ಇತಿಹಾಸ ತಿಳಿದವರು ಮಾತ್ರ ಇತಿಹಾಸ ಸೃಷ್ಠಿಸಲು ಸಾಧ್ಯ

| Published : Jan 27 2025, 12:48 AM IST

ಸಾರಾಂಶ

ಸಾಣೇಹಳ್ಳಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಾಣೇಹಳ್ಳಿ ಸ್ವಾಮೀಜಿ ಅಭಿಮತಕನ್ನಡಪ್ರಭ ವಾರ್ತೆ ಹೊಸದುರ್ಗ

ಇತಿಹಾಸ ಪ್ರಜ್ಞೆ ಇದ್ದವರು ಮಾತ್ರ ಇತಿಹಾಸವನ್ನು ಸೃಷ್ಠಿಸಲು ಸಾಧ್ಯ. ಭೂತಕಾಲದ ಅರಿವಿದ್ದಾಗ ವರ್ತಮಾನ ಮತ್ತು ಭವಿಷ್ಯ ರೂಪಿಸಿಕೊಳ್ಳಲಿಕ್ಕೆ ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶಾಲಾ ಆವರಣದಲ್ಲಿ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗುರುಪಾದೇಶ್ವರ ಪ್ರೌಢಶಾಲೆ ಆಶ್ರಯದಲ್ಲಿ ನಡೆದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಸಂದಿವೆ. ಆದರೆ ಸಂವಿಧಾನಾತ್ಮಕ ಆಡಳಿತ ನಮ್ಮಲ್ಲಿ ಇನ್ನೂ ಬರದೇ ಇರುವುದು ತುಂಬಾ ವಿಷಾದದ ಸಂಗತಿ. ಸ್ವಾತಂತ್ರ್ಯ, ಸಮಾನತೆ, ಸೌಹಾರ್ಧತೆ ಈ ನಾಡಿನಲ್ಲಿ ನೆಲೆಗೊಳ್ಳಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಇನ್ನೂ ಈ ದೇಶದಲ್ಲಿ ನಿಜವಾದ ಸ್ವಾತಂತ್ರ್ಯ ಸಮಾನತೆ, ಸೌಹಾರ್ಧತೆ ಇಲ್ಲ. ಅನೇಕ ಸಮಸ್ಯೆಗಳ ಸುಳಿಯಲ್ಲಿ ಭಾರತ ನಲುಗುತ್ತಿದೆ. ಮತ್ತೆ ಇಂತಹ ಭಾರತ ಗಾಂಧೀ, ಅಂಬೇಡ್ಕರ್ ಬಯಸಿದ ರೀತಿಯಲ್ಲಿ ಇರಬೇಕಾದರೆ ಆಡಳಿತದಲ್ಲಿ ಸುಧಾರಣೆಯಾಗುವಂಥ ಅಗತ್ಯ ಇದೆ. ಯಾರು ಆಡಳಿತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೋ ಆ ವ್ಯಕ್ತಿಗಳಿಗೆ ಸಂವಿಧಾನದ ಬಗ್ಗೆ ಸಂಪೂರ್ಣ ಪರಿಚಯ ಇರಬೇಕು. ಸಂವಿಧಾನದ ಸಂಪೂರ್ಣ ಪರಿಚಯ ಇಲ್ಲದೇ ಇದ್ದಾಗ ಅವರು ಆಡಿದ್ದೇ ಆಟ ಊಡಿದ್ದೇ ಲಗ್ಗೆ ಎನ್ನುವಂತಾಗುತ್ತದೆ ಎಂದರು.

