ಸಾರಾಂಶ
ಧಾರವಾಡ: ಯಾರಲ್ಲಿ ಒಳ್ಳೆಯ ಶಿಕ್ಷಣ ಹಾಗೂ ಪ್ರಾಮಾಣಿಕತೆ ಇರುತ್ತದೆಯೋ ಅವರಿಗೆ ಭವಿಷ್ಯದಲ್ಲಿ ಗೌರವಯುತ ಸ್ಥಾನ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಲೆಲ್ಸಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿ ಗುರಿ ತಲುಪಲು ಜಿಲ್ಲಾಧಿಕಾರಿ ದಿವ್ಯಪ್ರಭು ಸಲಹೆ ನೀಡಿದರು.
ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್, ಗುರುದೇವ ಪಿಯು ಕಾಲೇಜು, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಜಂಟಿಯಾಗಿ ಸೋಮವಾರ ಇಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಂಭ್ರಮ ಪ್ರೇರಣಾ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.ಎಸ್ಸೆಸ್ಸೆಲ್ಸಿ ಹಂತವು ಪ್ರತಿ ವಿದ್ಯಾರ್ಥಿಗಳಲ್ಲಿ ಬದಲಾವಣೆಯ ತಿರುವು ತರುವ ಹಾಗೂ ಜೀವನ ನಿರ್ಧರಿಸುವ ಮುಂದಿನ ಕಲಿಕೆಗೆ ಈ ಹಂತ ಅಡಿಪಾಯ. ನಾನು ಆರನೇ ತರಗತಿಯಲ್ಲಿಯೇ ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೆ. ಐಎಫ್‌ಎಸ್ ಪರೀಕ್ಷೆ ಪಾಸಾದರೂ ನನಗೆ ಖುಷಿ ಇರಲಿಲ್ಲ. ಅನೇಕ ಕಷ್ಟಗಳ ಮಧ್ಯೆಯೂ ಛಲ ಬಿಡದೇ ಎಲ್ಲವನ್ನು ಎದುರಿಸಿ ಐಎಎಸ್ ಮುಗಿಸಿ ಈಗ ನಿಮ್ಮ ಎದುರು ಜಿಲ್ಲಾಧಿಕಾರಿಗಳಾಗಿ ನಿಂತಿದ್ದೇನೆ ಎಂದು ಮಕ್ಕಳಿಗೆ ಪ್ರೇರಣಾತ್ಮಕವಾಗಿ ಮಾತನಾಡಿದರು.
ಮೆದುಳು ಸೂಪರ್ ಕಂಪ್ಯೂಟರ್ ಇದ್ದ ಹಾಗೆ. ಸಾಕಷ್ಟು ಸಾಮರ್ಥ್ಯ ಹೊಂದಿರುವ ಅದನ್ನು ಹಿಡಿತದಲ್ಲಿಟ್ಟುಕೊಂಡು, ಓದು-ಬರಹ ಹಾಗೂ ಜ್ಞಾನರ್ಜನೆಯ ಮೂಲಕ ನಿರಂತರ ಕೆಲಸ ಕೊಟ್ಟಾಗ ನಾವು ಇಟ್ಟ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಸುತ್ತಲಿನ ಜನರ ಮಾತುಗಳಿಗೆ ಕಿವಿಗೊಡದೇ ನಮ್ಮ ಗುರಿ ಕಡೆಗೆ ಮಾತ್ರ ಸ್ಪಷ್ಟ ನಿಲುವು ಇಟ್ಟುಕೊಂಡಿರಬೇಕು ಎಂದ ಅವರು, ಒಂದು ಅಧ್ಯಯನದ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಗಮನ ಹರಿಸುವ ಸಾಮರ್ಥ್ಯ 45 ನಿಮಿಷದಿಂದ ಮೂರು ನಿಮಿಷಕ್ಕೆ ಕುಗ್ಗಿದ್ದು ಯೋಗ ಜ್ಞಾನದ ಮೂಲಕ ಇದನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡಪ್ರಭ ಹುಬ್ಬಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ, ಶಿಕ್ಷಣ ಶಿಕ್ಷೆಯಾಗಬಾರದು. ಅದು