ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಗಳಲ್ಲಿ ಬೆಲೆ ಏರಿಕೆಯ ಗ್ಯಾರಂಟಿಗಳು ಮಾತ್ರ ಜನರಿಗೆ ತಲುಪುತ್ತಿದೆ. ಅಕ್ಕಿ, ಗೋಧಿ, ಬೇಳೆ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಆರೋಪಿಸಿದರು.ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಅನುಕೂಲತೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ದಿನಬಳಕೆ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಹಿಳೆಯರಿಗೆ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಹಣವನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹಾನುಭಾವರಿಗೆ ಜನರಿಗೆ ಒಳ್ಳೆಯ ಕೆಲಸ ಮಾಡುವ ಮನಸ್ಸಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ಸಹ ನೋಡದೇ ರೈತರ ಕ್ಷೇಮಾಭಿವೃದ್ಧಿ ಕಾಣದೇ ಹಣವನ್ನು ಕೊಡದೇ ಅನ್ಯಾಯ ಮಾಡಿದೆ ಎಂದು ಅವರು ದೂರಿದರು.ಕಳೆದ 10 ವರ್ಷಗಳಲ್ಲಿ ಕೇವಲ ಬೆಲೆ ಏರಿಕೆ ಹಾಗೂ ಅತಂತ್ರ ಪರಿಸ್ಥಿತಿ ತಂದಿರುವುದೇ ಮೋದಿ ಗ್ಯಾರಂಟಿ. ಈ 10 ವರ್ಷದ ಅವಧಿಯಲ್ಲಿ ಮೋದಿಯವರು ಮಾಡಿದ ಒಂದು ಅಭಿವೃದ್ಧಿ ವಿಚಾರ ತಿಳಿಸಿ. ಕೇವಲ ರಾಮ ಮಂದಿರ ಕಟ್ಟುವುದೇ ಸಾಧನೆಯೇ, ಕಳೆದ ಬಾರಿ ಪುಲ್ವಾಮಾ ದಾಳಿ ವಿಚಾರ ಇಟ್ಕೊಂಡು ಗೆದ್ದರು. ಈ ಬಾರಿ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ. ಈ ರೀತಿ ಭಾವನಾತ್ಮಕ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದು ಬಿಜೆಪಿ ಮಾತ್ರ ಎಂದು ಅವರು ಕುಟುಕಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕಾರಣ ಇದರ ಬಿಸಿ ರಾಜ್ಯದ ಗೃಹಿಣಿಯರಿಗೆ ತಟ್ಟಿಲ್ಲ. ಇದೇ ರೀತಿಯ ಗ್ಯಾರಂಟಿ ಯೋಜನೆಗಳನ್ನು ಜನತೆ ಕೇಂದ್ರದಲ್ಲಿಯೂ ಬರಬೇಕೆಂದು ನಿರ್ಧರಿಸಿದ್ದು, ಈ ಕಾರಣದಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಹಿಳಾ ಮತದಾರರು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.ಕರ್ನಾಟಕದಲ್ಲಿ ಗ್ಯಾರಂಟಿಯಿಂದ ಬೆಲೆ ಏರಿಕೆ ಸಮಸ್ಯೆಯಾಗುತ್ತಿಲ್ಲ. ಉಚಿತ ಬಸ್, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಮೊದಲಾದವುಗಳಿಂದ ಜನತೆಯ ಹೊರೆ ಕಡಿಮೆಯಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರ ಸಹ ನರೇಗಾ ಹಣ ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಅವರು ದೂರಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಾಜಿ ಉಪ ಮೇಯರ್ ಪುಷ್ಪವಲ್ಲಿ ಇದ್ದರು.ಚಾಮರಾಜನಗರ ಕ್ಷೇತ್ರದ ಆಕಾಂಕ್ಷಿ
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದೇನೆ. ವಿಧಾನಸಭಾ ಚುನಾವಣೆ ವೇಳೆಯೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಹಾಗಂತ ನಾವೇನು ಪಕ್ಷದ ವಿರುದ್ಧ ಹೋಗಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವೊಂದೇ ನಮಗೆ ಮಾನದಂಡ. ಚಾಮರಾಜನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣವಿದೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದು ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.