ಜನರಲ್ಲಿ ನೈತಿಕ ತಳಹದಿ, ಧಾರ್ಮಿಕ ನಂಬಿಕೆ ಮತ್ತು ಕಾಯಕ ಶ್ರದ್ಧೆ ಇದ್ದಾಗ ಮಾತ್ರ ಒಂದು ದೇಶ ನಿಜವಾದ ಅಭಿವೃದ್ಧಿ ಹೊಂದಲು ಸಾಧ್ಯ. ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣಗಳನ್ನು ನಮ್ಮನ್ನು ಬಿಟ್ಟು ಹೊರಗೆ ಹುಡುಕಬೇಕಾಗಿಲ್ಲ. ಮೊದಲು ನಮ್ಮ ನಮ್ಮ ಅಂತರಂಗವನ್ನು ಶ್ರದ್ಧೆ, ಸತ್ಯ, ನಂಬಿಕೆ, ಪರಸ್ಪರ ಪ್ರೀತಿ, ಸೌಹಾರ್ಧಗಳಿಂದ ತುಂಬಿಕೊಳ್ಳಬೇಕು. ಆಗ ತನ್ನಿಂದ ತಾನೆ ಬಹಿರಂಗದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ತಪ್ಪುಗಳನ್ನು ನಾವೇ ಅರಿತು ಸರಿಪಡಿಸಿಕೊಳ್ಳಬೇಕು. ವ್ಯಕ್ತಿ ಸರಿಯಾದರೆ ದೇಶ ತನ್ನಿಂದ ತಾನೇ ಸರಿಹೋಗುವುದು ಎಂದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅಸಂಖ್ಯಾತರ ತ್ಯಾಗ ಬಲಿದಾನವಿದೆ. ಆ ಎಲ್ಲ ಹಿರಿಯರು ಯಾವ ಕನಸು ಹೊತ್ತು ದೇಶಕ್ಕಾಗಿ ತನು-ಮನ-ಧನವನ್ನು ತ್ಯಾಗ ಮಾಡಿದರೋ ಆ ಕನಸು ಇನ್ನೂ ನನಸಾಗಿಲ್ಲ. ಇಂಥ ರಾಷ್ಟ್ರೀಯ ಹಬ್ಬಗಳಂದು ದೇಶಕ್ಕಾಗಿ ತ್ಯಾಗ ಮಾಡಿದವರನ್ನು ನೆನಪು ಮಾಡಿಕೊಂಡು ಅವರಂತೆ ನಾವು ದೇಶ ಪ್ರೇಮಿಗಳಾಗಬೇಕು ಎನ್ನುವ ದೃಢಸಂಕಲ್ಪ ಮಾಡಬೇಕಾಗಿತ್ತು. ಆದರೆ ಇಂದು ಕೇವಲ ಆದರ್ಶಗಳನ್ನು ಹೇಳುವ ದಿನವಾಗಿದೆ. ಆದರ್ಶಗಳನ್ನು ಹೇಳುವ ದಿನವಾಗದೆ ಆಚರಣೆಗೆ ತರುವ ಸಂಕಲ್ಪದ ದಿನವಾಗಬೇಕು ಎಂದರು.

ಸಂವಿಧಾನದ ಆಶಯ ಪ್ರಾಮಾಣಿಕರು, ಜನಪರವಾದ ಕಾಳಜಿ ಹೊಂದಿರುವವರು ಸಮಗ್ರ ಅಭ್ಯುದಯದ ಬಗ್ಗೆ ಕಾಳಜಿ ಹೊಂದಿದವರು ಜನಪ್ರತಿನಿಧಿಗಳಾಗಬೇಕಾಗಿತ್ತು. ಇಂದು ಬಂಡವಾಳಶಾಹಿಗಳು ಆಡಳಿತ ಸೂತ್ರವನ್ನು ಹಿಡಿಯಬಹುದು ಎನ್ನುವಂಥ ವಾತಾವರಣ ನಿರ್ಮಾಣವಾಗುತ್ತಿದೆ ಇದಕ್ಕೆ ಕಾರಣ ಮತದಾರ. ಮತದಾರ ಸರಿಯಾದರೆ ನೇತಾರ ಸರಿಯಾಗುವನು. ಮತದಾರ ದಾರಿಬಿಟ್ಟರೆ ನೇತಾರ ದಾರಿಬಿಡುವನು. ಪ್ರಜಾಪ್ರಭುತ್ವ ಯಶಸ್ವಿಯಾಗುವಂಥದ್ದು ಪ್ರಬುದ್ಧ ಮತದಾರರನ್ನು ಅವಲಂಬಿಸಿದೆ ಎಂದು ಹೇಳಿದರು.

ಸ್ಥಳೀಯ ಸಲಹಾ ಸಮಿತಿಯ ಸದಸ್ಯ ಎಸ್.ಆರ್.ಚಂದ್ರಶೇಖರಯ್ಯ ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ಈ ವೇಳೆ ಕೃಷ್ಣಪ್ಪ, ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಭಾಷಣಕಾರರಾಗಿ ಗೀತಾಂಜಲಿ, ಪಾರ್ವತಿ, ಶಶಾಂಕ, ಮತ್ತು ಹೇಮಾ ಎಸ್ ಗುಪ್ತ ಕನ್ನಡ ಹಿಂದಿ, ಇಂಗ್ಲೀಷ್‌ನಲ್ಲಿ ಮಾತನಾಡಿದರು. ಅಧ್ಯಾಪಕ ಮಲ್ಲಿಕಾರ್ಜುನ್ ಸ್ವಾಗತಿಸಿ ನಿರೂಪಿಸಿದರು.