ಸಂಭ್ರಮವಾಗಬೇಕು. ಮಕ್ಕಳಲ್ಲಿ ಮಾನಸಿಕ ಸದೃಢತೆ ಹೆಚ್ಚಿಸುವ ಉದ್ದೇಶದಿಂದ ಕನ್ನಡಪ್ರಭ ಈ ಕಾರ್ಯಾಗಾರವನ್ನು ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸುತ್ತಿದೆ. ಫಲಿತಾಂಶ ಹೆಚ್ಚಿಸಲು ಹಾಗೂ ಮಕ್ಕಳಲ್ಲಿ ಓದಿನ ಹರವು ಹೆಚ್ಚಿಸಲು ಕಾರ್ಯಾಗಾರ ಮಾತ್ರವಲ್ಲದೇ, ಪತ್ರಿಕೆಯು ಯುವ ಆವೃತ್ತಿಯನ್ನು ಹೊರತಂದಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ವಿಷಯವಾರು ತಜ್ಞರ ಅಂಕಣಗಳನ್ನು ಪ್ರಕಟಿಸುವ ಮೂಲಕ ವಿದ್ಯಾರ್ಥಿ ಸ್ವಯಂ ಕಲಿಕೆಯಲ್ಲಿ ತೊಡಗುವಂತೆ ಮಾಡಲಾಗುತ್ತಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಓದಿನೊಂದಿಗೆ ಬರವಣಿಗೆ ಕೌಶಲ್ಯ ವೃದ್ಧಿಸಿಕೊಳ್ಳಬೇಕು.ನಿರಂತರ ಬರವಣಿಗೆಯಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಜತೆಗೆ ಏಕಾಗ್ರತೆ ಪಡೆಯಬಹುದು ಎಂದರು.ಅತಿಥಿಗಳಾಗಿದ್ದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ಯೋಜನಾಧಿಕಾರಿ ಎಸ್.ಎಂ.ಹುಡೇದಮನಿ, ಜಿ.ಎನ್. ಮಠಪತಿ, ಶಹರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂಧಗಿ ಇದ್ದರು. ಗುರುದೇವ ವಿಜ್ಞಾನ ಪಿಯು ಕಾಲೇಜು ಉಪ ಪ್ರಾಚಾರ್ಯ ಮಹಾಲಿಂಗ ಕಮತಿ ಹಾಗೂ ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಕಾರ್ಯಾಗಾರ ನಡೆಸಿಕೊಟ್ಟರು. ರವಿ ಕುಲಕರ್ಣಿ ನಿರೂಪಿಸಿದರು. ಕನ್ನಡಪ್ರಭ ಪ್ರಧಾನ ವರದಿಗಾರ ಬಸವರಾಜ ಹಿರೇಮಠ ಸ್ವಾಗತಿಸಿದರು. ಮುಖ್ಯ ವರದಿಗಾರ ಶಿವಾನಂದ ಗೊಂಬಿ ವಂದಿಸಿದರು. ಶಹರದ 10ಕ್ಕೂ ಹೆಚ್ಚು ಶಾಲೆಗಳ ಎಸ್ಸೆಸ್ಸೆಲ್ಸಿಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.
ವಿದ್ಯಾಕಾಶಿ ಖ್ಯಾತಿಯ ಧಾರವಾಡ ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 24ನೇ ಸ್ಥಾನದಲ್ಲಿದ್ದು, ಈ ವರ್ಷ ಮೊದಲ ಸ್ಥಾನಕ್ಕೇರಿಸಲು ಪಾಲಕರ, ಶಿಕ್ಷಕರ ಜತೆಗೆ ಮಾಧ್ಯಮಗಳು ಕೂಡ ಸಹಕರಿಸುತ್ತಿರುವುದು ಶ್ಲಾಘನೀಯ. ಓದು-ಬರಹವೇ ವಿದ್ಯಾರ್ಥಿಗಳ ಕಾಯಕ. ಆದ್ದರಿಂದ ಸಮಯಕ್ಕೆ ಸರಿಯಾಗಿ ಸಂತೋಷದ ಓದು ಇರಲಿ. ಶಿಕ್ಷಣ ಮತ್ತು ಬುತ್ತಿಯನ್ನು ಸರಿಯಾದ ಸಮಯಕ್ಕೆ ಉಪಯೋಗಿಸದಿದ್ದರೆ ಅದು ಹಾಳಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.