿ ಮಾಡುವ ಬಹುತೇಕ ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಚಂದ್ರು ಮಂಡ್ಯ ಟೀಕಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಆಯ್ಕೆ ಸಮಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಆಯ್ಕೆ ಸಮಿತಿ ಸದಸ್ಯರು ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಜೊತೆಗೆ ರಾಜಕಾರಣಿಗಳ ಹಾಗೂ ಉನ್ನತ ಅಧಿಕಾರಿಗಳ ಶಿಫಾರಸ್ಸಿಗೆ ಮಣೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
ಪ್ರತಿವರ್ಷ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವದ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡುವ ಪ್ರಶಸ್ತಿಗೆ ಶಿಫಾರಸ್ಸು ಇಲ್ಲದ ಅರ್ಹ ಹಾಗೂ ನಿಜವಾದ ಸಾಧಕರು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದ್ದಾರೆ.ಪ್ರಶಸ್ತಿ ನೀಡುವ ಕ್ಷೇತ್ರಗಳ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ವೈಜ್ಞಾನಿಕ ಮಾನದಂಡ ಅಥವಾ ನಿಯಮಗಳ ಪಾಲನೆ ಮಾಡಿಲ್ಲ. ಕ್ಷೇತ್ರವಾರು ಪ್ರಶಸ್ತಿ ಆಯ್ಕೆಯಲ್ಲಿ ತಾರತಮ್ಯ ಎಸಗಲಾಗಿದೆ. ಸಾಹಿತ್ಯ ಕ್ಷೇತ್ರದ ಜೊತೆಗೆ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಪ್ರತಿಭಾ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯ ಕಣ್ಮರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿಯ ಆಯ್ಕೆಯಿಂದ ಸರ್ಕಾರಿ ನೌಕರಿಯಲ್ಲಿ ಇರುವವರನ್ನು ಹೊರಗಿಡಲಾಗಿದೆ. ಬೇರೆ ಯಾವ ಜಿಲ್ಲೆಯಲ್ಲೂ ಸಹ ಈ ನಿಯಮ ಇಲ್ಲ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಿದ ಎಲ್ಲರನ್ನು ಪೊಲೀಸ್ ವರದಿ ತರಿಸಿಕೊಂಡು ಆರೋಪಿಗಳಂತೆ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಚಂದ್ರು ಮಂಡ್ಯ ತಿಳಿಸಿದ್ದಾರೆ.ಇಬ್ಬರು ಸಾಧಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮೇಲುಕೋಟೆ: ಮೇಲುಕೋಟೆ ಹೋಬಳಿಯ ಇಬ್ಬರು ಸಾಧಕರಿಗೆ ಈ ಬಾರಿ ಮಂಡ್ಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಚೆಲುವನಾರಾಯಣಸ್ವಾಮಿ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರು, ನಿವೃತ್ತ ಮುಖ್ಯ ಶಿಕ್ಷಕ ಡಾ.ವಿ. ವೆಂಕಟರಾಮೇಗೌಡರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾಗಿರುವ ವೆಂಕಟರಾಮೇಗೌಡರು ತಾಲೂಕು ಕಸಾಪ ಅಧ್ಯಕ್ಷರು, ಕಾರ್ಯದರ್ಶಿಯಾಗಿ ಹಲವಾರು ಸಾಹಿತ್ಯ ಪರ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ತೊಡಗಿಸಿಕೊಂಡಿದ್ದಾರೆ. ಇವರ ಸೇವೆ ಪರಿಗಣಿಸಿ ಜಿಲ್ಲಾಡಳಿತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಸಮೀಪದ ಕದಲಗೆರೆ ಗ್ರಾಮದ ಜಾನಪದ ಸಾಹಿತಿ ಕೆ.ಎಂ.ಸುದರ್ಶನಗೌಡರಿಗೂ ಸಹ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಚೆಲುವನಾರಾಯಣಸ್ವಾಮಿ ಮತ್ತು ವಿವಿಧ ಗ್ರಾಮ ದೇವತೆಗಳ ಬಗ್ಗೆ ಜಾನಪದ ಗೀತೆಗಳನ್ನು ಸಂಗ್ರಹಿಸಿ ಧ್ವನಿಮುದ್ರಿಕೆಗಳು ಪುಸ್ತಕಗಳನ್ನು ಹೊರ ತಂದು ಸಾಹಿತ್ಯ ಕೃಷಿ ಮಾಡಿದ್ದರು.