ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೆಲವರಿಗೆ ಹುಟ್ಟಿನಿಂದ ಅಂಗಾಂಗ ನ್ಯೂನತೆಗಳಿದ್ದರೆ, ಕೆಲವರಿಗೆ ಆಕಸ್ಮಿಕ ಘಟನೆಗಳಿಂದ ನ್ಯೂನತೆಗಳಾಗುತ್ತವೆ. ಯಾರಿಗೆ ಯಾವ ಅಂಗ ಇರುವುದಿಲ್ಲವೋ ಆ ಅಂಗದ ಮಹತ್ವ ಅವರಿಗಷ್ಟೇ ಗೊತ್ತಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಡಾ.ನಿರ್ಮಲಾನಂದನಾಥ ಶ್ರೀಗಳ ದೀಕ್ಷ ದಿನೋತ್ಸವ ಪ್ರಯುಕ್ತ ಕರ್ನಾಟಕ ಮಾರವಾಡಿ ಯೂತ್ ಫೆಡರೇಷನ್ ಸಹಭಾಗಿತ್ವದಲ್ಲಿ 10 ದಿನಗಳ ಕಾಲ ನಡೆದ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಉಳ್ಳವರು ಸೇವಾ ಮನೋಭಾವದಿಂದ ಕಲ್ಯಾಣ ಕಾರ್ಯಗಳನ್ನು ನಡೆಸಿದರೆ ಅದೆಷ್ಟೋ ಜನರ ಬದುಕು ಹಸನಾಗುವ ಜೊತೆಗೆ, ಸೇವಾ ಕೆಲಸ ಮಾಡಿದವರಿಗೂ ಪುಣ್ಯ ಲಭಿಸುತ್ತದೆ. ರೋಬೋಟಿಕ್ ಯುಗದಲ್ಲಿ ನಾವು ಏನೆಂದುಕೊಳ್ಳುತ್ತವೆ, ಆ ಎಲ್ಲಾ ಅನ್ವೇಷಣೆಗಳಾಗಿ ಇಂದು ಕೆಲಸ ನಿರ್ವಹಿಸುತ್ತಿವೆ ಎಂದರು.ರೋಬೋಟಿಕ್ ಮಾದರಿಯಲ್ಲಿಯೇ ನಮ್ಮ ದೇಹದ ಪ್ರಕ್ರಿಯೆಗಳಿಗೆ ತಕ್ಕಂತೆ ಹೊಂದಾಣಿಕೆಯಾಗುವಂತಹ ತಂತ್ರಜ್ಞಾನದ ಕೃತಕ ಅಂಗಗಳು ಮುಂದಿನ ದಿನಗಳಲ್ಲಿ ಅನ್ವೇಷಣೆಗಳಾಗಿ ಅಂಗ ನ್ಯೂನತೆಯವರು ಕೂಡ ಸಾಮಾನ್ಯರಂತೆ ಜೀವನ ನಡೆಸುವಂತಹ ದಿನಗಳು ಕೆಲವೇ ವರ್ಷಗಳಲ್ಲಿ ಬರಲಿವೆ. ಪ್ರತಿಯೊಬ್ಬರೂ ತಮ್ಮ ಹಿರಿಯರ ಹೆಸರಿನಲ್ಲಿ ಸಮಾಜಮುಖಿಯಾದ ಸೇವೆಗಳನ್ನು ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಜನಪರವಾದ ಸೇವೆ ಮಾಡುವವರಿಗೆ ಶ್ರೀಮಠ ಹಾಗೂ ನಮ್ಮ ಸಂಸ್ಥೆಗಳು ಸದಾ ಜೊತೆಯಲ್ಲಿರುತ್ತವೆ ಎಂದು ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆರೋಗ್ಯ ಕ್ಷೇತ್ರ ಇಂದು ವಾಣಿಜ್ಯ ಕೇಂದ್ರವಾಗಿದೆ. ಬಂಡವಾಳ ಹೂಡಿ ಲಾಭ ಗಳಿಸುವ ಯೋಚನೆಯಾಗುತ್ತಿದೆ. ಆರೋಗ್ಯ ಕ್ಷೇತ್ರ ಸೇವಾ ಕ್ಷೇತ್ರವಾಗಿಯೇ ಉಳಿಯದೆ ಬ್ಯುಸಿನೆಸ್ ಮಾದರಿಯಲ್ಲಿ ನಡೆದರೆ ಅದು ಸೇವಾ ಕ್ಷೇತ್ರಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದರು.ಬಡವರಿಗೆ ಅನುಕೂಲವಾಗಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಜನರ ಬೇಡಿಕೆಗೆ ತಕ್ಕಂತೆ ಎಲ್ಲವನ್ನೂ ಪೂರೈಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಸರ್ಕಾರದ ಜೊತೆಗೆ ಸಮಾಜಕ್ಕೆ ಸೇವೆ ಮಾಡುವವರು, ಸಂಘ- ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಸಕ್ಕರೆ ಕಾಯಿಲೆಯಿಂದಲೇ ಹೆಚ್ಚು ಜನರು ಅಂಗ ನ್ಯೂನತೆಗಳಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಿಕೊಳ್ಳಬೇಕು. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಇರುವಂತಹ ರೋಗಿಗಳಿಗೆ ಮನೆ ಮನೆಗೆ ಹೋಗಿ ತಪಾಸಣೆ ನಡೆಸಿ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಗೆ ಸರ್ಕಾರದ ವತಿಯಿಂದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ:
ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ವೈದ್ಯರ ಲಿಖಿತ ಮಾಹಿತಿಯ ನಂತರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿರ್ವಾಯತೆಗೆ ಇದೀಗ ತಿದ್ದುಪಡಿ ತರಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಆದಿಚುಂಚನಗಿರಿ ಆಸ್ಪತ್ರೆಯಂತಹ ಕೆಲ ಪ್ರತಿಷ್ಠಿತ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿಯೂ ಕೂಡ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.ಶಿಬಿರದಲ್ಲಿ ಒಟ್ಟು 478 ಜನರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 432 ಜನರಿಗೆ ಕೃತಕ ಕೈ ಮತ್ತು ಕಾಲುಗಳನ್ನು ಜೋಡಣೆ ಮಾಡಲಾಯಿತು. ಸಮಾರಂಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ ದೇವರಾಜು, ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಶ್ರೀಧರ್, ಮಾಜಿ ಉಪಕುಲಪತಿ ಡಾ.ಎಂ.ಎ.ಶೇಖರ್, ಆದಿಚುಂಚನಗಿರಿ ವಿವಿ ರಿಜಿಸ್ಟಾರ್ ಸಿ.ಕೆ.ಸುಬ್ಬರಾಯ್, ಕರ್ನಾಟಕ ಮಾರವಾಡಿ ಯೂತ್ ಪೆಢರೇಷನ್ ಮುಖ್ಯಸ್ಥ ಅಶೋಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮ್, ಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಶಿವಕುಮಾರ್ ಸೇರಿ ಹಲವರು ಇದ್ದರು.